
ಬಿಗ್ಬಾಸ್ ಕನ್ನಡ ಸೀಸನ್ 13 ನಿರೀಕ್ಷೆಯಂತೆ ಅದ್ಧೂರಿಯಾಗಿ ಆರಂಭವಾಗಿದೆ. ಸುದೀಪ್ ಅವರು ಈ ಬಾರಿಯ ಹೊಸ ಮನೆಯನ್ನು, ಅದರ ವಿನ್ಯಾಸವನ್ನು ಪ್ರೇಕ್ಷಕರಿಗೆ ತೋರಿಸುವ ಮೂಲಕ ಹೊಸ ಸೀಸನ್ಗೆ ಆರಂಭ ನೀಡಿದರು. ಈ ಸೀಸನ್ನ ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೆಲ್ 3’ ಸಿನಿಮಾದ ಹಾಸ್ಯ ನಟ ‘ಜಗ್ಗು ಮಮ್ಮಿ’ ಎಂಟ್ರಿ ಕೊಟ್ಟರು. ಜಗದೀಶ್ ಅವರು ನಟಿಸಿರುವ ಒಂದೇ ಸಿನಿಮಾನಲ್ಲಿ ಅಷ್ಟರಲ್ಲೇ ಅವರಿಗೆ ಬಿಗ್ಬಾಸ್ನಲ್ಲಿ ಭಾಗಿ ಆಗುವ ಅವಕಾಶ ದೊರಕಿದೆ. ಬಿಗ್ಬಾಸ್ ವೇದಿಕೆಗೆ ಬಂದು ಜಗ್ಗು ಅವರಿಗೆ ಸುದೀಪ್ ಅವರು ಆರಂಭದಲ್ಲಿ ಸಖತ್ ಶಾಕ್ ಕೊಟ್ಟರು ಆದರೆ ಅದರ ಜೊತೆಗೆ ಆತ್ಮವಿಶ್ವಾಸವನ್ನೂ ತುಂಬಿದರು.
ಜಗ್ಗು ಮಮ್ಮಿ ಅವರು ವೇದಿಕೆಗೆ ಬರುತ್ತಿದ್ದಂತೆ, ತುಸು ನರ್ವಸ್ ಆಗಿಯೇ ಸುದೀಪ್ ಅವರೊಟ್ಟಿಗೆ ಮಾತನಾಡುತ್ತಾ, ‘ನಮ್ಮೂರಿನ ಜನ ನಿಮ್ಮ ಅಭಿಮಾನಿಗಳು, ಅವರಿಗೆ ಒಮ್ಮೆ ಹಾಯ್ ಹೇಳಿ’ ಎಂದರು. ಸುದೀಪ್ ಅವರು ತಕ್ಷಣವೆ ತುಸು ಗಂಭೀರವಾಗಿ, ‘ನೀವು ನಿಯಮ ಮುರಿದಿದ್ದೀರಿ, ಬಿಗ್ಬಾಸ್ಗೆ ಬರುವುದನ್ನು ಯಾರಿಗೂ ಹೇಳುವಂತಿಲ್ಲ ಆದರೆ ನೀವು ಇಡೀ ಊರಿನವರಿಗೆ ಹೇಳಿದ್ದೀರಲ್ಲ, ನಿಯಮ ಮುರಿದಿರುವ ನಿಮ್ಮನ್ನು ವಾಪಸ್ ಕಳಿಸುತ್ತೇವೆ’ ಎಂದರು. ಸುದೀಪ್ ಅವರು ಗಂಭೀರವಾಗಿ ಹೇಳಿದ್ದು ಕೇಳಿ ಜಗ್ಗು ಗಾಬರಿಯಾಗಿ ನಿಂತುಬಿಟ್ಟರು.
ಆಗ ಸುದೀಪ್ ಅವರು, ನೀವು ಜನರೊಟ್ಟಿಗೆ ಮಾತನಾಡಿ ಅವರನ್ನು ಒಪ್ಪಿಸಿ, ಅವರು ಒಪ್ಪಿಸಿದರೆ ಒಳಗೆ ಕಳಿಸುವೆ ಎಂದರು. ಆದರೆ ಸುದೀಪ್ ಅವರು, ಜಗ್ಗುಗೆ ಕಾಣದಂತೆ ಜನರಿಗೆ ‘ಆಗಲ್ಲ ಎಂದು ಹೇಳಿ’ ಎನ್ನುವಂತೆ ಸಜ್ಞೆ ಮಾಡಿದರು. ಜಗ್ಗು, ಧೈರ್ಯವನ್ನೆಲ್ಲ ಒಗ್ಗೂಡಿಸಿ ಜನರ ಬಳಿಕ ತಮಗೆ ಅನುಮತಿ ಕೊಡುವಂತೆ ಬೇಡಿಕೊಂಡರು ಆದರೆ ಜನ ಸುದೀಪ್ ಹೇಳಿದಂತೆ ಆಗಲ್ಲ ಎಂದರು. ಜಗ್ಗು ಗೆಳೆಯರು ಸಹ ಆಗಲ್ಲ ಎಂದರು. ಇದರಿಂದ ಜಗ್ಗು ಬಹಳ ಗಾಬರಿ ಆಗಿಬಿಟ್ಟರು. ಆದರೆ ಕೂಡಲೇ ಪರಿಸ್ಥಿತಿ ತಿಳಿ ಗೊಳಿಸಿದ ಸುದೀಪ್, ಜಗ್ಗು ಅವರ ವಿಟಿ ಪ್ರದರ್ಶಿಸಿದರು. ಆಗ ಜಗ್ಗುಗೆ ತುಸು ಜೀವ ಬಂದಂತಾಯ್ತು.
ಇದನ್ನೂ ಓದಿ:Bigg Boss Kannada: ಏರಡನೇ ಬಾರಿ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ನಿರ್ದೇಶಕ ಓಂ ಪ್ರಕಾಶ್ ರಾವ್
ಜಗ್ಗು, ತಾವು ಬಡವರು, ತಾವು ಗೆಳೆಯನ ಮದುವೆಯ ಉಡುಗೆ ಹಾಕಿಕೊಂಡು ಬಂದಿರುವುದಾಗಿ ಹೇಳಿದರು. ತಮ್ಮನ್ನು ‘ಹುಡುಗಿಯಂತೆ ಆಡುತ್ತಾನೆ’ ಎಂದು ಊರ ಜನ ಲೇವಡಿ ಮಾಡುತ್ತಾರೆಂದು ಬೇಸರದಿಂದ ಹೇಳಿಕೊಂಡರು. ಮನೆಯಲ್ಲಿ ಸಾಕಷ್ಟು ಕಷ್ಟಗಳಿದ್ದು, ಚಿನ್ನ ಅಡವಿಟ್ಟಿದ್ದೇನೆ, 2.50 ಲಕ್ಷ ಸಾಲ ಮಾಡಿದ್ದೇನೆ, ಇಲ್ಲಿ ಗೆದ್ದರೆ ಚಿನ್ನ ಬಿಡಿಸಿಕೊಳ್ಳುವೆ ಎಂದರು.
ಜಗ್ಗು ಅವರ ಮುಗ್ಧತೆಯನ್ನು ಗಮನಿಸಿದ ಸುದೀಪ್ ಅವರು, ಜಗ್ಗುಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದರು. ‘ನೀವು ಒಳಗೆ ಹೋದಾಗ ಯಾರೇ ಎದುರು ಸಿಕ್ಕರೂ, ‘ನಾನು ಜಗ್ಗು, ಸೀಸನ್ 13ರ ವಿನ್ನರ್’ ಎಂದೇ ನಿಮ್ಮನ್ನು ಪರಿಚಯಿಸಿಕೊಳ್ಳಿ’ ಎಂದು ಸಲಹೆ ನೀಡಿದರು. ಮಾತ್ರವಲ್ಲದೆ, ಸುದೀಪ್ ಅವರು ವೇದಿಕೆ ಮೇಲೆ ಜಗ್ಗು ಜೊತೆಗೆ ಮತ್ತೆ ಮತ್ತೆ ಅಭಿನಯಿಸಿ ಜಗ್ಗುಗೆ ರಿಹರ್ಸಲ್ ಸಹ ಮಾಡಿಸಿದರು. ಖುಷಿಯಿಂದ ಜಗ್ಗು ಅನ್ನು ಬೋರ್ಡಿಂಗ್ ಪಾಸ್ ಕೊಟ್ಟು ಕಳಿಸಿಕೊಟ್ಟರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ