ಬಿಗ್ಬಾಸ್ (BiggBoss) ಮನೆಯಲ್ಲಿ ಸ್ಪರ್ಧಿಗಳ ನಡುವೆ ಸಂಬಂಧಗಳಿಗೆ ಪರಸ್ಪರರ ಬಗೆಗಿನ ಅಭಿಪ್ರಾಯಗಳಿಗೆ ಆಯಸ್ಸು ಬಹಳ ಕಡಿಮೆ. ಒಬ್ಬರನ್ನೊಬ್ಬರು ಗುದ್ದಿ ಕೆಡವುಷ್ಟು ಕೋಪ, ಸಿಟ್ಟು ಹೊಂದಿರುವವರು ಸಹ ಇನ್ನೊಂದು ಟಾಸ್ಕ್ನಲ್ಲಿ ಒಬ್ಬರ ಕೈ ಇನ್ನೊಬ್ಬರು ಹಿಡಿದು ಒಟ್ಟಿಗೆ ಆಡಬೇಕಾಗುತ್ತದೆ. ಆದರೆ ಈ ಬಿಗ್ಬಾಸ್ ಸೀಸನ್ನಲ್ಲಿ ಈ ದ್ವೇಷ-ಪ್ರೀತಿಯ ಆಟ ತುಸು ಗಾಢವಾಗಿಯೇ ಇತ್ತು. ಆರಂಭದಿಂದಲೂ ವಿನಯ್ ಹಾಗೂ ಸಂಗೀತಾ, ವಿನಯ್ ಹಾಗೂ ಡ್ರೋನ್ ನಡುವೆ ಜಗಳ, ವೈಷಮ್ಯ ನಡೆಯುತ್ತಲೇ ಇತ್ತು. ಆದರೆ ಫಿನಾಲೆ ಹಂತಕ್ಕೆ ಬಂದಾಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.
ಯಾವುದು ಏನೇ ಆದರೂ ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗುವುದಿಲ್ಲ, ವಿನಯ್ ಹಾಗೂ ಡ್ರೋನ್ ಪ್ರತಾಪ್ ಸಹ ಗೆಳೆಯರಾಗುವುದಿಲ್ಲ. ಒಬ್ಬರನ್ನು ನೋಡಿ ಒಬ್ಬರು ನಗುವುದಿಲ್ಲ ಎಂದೇ ಪ್ರೇಕ್ಷಕರು ಊಹಿಸಿದ್ದರು. ಹಾಗೆ ಊಹಿಸಲು ಪ್ರೇರೇಪಿಸುವ ಹಲವು ಇಂಟೆನ್ಸ್ ಆದ ಘಟನೆಗಳು, ಜಗಳಗಳು ಇವರ ನಡುವೆ ನಡೆದಿದ್ದವು. ಆದರೆ ಈಗ ಎಲ್ಲ ಬದಲಾಗಿದೆ.
ಈ ವಾರದ ಟಾಸ್ಕ್ ಆರಂಭವಾದಾಗಲೂ ಸಹ ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ಜೋರಾದ ಜಗಳವಾಗಿತ್ತು. ಕಳೆದ ಕೆಲ ವಾರದಿಂದ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಕೋಪವನ್ನು ಈ ವಾರದ ಮೊದಲಲ್ಲೇ ಡ್ರೋನ್ ಪ್ರತಾಪ್ ಮೇಲೆ ಹರಿಬಿಟ್ಟಿದ್ದರು ವಿನಯ್. ಡ್ರೋನ್ ಪ್ರತಾಪ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದರು. ಪ್ರತಾಪ್ ಸಹ ವಿನಯ್ ವಿರುದ್ಧ ಸತತ ಆರೋಪಗಳನ್ನು ಮಾಡಿದ್ದರು. ಇಬ್ಬರಿಗೂ ಸಹ ಇದು ಹೊಸತಲ್ಲ. ಆದರೆ ತಮ್ಮ ಅಗ್ರೆಶನ್ನಿಂದ ತಮಗೆ ಹಿನ್ನೆಡೆ ಆಗುತ್ತಿದೆ ಎಂಬುದನ್ನು ಅರಿತಿರುವ ವಿನಯ್, ಪ್ರತಾಪ್ಗೆ ಕ್ಷಮೆ ಕೇಳಿದರು. ಮಾತ್ರವಲ್ಲ, ಪ್ರತಾಪ್ ಜೊತೆ ಗೆಳೆತನ ಬೆಳೆಸಿ, ಇಷ್ಟು ದಿನಗಳಲ್ಲಿ ಎಂದಿಗೂ ಇಲ್ಲದ ಆತ್ಮೀಯತೆಯನ್ನು ತೋರುತ್ತಿದ್ದಾರೆ. ಪ್ರತಾಪ್ ಸಹ ಇದಕ್ಕೆ ಸ್ಪಂದಿಸುತ್ತಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ನಿಂದ ಹೊರಬಂದ ಮೈಖಲ್ ಹಾಕಿಕೊಂಡಿದ್ದಾರೆ ಹೊಸ ಯೋಜನೆಗಳು
ಬುಧವಾರದ ಎಪಿಸೋಡ್ನಲ್ಲಿ ವಿನಯ್ ಹಾಗೂ ಪ್ರತಾಪ್ ಪರಸ್ಪರ ಅಕ್ಕ-ಪಕ್ಕ ಮಲಗಿಕೊಂಡು ಜೋರಾಗಿ ನಗುತ್ತಾ ಮಾತನಾಡುತ್ತಿದ್ದರು. ಮನೆಯ ಸದಸ್ಯರ ಬಗ್ಗೆ ವಿನಯ್ ಏನೇನೋ ಜೋಕ್ಗಳನ್ನು ಹೇಳಿ ಪ್ರತಾಪ್ ಅನ್ನು ಬಹುವಾಗಿ ನಗಿಸಿದರು. ಡ್ರೋನ್ ಪ್ರತಾಪ್ ನಾಯಕತ್ವದ ಟಾಸ್ಕ್ ಬಂದಾಗಲೂ ಸಹ, ವಿನಯ್, ಪ್ರತಾಪ್ ಅನ್ನು ಆತ್ಮೀಯ ಗೆಳೆಯನಂತೆ ತಬ್ಬಿಕೊಂಡು ತಮಗೆ ಅವಕಾಶ ಕೊಡುವಂತೆ ಕೇಳಿಕೊಂಡರು. ಆ ಬಳಿಕ ಟಾಸ್ಕ್ ಅನ್ನು ಯಾರು ಗೆಲ್ಲುತ್ತಾರೆ ಎಂದು ಊಹಿಸುವಂತೆ ಬಿಗ್ಬಾಸ್ ಕೇಳಿದಾಗಲೂ ಸಹ ಪ್ರತಾಪ್ ಹೆಸರನ್ನೇ ಅವರು ತೆಗೆದುಕೊಂಡರು.
ಇನ್ನು ವಿನಯ್ ಹಾಗೂ ಸಂಗೀತಾ ಪರಸ್ಪರ ಗೆಳೆಯರಾಗಿ ಕೆಲ ವಾರಗಳೇ ಆಗಿವೆ. ಕಾರ್ತಿಕ್ ಜೊತೆ ಸ್ನೇಹ ಮುರಿದುಕೊಂಡಿರುವ ಸಂಗೀತಾ, ವಿನಯ್ ಜೊತೆ ತುಸು ಆತ್ಮೀಯರಾಗಿದ್ದಾರೆ. ಕಳೆದ ವೀಕೆಂಡ್ನಲ್ಲಿ ಮತ್ತೆ ಇಬ್ಬರೂ ತಮ್ಮ ಹಳೆಯ ವರಸೆ ತೋರಿಸಿದ್ದರಾದರೂ. ಈ ವಾರ ಇಬ್ಬರೂ ಮತ್ತೆ ಗೆಳೆಯರಾದಂತಿದ್ದಾರೆ. ಇಬ್ಬರೂ ಸಹ ನಗುತ್ತಾ, ಪರಸ್ಪರ ಆತ್ಮೀಯ ಗೆಳೆಯರಂತೆ ಮಾತನಾಡುತ್ತಾ ಇದ್ದಿದ್ದು ಕಂಡು ಬಂತು. ಇದನ್ನೆಲ್ಲ ನೋಡಿದ ಪ್ರೇಕ್ಷಕರು ‘ಹೇ ಪ್ರಭು, ಹರಿರಾಮ ಕೃಷ್ಣ ಜಗನ್ನಾಥ ಪ್ರೇಮಾನಂದ್ ಏ ಕ್ಯಾ ಹುವಾ?’ ಎನ್ನುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ