
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಎಲ್ಲರ ಅಸಲಿ ಮುಖ ಬಯಲಾಗುತ್ತದೆ. ನಾಟಕ ಮಾಡಿಕೊಂಡು ಕೆಲವು ದಿನಗಳು ಮಾತ್ರ ಇರಬಹುದು. ಆದರೆ ಜಾಸ್ತಿ ದಿನ ನಾಟಕ ಮಾಡೋಕೆ ಆಗಲ್ಲ. ಪರಿಸ್ಥಿತಿ ಬದಲಾದಂತೆಲ್ಲ ಸ್ಪರ್ಧಿಗಳ ಮುಖವಾಡ ಕಳಚಿ ಬೀಳುತ್ತದೆ. ಈ ವಾರ ಕಿರಣ್ ಶಾಸ್ತ್ರಿ ಎಲ್ಲರ ಕಣ್ಣಿನಲ್ಲಿ ವಿಲನ್ ಆಗಿದ್ದಾರೆ. ಅವರ ಆಟದ ಶೈಲಿಗೆ ಬಹುತೇಕ ಎಲ್ಲರೂ ಕಿರಿಕಿರಿ ಅನುಭವಿಸಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರೀ ಇಡೀ ಸೀಸನ್ನ ಕಳಪೆ ಎಂದು ತಾಂಡವ್ ರಾಮ್ ಅವರು ಹೇಳಿದ್ದಾರೆ.
ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಕುಟುಂಬದವರ ಪತ್ರವನ್ನು ಪಡೆಯುವ ಅವಕಾಶ ನೀಡಲಾಗಿತ್ತು. ಆದರೆ ಆ ಪತ್ರ ಪಡೆಯಲು ಎಲ್ಲರೂ ಶ್ರಮವಹಿಸಿ ಟಾಸ್ಕ್ ಆಡಬೇಕಿತ್ತು. ಆ ವೇಳೆ ಕಿರಣ್ ಶಾಸ್ತ್ರಿ ಅವರು ಕಳ್ಳಾಟ ಆಡಿದ್ದರು. ಅದರಿಂದಾಗಿ ಬೇರೆ ಸ್ಪರ್ಧಿಯ ಪತ್ರ ನಷ್ಟ ಆಗಿತ್ತು. ಆಗ ಎಲ್ಲರೂ ಕಿರಣ್ ಶಾಸ್ತ್ರಿಯನ್ನು ಕಟುವಾಗಿ ಟೀಕಿಸಿದ್ದರು.
ಯಾರು ಎಷ್ಟೇ ಟೀಕಿಸಿದರೂ ಕಿರಣ್ ಶಾಸ್ತ್ರಿ ಬುದ್ಧಿ ಬದಲಾಗಲಿಲ್ಲ. ತಾನು ಬೇಕಂತಲೇ ಆ ರೀತಿ ನಡೆದುಕೊಂಡಿದ್ದು ಎಂಬುದನ್ನು ಭಂಡತನದಿಂದ ಘೋಷಿಸಿಕೊಂಡಿದ್ದರು. ಅಲ್ಲದೇ, ತಮ್ಮ ಸ್ವಾರ್ಥ ಬುದ್ಧಿಯೇ ಸರಿ ಎಂಬಂತೆ ಅವರು ವಾದ ಮಾಡಿದ್ದರು. ಆ ಘಟನೆ ಬಳಿಕ ಇಡೀ ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಿರಣ್ ಶಾಸ್ತ್ರಿ ಮೇಲೆ ಕೆಟ್ಟ ಅಭಿಪ್ರಾಯ ಮೂಡಿತು.
ಈಗಾಗಲೇ ಕಿರಣ್ ಶಾಸ್ತ್ರಿ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಅವರು ತಮ್ಮನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ದಿನದಿಂದ ದಿನಕ್ಕೆ ಸ್ವಾರ್ಥದ ಆಟವನ್ನು ಮುಂದುವರಿಸಿದ್ದಾರೆ. ಅಲ್ಲದೇ ಅವರಿಗೆ ಮಾತಿನ ಮೇಲೆ ಕೂಡ ನಿಗಾ ಇಲ್ಲ. ನವೆಂಬರ್ 5ರ ಸಂಚಿಕೆಯಲ್ಲಿ ಅವರು ಮಹಿಳಾ ಸ್ಪರ್ಧಿಗಳಿಗೆ ಬಾಡಿ ಶೇಮಿಂಗ್ ಮಾಡುವಂತೆ ಮಾತಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 13: ಕಳಪೆ ಪಟ್ಟ ಪಡೆದು ಜೈಲು ಸೇರಿದ ಕಿರಣ್ ಶಾಸ್ತ್ರಿ
ಊಟದ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಆಗಿದೆ. ‘ತಿಂದು ತಿಂದು ಮೈ ಬೆಳೆಸಿಕೊಂಡಿದ್ದೀಯ’ ಎಂದು ಕಿರಣ್ ಶಾಸ್ತ್ರಿ ಅವರು ಗಾನವಿಗೆ ಹೇಳಿದರು. ಆ ಮಾತಿನಿಂದ ಗಾನವಿ ಅವರಿಗೆ ಕೋಪ ಬಂತು. ಅಲ್ಲದೇ, ಸೌಂದರ್ಯಾ ಶೆಟ್ಟಿ ಅವರು ಕೂಡ ಈ ಮಾತನ್ನು ಖಂಡಿಸಿದರು. ಕಿರಣ್ ಶಾಸ್ತ್ರಿಯ ಮೋಸದ ಆಟವನ್ನು ತಾಂಡವ್ ರಾಮ್ ಅವರು ಪದೇಪದೇ ಖಂಡಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.