
ಬಿಗ್ಬಾಸ್ (Bigg Boss) ಮನೆಯಲ್ಲಿ ಗಿಲ್ಲಿ ಈಗಾಗಲೇ ಫಿನಾಲೆ ಸ್ಪರ್ಧಿ ಎನಿಸಿಕೊಂಡಿದ್ದಾರೆ. ತಾವು ಗೆಲ್ಲುವ ಅಭ್ಯರ್ಥಿ ಎಂಬುದು ಸ್ವತಃ ಗಿಲ್ಲಿಗೆ ಗೊತ್ತಿದೆ. ಈ ವಿಷಯವನ್ನು ಮನೆಯಲ್ಲಿ ಹಲವು ಬಾರಿ ಹೇಳಿಕೊಂಡಿದ್ದಾರೆ. ತಾವೇ ಕಪ್ ಗೆಲ್ಲುವುದು, ತಾವೇ ಫಿನಾಲೆಗೆ ಹೋಗುವುದು ಎಂದು ಸಹ ಹೇಳಿದ್ದಾರೆ. ಆದರೆ ಇದೀಗ ಗಿಲ್ಲಿ, ತಮ್ಮ ಜೊತೆಗೆ ಕಾವ್ಯಾರನ್ನೂ ಸಹ ಫಿನಾಲೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಈ ಪ್ರಯತ್ನ, ಬಿಗ್ಬಾಸ್ ನಿಯಮಗಳಿಗೆ ವ್ಯತಿರಿಕ್ತವಾಗಿರುವುದಲ್ಲದೆ, ಇತರೆ ಆಟಗಾರರಿಗೆ ಬೇಕೆಂದೇ ಮಾಡುತ್ತಿರುವ ಅನ್ಯಾಯದಂತೆ ಕಾಣುತ್ತಿದೆ.
ಎಲ್ಲರಿಗೂ ಗೊತ್ತಿರುವಂತೆ ಗಿಲ್ಲಿಗೆ ಕಾವ್ಯಾ ಜೊತೆಗೆ ಬಹಳ ಆಪ್ತ ಗೆಳೆತನ ಇದೆ. ಗಿಲ್ಲಿ, ಸದಾ ಕಾವ್ಯಾ ಪರ ನಿಲ್ಲುತ್ತಾರೆ. ಕಳೆದ ವಾರ ನಡೆದ ಟಾಸ್ಕ್ ಒಂದರಲ್ಲಿ ಸಹ ಕಾವ್ಯಾ, ಟಾಸ್ಕ್ನಲ್ಲಿ ಸೋತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಸಹ ಗಿಲ್ಲಿ, ಕಾವ್ಯಾ ಗೆದ್ದಿದ್ದಾಳೆ ಎಂದು ವಾದಿಸಿದ್ದರು. ಇನ್ನು ನಾಮಿನೇಷನ್ನಲ್ಲಂತೂ ಗಿಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಸ್ಪಷ್ಟವಾಗಿ, ಬಹಿರಂಗವಾಗಿ ಪಕ್ಷಪಾತ ಮಾಡಿದರು. ಕಾವ್ಯಾರನ್ನು ನಾಮಿನೇಷನ್ ಇಂದ ಉಳಿಸಲು ಇತರರನ್ನು ನಾಮಿನೇಟ್ ಮಾಡಿದರು.
ನಾಮಿನೇಷನ್ ಪ್ರಕ್ರಿಯೆ ತುಸು ಭಿನ್ನವಾಗಿತ್ತು. ಕ್ಯಾಪ್ಟನ್ ಆಗಿದ್ದ ಗಿಲ್ಲಿ, ಯಾರೇ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಸ್ಪರ್ಧಿಗಳಲ್ಲಿ ಹಲವರು ಕಾವ್ಯಾರನ್ನು ಇನ್ನೊಬ್ಬರೊಟ್ಟಿಗೆ ನಿಲ್ಲಿಸಿದಾಗ ಗಿಲ್ಲಿ ಸಹಜವಾಗಿಯೇ ಕಾವ್ಯಾ ಬಿಟ್ಟು ಇನ್ನೊಬ್ಬರನ್ನು ನಾಮಿನೇಟ್ ಮಾಡುತ್ತಿದ್ದರು. ಅಲ್ಲಿಗೆ ಕಾವ್ಯಾರನ್ನು ನಾಮಿನೇಟ್ ಮಾಡಬಾರದು ಎಂಬುದು ಗಿಲ್ಲಿಯ ಉದ್ದೇಶ ಎಂಬುದು ಸ್ಪಷ್ಟವಾಯ್ತು. ಆದರೆ ಸುದೀಪ್ ಎದುರು ಮಾತನಾಡಿದ ಗಿಲ್ಲಿ, ಕಾವ್ಯಾರನ್ನು ನಾಮಿನೇಟ್ ಮಾಡಲು ಸೂಕ್ತ ಕಾರಣವನ್ನು ಮನೆ ಮಂದಿ ನೀಡಲಿಲ್ಲ ಎಂದರು.
ಇದನ್ನೂ ಓದಿ:ಬಿಗ್ಬಾಸ್: ಗಿಲ್ಲಿಯ ಗುಟ್ಟು ರಟ್ಟು ಮಾಡಿದ ಸುದೀಪ್
ಪಕ್ಷಪಾತ ಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿದ್ದರೂ, ಗಿಲ್ಲಿ, ಅದನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಪ್ರಯತ್ನ ಸುದೀಪ್ ಅವರಿಗೆ ಹಿಡಿಸಲಿಲ್ಲ. ಹಾಗಾಗಿ ಗಿಲ್ಲಿಗೆ ಒಂದು ಟಾಸ್ಕ್ ನೀಡಿದರು. ಹಾಗಿದ್ದರೆ ಕಾವ್ಯಾರನ್ನು ನಾಮಿನೇಟ್ ಮಾಡಲು ನೀನೇ ಕನಿಷ್ಟ ಎರಡು ಕಾರಣ ಕೊಡು ನೋಡೋಣ ಎಂದರು. ಆದರೆ ಗಿಲ್ಲಿಗೆ ಅಲ್ಲಿ ಮಾತೇ ಹೊರಳಲಿಲ್ಲ. ಕಾವ್ಯಾರನ್ನು ನಾಮಿನೇಟ್ ಮಾಡಲು ಕೇವಲ ಒಂದು ಕಾರಣವನ್ನೂ ಸಹ ಗಿಲ್ಲಿಗೆ ನೀಡಲಾಗಲಿಲ್ಲ.
ಆಗ ಮಾತನಾಡಿದ ಸುದೀಪ್, ‘ಮನೆಯವರೆಲ್ಲ ಹೇಳುತ್ತಿದ್ದಾರೆ ನೀವು ಪಕ್ಷಪಾತ ಮಾಡಿದ್ದೀರಿ ಎಂದು. ಅವರು ಹೇಳಿದ್ದು ಸುಳ್ಳು ಮಾಡಲು ನಿಮಗೆ ಅವಕಾಶ ಕೊಟ್ಟಿದ್ದೆ, ಕಾವ್ಯಾರನ್ನು ನಾಮಿನೇಟ್ ಮಾಡಲು ಸೂಕ್ತ ಕಾರಣವನ್ನು ನೀವು ಕೊಟ್ಟಿದ್ದಿದ್ದರೆ ನೀವು ಕಾವ್ಯಾರನ್ನು ಅನ್ಯ ಉದ್ದೇಶದಿಂದ ನಾಮಿನೇಟ್ ಮಾಡಲಿಲ್ಲ ಎಂದು ಒಪ್ಪಿಕೊಳ್ಳಬಹುದಿತ್ತು ಎಂದರು. ಅಸಲಿಗೆ, ಗಿಲ್ಲಿ ಪಕ್ಷಪಾತ ಮಾಡಿಲ್ಲ ಎಂಬುದನ್ನು ಸ್ವತಃ ಕಾವ್ಯಾ ಸಹ ಒಪ್ಪಿಕೊಳ್ಳಲಿಲ್ಲ. ಅಲ್ಲದೆ, ಸುದೀಪ್ ಅವರು, ‘ಗಿಲ್ಲಿ ನೀವು ಕಾವ್ಯಾಗೆ ಬೆಂಬಲಿಸುತ್ತಿದ್ದೀನಿ, ಸಹಾಯ ಮಾಡುತ್ತಿದ್ದೀನಿ ಎಂದುಕೊಳ್ಳುತ್ತಿದ್ದೀರಿ, ಆದರೆ ಅವರು ಮುಳುಗಲು ಸಹ ನೀವೇ ಕಾರಣ ಆಗಲಿದ್ದೀರಿ’ ಎಂದರು.
ಆದರೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದು, ಇಡೀ ಮನೆಯ ಸದಸ್ಯರು ನಾಮಿನೇಷನ್ ಅನ್ನು ಲಘುವಾಗಿ ಪರಿಗಣಿಸಿರುವ ರೀತಿಗೆ. ಫಿನಾಲೆ ವಾರಕ್ಕೆ ಹತ್ತಿರದಲ್ಲಿರುವಾಗಲೂ ಸಹ ಮನೆ ಮಂದಿ ನಾಮಿನೇಷನ್ ಅನ್ನು ಸಿಲ್ಲಿಯಾಗಿ ಪರಿಗಣಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಈ ವಾರ ಅಶ್ವಿನಿ, ಸ್ಪಂದನಾ, ಧ್ರುವಂತ್ ಇನ್ನೂ ಕೆಲವರು ನಾಮಿನೇಟ್ ಆಗಿದ್ದಾರೆ. ನಾಳೆ ಯಾರು ಮನೆಯಿಂದ ಹೊರ ಹೋಗುತ್ತಾರೋ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:13 pm, Sat, 3 January 26