ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ಬಿಗ್ ಬಾಸ್ ರನ್ನರ್​​ಅಪ್​

ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನರ್ ಅಪ್ ತ್ರಿವಿಕ್ರಂ ಅವರಿಗೆ ಕಲರ್ಸ್ ಕನ್ನಡದ ಹೊಸ ಧಾರಾವಾಹಿ ‘ಮುದ್ದು ಸೊಸೆ’ಯಲ್ಲಿ ನಾಯಕನ ಪಾತ್ರ ದೊರೆತಿದೆ. ಬಿಗ್ ಬಾಸ್ ನಂತರ ಅವರಿಗೆ ಹಲವು ಅವಕಾಶಗಳು ಬಂದಿವೆ ಎಂದು ತಿಳಿದುಬಂದಿದೆ. ಈ ಧಾರಾವಾಹಿಯಲ್ಲಿ ವಿದ್ಯಾ ಎಂಬ ಹುಡುಗಿಯೊಂದಿಗೆ ಅವರ ಪ್ರೇಮಕಥೆ ಶುರುವಾಗುತ್ತದೆ. ತ್ರಿವಿಕ್ರಂ ಸದ್ಯ ಸಿಸಿಎಲ್ ನಲ್ಲೂ ತೊಡಗಿಸಿಕೊಂಡಿದ್ದಾರೆ.

ತ್ರಿವಿಕ್ರಂ ಪಾಲಿಗೆ ಒಲಿದ ಅದೃಷ್ಟ; ಹೊಸ ಸೀರಿಯಲ್​ಗೆ ಹೀರೋ ಆದ ಬಿಗ್ ಬಾಸ್ ರನ್ನರ್​​ಅಪ್​
ತ್ರಿವಿಕ್ರಂ ಹೊಸ ಧಾರಾವಾಹಿ

Updated on: Feb 24, 2025 | 7:28 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ರನ್ನರ್ ಅಪ್ ತ್ರಿವಿಕ್ರಂ ಅವರು ಒಂದೊಳ್ಳೆಯ ಅವಕಾಶಕ್ಕಾಗಿ ಕಾಯುತ್ತಾ ಇದ್ದರು. ‘ಬಿಗ್ ಬಾಸ್’ನಿಂದ ಬದುಕು ಬದಲಾಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಕೊನೆಗೂ ಅದು ನಿಜವಾಗಿದೆ. ಅವರಿಗೆ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸೋ ಅವಕಾಶ ಸಿಕ್ಕಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಭರ್ಜರಿ ಲೈಕ್ಸ್​ಗಳು ಸಿಕ್ಕಿವೆ. ಫ್ಯಾನ್ಸ್ ನಾನಾ ರೀತಿಯಲ್ಲಿ ಇದಕ್ಕೆ ಕಮೆಂಟ್ ಮಾಡುತ್ತಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿದ್ದ ‘ಪದ್ಮಾವತಿ’ ಹೆಸರಿನ ಸೀರಿಯಲ್​​ನಲ್ಲಿ ತ್ರಿವಿಕ್ರಂ ಅವರು ನಟಿಸಿದ್ದರು. ಇದರಲ್ಲಿ ಕಥಾ ನಾಯಕನ ಪಾತ್ರ ಮಾಡಿದ್ದರು. ಆ ಬಳಿಕ ಅವರಿಗೆ ಹೆಚ್ಚು ಆಫರ್​ಗಳು ಬಂದಿರಲಿಲ್ಲ. ಬಿಗ್ ಬಾಸ್​ಗೆ ಬಂದ ಬಳಿಕ ಸಿನಿಮಾ ಅಥವಾ ಸೀರಿಯಲ್​ಗಳಲ್ಲಿ ನಟಿಸೋಕೆ ಅವಕಾಶ ಸಿಗಬಹುದು ಎಂದು ಅವರು ಅಂದುಕೊಂಡಿದ್ದರು. ಅದು ನಿಜವಾಗಿದೆ.

ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಮುದ್ದು ಸೊಸೆ’ ಹೆಸರಿನ ಸೀರಿಯಲ್ ಪ್ರಸಾರ ಕಾಣಲಿದೆ. ಇದಕ್ಕೆ ತ್ರಿವಿಕ್ರಂ ಅವರು ಹೀರೋ ಆಗಿ ಆಯ್ಕೆ ಆಗಿದ್ದಾರೆ. ಕಥಾ ನಾಯಕಿ ವಿದ್ಯಾ ಇನ್ನೂ ಶಿಕ್ಷಣ ಪಡೆಯುತ್ತಿರುವ ಹುಡುಗಿ. ಸ್ಕೂಲ್​ನಲ್ಲಿ ಆಕೆಯೇ ನಂಬರ್ 1. ಒಂದಿನ ಅಜ್ಜಿಗೆ ಅನಾರೋಗ್ಯ ಆಗಿದೆ ಎಂದು ಆಕೆಯನ್ನು ಶಾಲೆಯಿಂದ ಕರೆಸುತ್ತಾರೆ. ಮನೆಗೆ ಬಂದು ನೋಡಿದರೆ ಹೆಣ್ಣು ನೋಡುವ ಶಾಸ್ತ್ರಕ್ಕೆ ತಯಾರಿ ನಡೆಯುತ್ತಾ ಇರುತ್ತದೆ.

ಇದನ್ನೂ ಓದಿ: ಬಿಗ್ ಬಾಸ್​ನಿಂದ ಹೊರ ಬಂದು ದೊಡ್ಡ ಸಿನಿಮಾ ಆಫರ್ ಪಡೆದ ಉಗ್ರಂ ಮಂಜು

ವಿದ್ಯಾನ ನೋಡೋಕೆ ಬರೋದು ಕಥಾ ನಾಯಕನ ಪಾತ್ರದಲ್ಲಿರೋ ತ್ರಿವಿಕ್ರಂ. ವಿದ್ಯಾಗೆ ಡಾಕ್ಟರ್ ಆಗಬೇಕು ಎಂಬ ಆಸೆ. ಆದರೆ, ಮದುವೆ ಬಳಿಕೆ ಆಕೆಯನ್ನು ಶಾಲೆಗೆ ಕಳಿಸೋದು ಬೇಡ ಎಂಬ ನಿರ್ಧಾರಕ್ಕೆ ಎಲ್ಲರೂ ಬರುತ್ತಾರೆ. ಮುಂದೇನಾಗುತ್ತದೆ ಎಂಬುದು ಧಾರಾವಾಹಿಯ ಕಥೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ ಧಾರಾವಾಹಿಯ ಪ್ರಸಾರ ದಿನಾಂಕದ ಬಗ್ಗೆ ವಿವರ ಸಿಗಲಿದೆ.

ಸದ್ಯ ತ್ರಿವಿಕ್ರಂ ಅವರು ‘ಸಿಸಿಎಲ್​​’ನಲ್ಲಿ ಬ್ಯುಸಿ ಇದ್ದಾರೆ. ಕ್ರಿಕೆಟ್ ಆಡುತ್ತಾ ಸಮಯ ಕಳೆಯುತ್ತಿದ್ದಾರೆ. ಶೀಘ್ರವೇ ಅವರು ಧಾರಾವಾಹಿ ಶೂಟ್​​ನಲ್ಲಿ ಬ್ಯುಸಿ ಆಗಲಿದ್ದಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.