ಪ್ರಶಾಂತ್ ಸಂಬರ್ಗಿ (Prashanth Sambargi) ಇದ್ದಲ್ಲಿ ಕಿರಿಕ್ ಇದ್ದೇ ಇರುತ್ತದೆ. ಈ ಹಿಂದಿನ ಬಿಗ್ ಬಾಸ್ ಸೀಸನ್ನಲ್ಲಿ ಅವರು ಸಿಕ್ಕಾಪಟ್ಟೆ ಜಗಳ ಮಾಡಿಕೊಂಡಿದ್ದರು. ಈ ಬಾರಿ ಕೂಡ ಅದು ಮುಂದುವರಿದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ (Bigg Boss Kannada Season 9) ಸ್ಪರ್ಧಿಸುವ ಅವಕಾಶ ಪಡೆದಿರುವ ಅವರು ಒಂದಿಲ್ಲೊಂದು ಕಾರಣಕ್ಕೆ ರಾದ್ಧಾಂತ ಮಾಡುತ್ತಿದ್ದಾರೆ. ಅದು ಅವರ ಆಟದ ವೈಖರಿ ಎಂದು ಎಲ್ಲರೂ ಸುಮ್ಮನಾಗಿದ್ದರು. ಆದರೆ ಈಗ ಪ್ರಶಾಂತ್ ಸಂಬರ್ಗಿ ಅವರು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ರೂಪೇಶ್ ರಾಜಣ್ಣ (Rupesh Rajanna) ಬಗ್ಗೆ ಮಾತನಾಡುವಾಗ ಪ್ರಶಾಂತ್ ಅವರು ಅವಹೇಳನಕಾರಿಯಾಗಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ. ಅಲ್ಲದೇ, ಬಿಗ್ ಬಾಸ್ ಶೋ ವಿರುದ್ಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಕಾಮನ್. ಆದರೆ ಹೊರಗಿನ ವ್ಯಕ್ತಿ, ಸಂಸ್ಥೆ ಅಥವಾ ಸಂಘಟನೆಗಳ ಬಗ್ಗೆ ಸ್ಪರ್ಧಿಗಳು ಆಕ್ಷೇಪಾರ್ಹವಾಗಿ ಮಾತನಾಡಿದಾಗ ದೊಡ್ಮನೆ ಆಚೆಗೂ ವಿವಾದದ ಕಿಡಿ ಹೊತ್ತಿಕೊಳ್ಳುತ್ತದೆ. ಕನ್ನಡಪರ ಹೋರಾಟದ ಮೂಲಕ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅವರು ಈ ಬಾರಿಯ ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಪ್ರಶಾಂತ್ ಸಂಬರ್ಗಿ ಟಾರ್ಗೆಟ್ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಯಾರೂ ಕಿರಿಕ್ ಮಾಡುತ್ತಿರಲಿಲ್ಲ. ಆದರೆ ಎಲ್ಲ ಕನ್ನಡಪರ ಹೋರಾಟಗಾರರ ಕುರಿತು ಮಾತನಾಡುವಾಗ ಪ್ರಶಾಂತ್ ಸಂಬರ್ಗಿ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ.
ಪ್ರಶಾಂತ್ ಸಂಬರ್ಗಿ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಹೊರಗೆ ಕಳಿಸದೇ ಇದ್ದರೆ ಪ್ರತಿಭಟನೆಯ ಕಾವು ತೀವ್ರಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಬಿಗ್ ಬಾಸ್ ಸಿಬ್ಬಂದಿ ಜೊತೆಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಪ್ರಸಾರ ಆಗುತ್ತಿದೆ. ಕಿಚ್ಚ ಸುದೀಪ್ ಅವರು ಇದರ ನಿರೂಪಣೆ ಮಾಡುತ್ತಿದ್ದಾರೆ. ಹೊಸ ಸ್ಪರ್ಧಿಗಳ ಜೊತೆ ಹಳಬರಿಗೂ ಈ ಬಾರಿ ಅವಕಾಶ ನೀಡಲಾಗಿದೆ. ಪ್ರಶಾಂತ್ ಸಂಬರ್ಗಿ ಕೂಡ ಹಳೇ ಸ್ಪರ್ಧಿ. ಅವರು ಮಾತನಾಡುವ ರೀತಿ ಅನೇಕರಿಗೆ ಇಷ್ಟ ಆಗುವುದಿಲ್ಲ. ಅದನ್ನು ಹಲವು ಬಾರಿ ಕೆಲವರು ನೇರವಾಗಿ ಹೇಳಿದ್ದುಂಟು. ಆದರೆ ಇಷ್ಟು ದಿನ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿದ್ದ ಅವರ ಕಿರಿಕ್ ಈಗ ಮನೆಯಾಚೆಗೂ ಕಿಡಿ ಹೊತ್ತಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.