ಕನ್ನಡ ಬಿಗ್ಬಾಸ್ ಸೀಸನ್ 11 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಹಿಂದೆ ಒಂದೆರಡು ಪ್ರೋಮೊಗಳು ಬಿಡುಗಡೆ ಆಗಿ ಕುತೂಹಲ ಕೆರಳಿಸಿವೆ. ಈ ಬಾರಿ ಸುದೀಪ್ ಇರುವುದಿಲ್ಲ ಬದಲಿಗೆ ಬೇರೊಬ್ಬ ನಟ ಇರುತ್ತಾರೆ ಎಂದೆಲ್ಲ ಸುದ್ದಿ ಹರಿಬಿಡಲಾಗಿತ್ತು. ಆದರೆ ಅದೆಲ್ಲ ಸುಳ್ಳಾಗಿದ್ದು, ಈ ಹೊಸ ಸೀಸನ್ ಅನ್ನೂ ಸಹ ಸುದೀಪ್ ಅವರೇ ನಿರೂಪಣೆ ಮಾಡಲಾಗುತ್ತಿದ್ದು, ಅವರನ್ನು ಒಳಗೊಂಡಿರುವ ಪ್ರೊಮೊ ಬಿಡುಗಡೆ ಆಗಿದೆ. ಇಂದು (ಸೆಪ್ಟೆಂಬರ್ 21) ಬಿಡುಗಡೆ ಆಗಿರುವ ಹೊಸ ಪ್ರೋಮೋನಲ್ಲಿ ಸುದೀಪ್ ಸ್ವರ್ಗ ಮತ್ತು ನರಕದ ಕತೆ ಹೇಳಿದ್ದಾರೆ. ಆ ಮೂಲಕ ಬಿಗ್ಬಾಸ್ ಮನೆ ಈ ಬಾರಿ ಹೇಗಿರಲಿದೆ ಎಂಬ ಸಣ್ಣ ಸುಳಿವೊಂದನ್ನು ನೀಡಿದ್ದಾರೆ.
ಪ್ರೋಮೋದ ಆರಂಭದಲ್ಲಿಯೇ ಕೆಲವು ಯುವಕ-ಯುವತಿಯರು ಸ್ವರ್ಗದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಖುಷಿಯಿಂದ ಆಹಾರ ಸೇವಿಸುತ್ತಿದ್ದಾರೆ. ಅದೇ ವಿಡಿಯೋ ಮುಂದುವರೆದರೆ ನರಕದಂತೆ ಕಾಣುವ ಭೀಕರ ಪ್ರದೇಶದಲ್ಲಿ ತಟ್ಟೆಯಲ್ಲಿ ಗಂಜಿ ಕುಡಿಯುತ್ತಿದ್ದಾರೆ ಬೆಂಕಿಯ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಗ ಬರುವ ಸುದೀಪ್, ಸ್ವರ್ಗದಲ್ಲಿರುವವರು, ನರಕದಲ್ಲಿರುತ್ತಾರೆ ನರಕದಲ್ಲಿರುವವರು ಸ್ವರ್ಗದಲ್ಲಿರುತ್ತಾರೆ ಎಂದು ಬಿಗ್ಬಾಸ್ ಶೈಲಿಯಲ್ಲಿ ಸ್ವರ್ಗ ನರಕದ ಜೀವನದ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ಕೈ-ಕೈ ಮಿಲಾಯಿಸಿದ ಬಿಗ್ಬಾಸ್ ಸ್ಪರ್ಧಿಗಳು, ನಟಿಗೆ ಕಪಾಳಮೋಕ್ಷ
ಯಾರು ಸ್ನೇಹಿತರಾಗುತ್ತಾರೆ ಎಂದು ನಂಬಿರುತ್ತೇವೆಯೋ ಅವರೇ ಬೆನ್ನಿಗೆ ಚೂರಿ ಹಾಕಬಹುದು, ಯಾರು ಚೂರಿ ಹಾಕುತ್ತಾರೆ ಎಂದುಕೊಂಡಿರುತ್ತೇವೆಯೋ ಅವರೇ ಸ್ನೇಹಿತರೂ ಆಗಬಹುದು ಎಂದು ಹೇಳಿದ್ದಾರೆ. ಆ ಮೂಲಕ ಬಿಗ್ಬಾಸ್ ಮನೆಯಲ್ಲಿ ಯಾವ ಸಂಬಂಧವೂ ಶಾಶ್ವತವಲ್ಲ ಎಂದು ಸಹ ಹೇಳಿದ್ದಾರೆ. ಆ ಮೂಲಕ ಈ ಬಾರಿಯ ಬಿಗ್ಬಾಸ್ ಸುಲಭವಂತೂ ಆಗಿರುವುದಿಲ್ಲ, ಹಲವು ಟ್ವಿಸ್ಟ್ ಮತ್ತು ಟರ್ನ್ಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
ಅಂದಹಾಗೆ ಕನ್ನಡ ಬಿಗ್ಬಾಸ್ ಸೀಸನ್ 11 ಸೆಪ್ಟೆಂಬರ್ 29 ರಂದು ಪ್ರಾರಂಭವಾಗಲಿದೆ. ರಿಯಾಲಿಟಿ ಶೋನ ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಅದರ ಬಳಿಕ ಪ್ರತಿದಿನ ರಾತ್ರಿ 9:30ಗೆ ಎಪಿಸೋಡ್ಗಳು ಪ್ರಸಾರ ಆಗಲಿವೆ. ಈ ಬಾರಿ ಲೈವ್ ಇರುವುದಿಲ್ಲ ಎನ್ನಲಾಗುತ್ತಿದೆ. ಸೀಸನ್ 11 ರಲ್ಲಿ ಕೆಲವು ಬದಲಾವಣೆಗಳು ಇರಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ