
ಕಳೆದ ವಾರ ಬಿಗ್ ಬಾಸ್ (Bigg Boss) ಫಿನಾಲೆ ಪೂರ್ಣಗೊಂಡಿದೆ. ವೀಕೆಂಡ್ನಲ್ಲಿ ಸುದೀಪ್ ಅವರ ಎಪಿಸೋಡ್ ನೋಡೋಕೆ ಸಿಗೋದಿಲ್ಲವಲ್ಲ ಎಂದು ವೀಕ್ಷಕರು ಬೇಸರದಲ್ಲಿ ಇದ್ದರು. ಆದರೆ, ಕಲರ್ಸ್ ಕನ್ನಡ ವೀಕ್ಷಕರು ಬೇಸರ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಇಂದಿನಿಂದ ಮೂರು ದಿನ ಅಂದರೆ ಜನವರಿ 24, 25 ಮತ್ತು 26ರಂದು 12ನೇ ವರ್ಷದ ‘ಅನುಬಂಧ ಅವಾರ್ಡ್ಸ್’ ಕಾರ್ಯಕ್ರಮ ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ. ಕಿರುತೆರೆ ಕಲಾವಿದರ ಜೊತೆಗೆ ಹಿರಿತೆರೆ ದಿಗ್ಗಜರ ಸಮಾಗಮ ಆಗಲಿದೆ.
‘ಅನುಬಂಧ ಅವಾರ್ಡ್ಸ್’ ಕೇವಲ ಪ್ರಶಸ್ತಿ ಸಮಾರಂಭವಾಗಿ ಉಳಿದಿಲ್ಲ. ಇದು ಕಲರ್ಸ್ ಕನ್ನಡ ಕಲಾವಿದರು ಹಾಗೂ ವೀಕ್ಷಕರ ಪಾಲಿಗೆ ಮನೆಯ ಹಬ್ಬ. ಇಲ್ಲಿ ವಿವಿಧ ವಿಭಾಗದಲ್ಲಿ ಅವಾರ್ಡ್ಸ್ ನೀಡಲಾಗುತ್ತದೆ. ನೆಚ್ಚಿನ ನಟ/ನಟಿ, ನೆಚ್ಚಿನ ಸೊಸೆ, ನೆಚ್ಚಿನ ಅತ್ತೆ, ನೆಚ್ಚಿನ ವಿಲನ್ ಹೀಗೆ ಹಲವು ವಿಭಾಗಗಳಲ್ಲಿ ಅವಾರ್ಡ್ ಕೊಡಲಾಗುತ್ತದೆ.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಬಣ್ಣದ ಲೋಕಕ್ಕೆ ಬಂದು 50 ವರ್ಷಗಳು ತುಂಬಿವೆ. ಅದೇ ರೀತಿ ‘ಭಾಗ್ಯ’ ಪಾತ್ರಧಾರಿ ಸುಷ್ಮಾ ರಾವ್ ಅವರು ಕಿರುತೆರೆಯಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರೈಸಿದ್ದಾರೆ. ಇಬ್ಬರಿಗೂ ವೇದಿಕೆ ಮೇಲೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.
ಕಲರ್ಸ್ನ ‘ರಾಮಾಚಾರಿ’ ಧಾರಾವಾಹಿ ಸಾವಿರ ಕಂತು ಪೂರೈಸಿದೆ. ಇದನ್ನು ಸಂಭ್ರಮಿಸಲು ಕನ್ನಡ ಚಿತ್ರರಂಗದ ರಾಮಾಚಾರಿ ಎಂದೇ ಫೇಮಸ್ ಆದ ರವಿಚಂದ್ರನ್ ಆಗಮಿಸಲಿದ್ದಾರೆ.
‘ಸು ಫ್ರಮ್ ಸೋ’ ಸಿನಿಮಾ ಥಿಯೇಟರ್ ಬಳಿಕ ಒಟಿಟಿ ಹಾಗೂ ಟಿವಿಗೆ ಬಂತು. ಕಲರ್ಸ್ನಲ್ಲೇ ಈ ಸಿನಿಮಾ ಪ್ರಸಾರ ಕಂಡಿದೆ. ಹೀಗಾಗಿ, ಚಿತ್ರದ ನಿರ್ದೇಶಕ ಜೆ.ಪಿ. ತುಮಿನಾಡ್ ಮತ್ತು ಕಲಾವಿದರಾದ ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ ವೇದಿಕೆ ಏರಲಿದ್ದಾರೆ. ಸಿನಿಮಾಗೆ ಅವಾರ್ಡ್ ಕೂಡ ಸಿಗಲಿದೆ. ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಗೆ ಅವರ ತಾಯಿ ವೇದಿಕೆ ಮೇಲೆ ಸರ್ಪ್ರೈಸ್ ನೀಡಿದ್ದಾರೆ. ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಸುದೀರ್ಘ ಕಾಲದ ನಂತರ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಹೆಸರಲ್ಲಿ ಕಲರ್ಸ್ ಕನ್ನಡ ‘ಕಲರ್ಸ್ ಕನ್ನಡಿಗ’ ಪ್ರಶಸ್ತಿ ಪ್ರದಾನ ಮಾಡುತ್ತದೆ. ಈ ಅವಾರ್ಡ್ನ ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ನೀಡಲಾಗಿದೆ. ‘ಥಟ್ ಅಂತ ಹೇಳಿ’ ನಡೆಸಿಕೊಡೋ ಡಾ. ನಾ. ಸೋಮೇಶ್ವರ್, ಶಾಸಕ ಪ್ರದೀಪ್ ಈಶ್ವರ್, ನಿರ್ದೇಶಕ ತರುಣ್ ಸುಧೀರ್-ಸೋನಲ್ ಮೊಂತೇರೋ, ಅನು ಪ್ರಭಾಕರ್- ರಘು ಮುಖರ್ಜಿ ಅನುಬಂಧ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ‘ಮಾರ್ಕ್’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ
ಈ ಬಾರಿ 37 ಅವಾರ್ಡ್ಗಳನ್ನು ನೀಡಲಾಗುತ್ತಿದೆ. 15ಕ್ಕೂ ಹೆಚ್ಚು ಪ್ರದರ್ಶನಗಳಿವೆ. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೆಲಿಸೋದು ಪಕ್ಕಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.