ಬಿಗ್ಬಾಸ್ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ (Sudeep) ಸೇರಿದಂತೆ ಹಲವರು ತುಕಾಲಿ ಸಂತೋಶ್ರ ವರ್ತನೆ, ಮಾತು, ಹಾಸ್ಯದ ಬಗ್ಗೆ ತಕರಾರು ಎತ್ತಿದ್ದರು. ತುಕಾಲಿ ಸಂತೋಶ್ರ ಮಾತುಗಳು ವೈಯಕ್ತಿಕವಾಗಿ ಹರ್ಟ್ ಆಗುವಂತಿರುತ್ತವೆ, ಅವು ಹಾಸ್ಯಕ್ಕಿಂತಲೂ ಹೆಚ್ಚಾಗಿ ವ್ಯಂಗ್ಯವಾಗಿಯೂ ಹೀಗಳಿಕೆಯಂತಲೂ ಇರುತ್ತವೆ ಎಂದು ಕೆಲವರು ಹೇಳಿದ್ದರು. ಡ್ರೋನ್ ಪ್ರತಾಪ್ ವಿಷಯದಲ್ಲಿ ತುಕಾಲಿ ನಡೆದುಕೊಂಡ ರೀತಿ ಹಾಗೆಯೇ ಇತ್ತು. ಆದರೆ ಎರಡನೇ ವಾರದ ಮೊದಲ ದಿನ ಈಶಾನಿ, ಹಠಾತ್ತನೆ ತುಕಾಲಿ ಸಂತು ವಿರುದ್ಧ ರೋಷಾವೇಷ ಪ್ರದರ್ಶಿಸಿದರು. ಇದು ಸ್ವತಃ ತುಕಾಲಿ ಸಂತುಗೆ ಆಶ್ಚರ್ಯ ಮೂಡಿಸಿತು.
ಯಾರು ನಾಮಿನೇಟ್ ಆಗಿದ್ದಾರೋ ಅವರನ್ನು ಉಳಿಸಲು ನಾಮಿನೇಟ್ ಆಗದವರು ಟಾಸ್ಕ್ ಒಂದನ್ನು ಮಾಡಬೇಕಿತ್ತು. ತುಕಾಲಿ ಪರವಾಗಿ ಟಾಸ್ಕ್ ಮಾಡಲು ರಕ್ಷಕ್ ಮುಂದೆ ಬಂದರು. ಎಳೆಯುವ ರಬ್ಬರ್ ಮಾದರಿಯ ವಸ್ತುವನ್ನು ಕಟ್ಟಿಕೊಂಡು ಅದರ ಹಿಂಬಲವನ್ನು ಮೀರಿ ಮುಂದೆ ಹೋಗಿ ಕಂಬವೊಂದನ್ನು ಹಿಡಿದು ನಿಲ್ಲುವ ಟಾಸ್ಕ್ ಅನ್ನು ನೀಡಲಾಯ್ತು. ಟಾಸ್ಕ್ ಆಡುತ್ತಿರುವರಿಗೆ ಅಡ್ಡಿ ಪಡಿಸುವ ಅವಕಾಶವನ್ನು ಬಿಗ್ಬಾಸ್ ಇತರ ಸದಸ್ಯರಿಗೆ ನೀಡಿದರು.
ಆಗ ಈಶಾನಿ, ಸಂತು ಪವಾಗಿ ಟಾಸ್ಕ್ ಆಡುತ್ತಿದ್ದ ರಕ್ಷಕ್ಗೆ ಮೊದಲು ನೀರು ಹಾಕಿದರು. ಆದರೂ ರಕ್ಷಕ್ ಕೈ ಬಿಡಲಿಲ್ಲ. ಬಳಿಕ ಈಶಾನಿ, ಸಂತು ವಿರುದ್ಧವಾಗಿ ಚುಚ್ಚು ಮಾತುಗಳನ್ನು, ಚಾಡಿ ಮಾತುಗಳನ್ನು ರಕ್ಷಕ್ ಬಳಿ ಹೇಳಲು ಆರಂಭಿಸಿದರು. ಅವನು ಸರಿಯಾದ ವ್ಯಕ್ತಿಯಲ್ಲ, ನಿನ್ನ ಬಗ್ಗೆಯೂ ಅವನು ಕೆಟ್ಟದಾಗಿ ಮಾತನಾಡಿದ್ದಾನೆ. ಅಂಥಹವನ ಪರವಾಗಿ ನೀನು ನಿಂತಿದ್ದೀಯ ನಾಚಿಕೆಯಾಗುವುದಿಲ್ಲವಾ ಎಂದೆಲ್ಲ ರಕ್ಷಕ್ ಗೆ ಹೇಳಿದಳು. ಈ ಸಮಯದಲ್ಲಿ ರಕ್ಷಕ್ರ ತಂದೆಯ ಮಾತೂ ಸಹ ಬಂತು.
ಇದನ್ನೂ ಓದಿ:ಹರಕೆ ಕುರಿಯಂತಾಗಿದ್ದ ಡ್ರೋನ್ ಪ್ರತಾಪ್ ಬೆಂಬಲಕ್ಕೆ ನಿಂತ ಸುದೀಪ್, ಕ್ಷಮೆ ಕೇಳಿದ ಸಂತೋಶ್
ಬಳಿಕ ಸಂತು ಈಶಾನಿ ಮೇಲೆ ತುಸು ಸಿಟ್ಟಾದ. ಆಗ ಒಮ್ಮೆಲೆ ತೀವ್ರವಾಗಿ ಸಿಟ್ಟಾದ ಈಶಾನಿ, ಸಂತುಗೆ ಕೆಟ್ಟದಾಗಿ ಬೈಯ್ಯಲು ಪ್ರಾರಂಭಿಸಿದರು. ಅವನು ನಿಜವಾದ ಗಂಡಸೇ ಅಲ್ಲ, ಥೂ ಅಸಹ್ಯ, ಏ ಹೋಗೋ ಇಲ್ಲಿಂದ ಎಂದು ಜೋರು ಧ್ವನಿಯಲ್ಲಿ ಸಂತು ವಿರುದ್ಧ ಕೂಗಲು ಆರಂಭಿಸಿದರು. ಈಶಾನಿಯವರನ್ನು ಮನೆಯ ಕೆಲ ಸದಸ್ಯರು ಪಕ್ಕಕ್ಕೆ ಕರೆದುಕೊಂಡು ಹೋಗಿ ಸಮಾಧಾನ ಮಾಡಿದರು. ಮಾತನ್ನು ಹಿಡಿದಲ್ಲಿಟ್ಟುಕೊಂಡು ಹೋರಾಡುವಂತೆ ಹೇಳಿದರು.
ಬಳಿಕ ಮತ್ತೆ ರಕ್ಷಕ್ ಬಳಿ ಬಂದ ಈಶಾನಿ, ನೀರನ್ನು ರಕ್ಷಕ್ ಮೇಲೆ ಚೆಲ್ಲುತ್ತಾ ಭಾವುಕರಾಗಿ ಬಿಟ್ಟರು. ಅಳುತ್ತಾ, ನೀನು ನನ್ನ ತಮ್ಮನಿದ್ದಂತೆ ಅವನಂಥಹಾ ವ್ಯಕ್ತಿಯ ಪರವಾಗಿ ನೀನು ನಿಲ್ಲಬೇಡ, ಇದಕ್ಕಿಂತಲೂ ಹೆಚ್ಚಿನದನ್ನು ನಾನು ಹೇಳಲಾರೆ ಎಂದರು. ಆದರೂ ರಕ್ಷಕ್ ತಮ್ಮ ಕೈ ಬಿಡಲಿಲ್ಲ. ಆದರೆ ಕೆಲವು ಸಮಯದ ಬಳಿಕ ಸುಸ್ತಾಗಿ ಕೈ ಬಿಟ್ಟರು. ರಕ್ಷಕ್ ಚೆನ್ನಾಗಿಯೇ ಆಡಿದರಾದರೂ ಅವರ ಸ್ಪರ್ಧಿಗಳಾಗಿದ್ದ ಕಾರ್ತಿಕ್ ಹಾಗೂ ವಿನಯ್ ಬಹಳ ಗಟ್ಟಿ ಮುಟ್ಟಾದ ವ್ಯಕ್ತಿಗಳಾದ ಕಾರಣ ರಕ್ಷಕ್ ಸೋಲಲೇ ಬೇಕಾಯ್ತು. ಆ ಮೂಲಕ ತುಕಾಲಿ ಸಂತೋಶ್ ನಾಮಿನೇಷನ್ನಿಂದ ತಪ್ಪಿಸಿಕೊಳ್ಳದೆ ಮುಂದುವರೆದರು.
ಟಾಸ್ಕ್ ಎಲ್ಲ ಮುಗಿದ ಬಳಿಕ ತುಕಾಲಿ ಸಂತೋಶ್, ಗೌರೀಶ್ ಅಕ್ಕಿ, ನಮ್ರತಾ ಇನ್ನಿತರರನ್ನು ಸೇರಿಸಿಕೊಂಡು ಈಶಾನಿ ಬಳಿ ಮಾತನಾಡಿ, ಕಾಂಪ್ರೊಮೈಸ್ ಆಗಲು ಪ್ರಯತ್ನಿಸಿದರು. ಈಶಾನಿ ಸಹ ಎಲ್ಲವನ್ನೂ ಮರೆತು ಮುಂದಕ್ಕೆ ಹೋಗೋಣವೆಂದು ಪರಸ್ಪರ ಕೈ-ಕೈ ಕುಲುಕಿದರು. ಬಿಗ್ಬಾಸ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್ನಲ್ಲಿ ಪ್ರತಿ ದಿನ 24 ಗಂಟೆ ನೇರ ಪ್ರಸಾರವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 pm, Mon, 16 October 23