
ಬಿಗ್ಬಾಸ್ ಕನ್ನಡ ಸೀಸನ್ 13 ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಕರ್ನಾಟಕದ ಅತಿ ಜನಪ್ರಿಯ ರಿಯಾಲಿಟಿ ಶೋ ಇದಾಗಿದೆ. ಈ ಹಿಂದೆ ಕೆಲ ಬಾರಿ ಬಿಗ್ಬಾಸ್ ಶೋ ಸರ್ಕಾರದ ಕೆಂಗಣ್ಣಿಗೆ ಗುರಿ ಆಗಿತ್ತು. ವಿಶೇಷವಾಗಿ ಕಳೆದ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಳೆದ ನಿರ್ಧಾರದಿಂದಾಗಿ ಸ್ಪರ್ಧಿಗಳೆಲ್ಲ ಶೋ ಬಿಟ್ಟು ಬರಬೇಕಾಗಿತ್ತು ಹಾಗೂ ಬಿಗ್ಬಾಸ್ ಮನೆಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿತ್ತು. ಸುದೀಪ್ ಹಾಗೂ ಇತರರ ಸಹಾಯದಿಂದ ಶೋ ಮತ್ತೆ ಪುನರಾರಂಭ ಆಯ್ತು. ಈ ಬಾರಿಯೂ ಸಹ ಬಿಗ್ಬಾಸ್ ಮನೆಗೆ ಸರ್ಕಾರದ ನಿಯಮಗಳ ಜಂಜಡ ಇತ್ತು. ಇತ್ತೀಚೆಗಷ್ಟೆ ಮಾತನಾಡಿದ್ದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಾಮಲಿಂಗಾರೆಡ್ಡಿ ‘ಬಿಗ್ಬಾಸ್ನವರು ಇನ್ನೂ ಅನುಮತಿ ಕೇಳಿಲ್ಲ, ಕೇಳಿದರೆ ನೋಡೋಣ’ ಎಂದಿದ್ದರು. ಆದರೆ ಇದೀಗ ಬಿಗ್ಬಾಸ್ ಶೋಗೆ ಅನುಮತಿ ದೊರೆತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ನ ಒಳಭಾಗದಲ್ಲಿ ಬಿಗ್ಬಾಸ್ ಮನೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಕರ್ನಾಟಕ ರಾಜ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಬಿಗ್ಬಾಸ್ ಆಯೋಜಕರಿಗೆ ‘ಕನ್ಸೆಂಟ್ ಫಾರ್ ಆಪರೇಷನ್ಸ್ (ಪ್ರಕ್ರಿಯೆ ನಡೆಸಲು ಅನುಮತಿ) ಬಿಗ್ಬಾಸ್ ಆಯೋಜಕರಿಗೆ ದೊರೆತಿದೆ. ಈ ಮೂಲಕ ಈ ಬಾರಿ ಯಾವುದೇ ಸಮಸ್ಯೆಗಳಿಲ್ಲದೆ ಬಿಗ್ಬಾಸ್ ಶೋ ನಡೆಯುವುದು ಸಾಧ್ಯವಾಗಲಿದೆ.
ಇದನ್ನೂ ಓದಿ:ಬಿಗ್ಬಾಸ್ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಕಳೆದ ಸೀಸನ್ನಲ್ಲಿ ಜಾಲಿವುಡ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ನೊಟೀಸ್ ನೀಡಿ ಸ್ಟುಡಿಯೋ ಅನ್ನು ಬಂದ್ ಮಾಡಿಸಿತ್ತು. ನೇರವಾಗಿ ಬಿಗ್ಬಾಸ್ ಮೇಲಾಗಲಿ, ಬಿಗ್ಬಾಸ್ ಮನೆಯಿಂದ ನಿಯಮಗಳ ಉಲ್ಲಂಘನೆ ಬಗ್ಗೆ ಆಗಲಿ ದೂರು ಇರಲಿಲ್ಲವಾದರೂ ಜಾಲಿವುಡ್ ಬಂದ್ ಮಾಡಿದ್ದ ಕಾರಣ ಬಿಗ್ಬಾಸ್ ಶೋ ಅನ್ನು ಸಹ ಒಂದು ದಿನದ ಮಟ್ಟಿಗೆ ನಿಲ್ಲಿಸಬೇಕಾಗಿತ್ತು. ಆದರೆ ಸುದೀಪ್ ಅವರು ಆಗ ಡಿಸಿಎಂ ಆಗಿದ್ದ ಶಿವರಾಜ್ ಕುಮಾರ್ ಅವರ ಬಳಿ ಮನವಿ ಮಾಡಿ ಬಿಗ್ಬಾಸ್ ಶೋ ಶೂಟಿಂಗ್ಗೆ ಅನುಮತಿ ಕೊಡಿಸಿದ್ದರು. ಕೇವಲ ಬಿಗ್ಬಾಸ್ ಸ್ಪರ್ಧಿಗಳು ಮತ್ತು ತಂತ್ರಜ್ಞರನ್ನು ಮಾತ್ರವೇ ಸ್ಟುಡಿಯೋ ಒಳಗೆ ಬಿಡಲಾಗಿತ್ತು.
ಆದರೆ ಈ ಬಾರಿ ಆ ರೀತಿಯ ಯಾವುದೇ ಸಮಸ್ಯೆ ಶೋಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮುಂಚಿತವಾಗಿ ಅಗತ್ಯ ಅನುಮತಿಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿಯೇ ಈಗ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ.
ಬಿಗ್ಬಾಸ್ ಕನ್ನಡ ಸೀಸನ್ 13 ನಾಳೆ (ಭಾನುವಾರ) ಆರಂಭ ಆಗಲಿದೆ. ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ, ಕೆಲ ಮೂಲಗಳ ಪ್ರಕಾರ ಸುಮಾರು 20 ಮಂದಿ ಸ್ಪರ್ಧಿಗಳು ಈ ಬಾರಿ ಬಿಗ್ಬಾಸ್ ಮನೆ ಸೇರಲಿದ್ದಾರಂತೆ. ಕೆಲವರ ಹೆಸರುಗಳು ಈಗಾಗಲೇ ಬಹಿರಂಗ ಸಹ ಆಗಿದೆ. ನಾಳೆ ಸಂಜೆ ಏಳು ಗಂಟೆಗೆ ಅಧಿಕೃತವಾಗಿ ಶೋ ಆರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Sat, 5 September 26