ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಪಲ್ಲವಿ ಡೇ (Pallavi Dey) ಅವರು ನಿಧನರಾಗಿದ್ದಾರೆ. ಅನುಮಾನಾಸ್ಪದ ರೀತಿಯಲ್ಲಿ ಅವರ ಸಾವು ಸಂಭವಿಸಿದೆ. ಬೆಂಗಾಲಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸುವ ಮೂಲಕ ಮನೆಮಾತಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪಲ್ಲವಿ ಡೇ ಸಾವಿನ (Pallavi Dey Death) ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಆಪ್ತರಿಗೆ ದಿಕ್ಕೇ ತೋಚದಂತಾಗಿದೆ. ದಕ್ಷಿಣ ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಪಲ್ಲವಿ ಡೇ ಅವರು ವಾಸವಾಗಿದ್ದರು. ಶನಿವಾರ (ಮೇ 14) ರಾತ್ರಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಪ್ರಿಯಕರ ಶಾಗ್ನಿಕ್ ಚರ್ಕವರ್ತಿ ಜೊತೆಗೆ ಪಲ್ಲವಿ ಡೇ ವಾಸವಾಗಿದ್ದರು. ಹಾಗಾಗಿ ಅವರ ಮೇಲೆ ಈಗ ಅನುಮಾನ ಮೂಡುವಂತಾಗಿದೆ. ಪಲ್ಲವಿ ಡೇ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಕೆಲವರು ಶಂಕಿಸಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪಲ್ಲವಿ ಡೇ ಸಾವಿಗೆ ಕಾರಣ ಏನು ಎಂಬುದು ತಿಳಿದುಬರಬೇಕಿದೆ. ಅವರ ಅಕಾಲಿಕ ಮರಣಕ್ಕೆ ಅಭಿಮಾನಿಗಳು, ಆಪ್ತರು ಸಂತಾಪ ಸೂಚಿಸುತ್ತಿದ್ದಾರೆ. ಪಲ್ಲವಿ ಡೇ ಕುಟುಂಬದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣ ಆಗಿದೆ.
‘ಮೋನ್ ಮಾನೆ ನಾ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಪಲ್ಲವಿ ಡೇ ನಟಿಸಿದ್ದರು. ಅವರದ್ದು ಆತ್ಮಹತ್ಯೆ ಅಲ್ಲ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಪಲ್ಲವಿ ಜತೆ ವಾಸಿಸುತ್ತಿದ್ದ ಶಾಗ್ನಿಕ್ ಚರ್ಕವರ್ತಿ ಅವರು ಸಿಗರೇಟ್ ತರಲು ಮನೆಯಿಂದ ಹೊರಗೆ ಹೋಗಿದ್ದರು. ಅವರು ವಾಪಸ್ ಬರುವುದರೊಳಗೆ ಪಲ್ಲವಿ ಡೇ ನೇಣು ಬಿಗಿದುಕೊಂಡರು. ಅವರ ಶವವನ್ನು ಮೊದಲ ಬಾರಿಗೆ ನೋಡಿದ್ದು ಶಾಗ್ನಿಕ್ ಚರ್ಕವರ್ತಿ. ಇಬ್ಬರ ನಡುವೆ ಏನಾದರೂ ಮನಸ್ತಾಪ ಇತ್ತ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪಲ್ಲವಿ ಡೇ ಮತ್ತು ಶಾಗ್ನಿಕ್ ಚರ್ಕವರ್ತಿ ಸಂಬಂಧದ ಬಗ್ಗೆ ಪಲ್ಲವಿ ಪೋಷಕರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ‘ಅವರಿಬ್ಬರು ಜೊತೆಯಾಗಿ ವಾಸಿಸುತ್ತಿರುವುದರ ಬಗ್ಗೆ ನಮಗೆ ಒಪ್ಪಿಗೆ ಇರಲಿಲ್ಲ. ಆದರೂ ಅವರು ಪ್ರಬುದ್ಧರು ಎಂಬ ಕಾರಣಕ್ಕೆ ಒಪ್ಪಿಗೆ ನೀಡಿದ್ದೆವು. ಬೇರೆ ಮನೆಯಲ್ಲಿ ವಾಸವಾಗಿರು ಎಂದು ನಾವು ಶಾಗ್ನಿಕ್ ಚರ್ಕವರ್ತಿಗೆ ಕೆಲವು ಬಾರಿ ಹೇಳಿದ್ದೆವು. ಇಬ್ಬರ ನಡುವೆ ಯಾವುದೇ ದೊಡ್ಡ ಸಮಸ್ಯೆ ಇರಲಿಲ್ಲ. ನಂತರ ಏನಾಯಿತೋ ಗೊತ್ತಿಲ್ಲ’ ಎಂದು ಪಲ್ಲವಿ ಡೇ ತಾಯಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:43 am, Mon, 16 May 22