ದೀಪಿಕಾ ದಾಸ್ ಮಸ್ತ್ ಆಫರ್; ಕಳೆದ ಬೆಕ್ಕು ಹುಡುಕಿಕೊಟ್ರೆ 10-15 ಸಾವಿರ ರೂ. ಬಹುಮಾನ

Deepika Das: ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 14 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಈಗ ಅವರ ಬೆಕ್ಕು ಕಾಣೆಯಾಗಿದೆ.

ದೀಪಿಕಾ ದಾಸ್ ಮಸ್ತ್ ಆಫರ್; ಕಳೆದ ಬೆಕ್ಕು ಹುಡುಕಿಕೊಟ್ರೆ 10-15 ಸಾವಿರ ರೂ. ಬಹುಮಾನ
ದೀಪಿಕಾ ದಾಸ್

Updated on: Feb 22, 2023 | 1:56 PM

ನಟಿ ದೀಪಿಕಾ ದಾಸ್ (Deepika Das) ಅವರು ಕಿರುತೆರೆ ಲೋಕದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಪೂರ್ಣಗೊಂಡ ‘ಬಿಗ್ ಬಾಸ್ ಸೀಸನ್ 9’ರ ಸ್ಪರ್ಧಿ ಆಗಿ ತೆರಳಿದ್ದರು. ದೊಡ್ಮನೆಗೆ ಅವರು ಎಂಟ್ರಿ ಕೊಟ್ಟಿದ್ದು ಎರಡನೇ ಬಾರಿ ಅನ್ನೋದು ವಿಶೇಷ. ಇತ್ತೀಚೆಗೆ ಅವರು ದುಬೈ ಪ್ರವಾಸಕ್ಕೆ ತೆರಳಿದ್ದರು. ಅದರ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಹಂಚಿಕೊಂಡಿರುವ ಹೊಸ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. ‘ಬೆಕ್ಕು ಕಳೆದಿದೆ. ಹುಡಕಿಕೊಡಿ. ಬಹುಮಾನವಾಗಿ 10-15 ಸಾವಿರ ರೂಪಾಯಿ ನೀಡುತ್ತೇನೆ’ ಎಂದು ದೀಪಿಕಾ ಹೇಳಿದ್ದಾರೆ. ಜೊತೆಗೆ ಬೆಕ್ಕಿನ ಫೋಟೋ ಕೂಡ ಹಾಕಿದ್ದಾರೆ.

ದೀಪಿಕಾ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 14 ಲಕ್ಷ ಮಂದಿ ಹಿಂಬಾಲಿಸುತ್ತಿದ್ದಾರೆ. ಈಗ ಅವರ ಬೆಕ್ಕು ಕಾಣೆಯಾಗಿದೆ. ಸೋಶಿಯಲ್ ಮೀಡಿಯಾ ಮೊರೆ ಹೋದರೆ ಕಳೆದ ಬೆಕ್ಕು ಸಿಗಬಹುದು ಎನ್ನುವ ನಂಬಿಕೆ ಅವರದ್ದು. ಹೀಗಾಗಿ, ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಫೆಬ್ರವರಿ 18ರಿಂದ ಬೆಂಗಳೂರಿನ ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್​ನಿಂದ ಬೆಕ್ಕು ಕಾಣೆ ಆಗಿದೆ. ಬೆಕ್ಕಿನ ಹೆಸರು ಶ್ಯಾಡೋ. ಕಪ್ಪು ಬಣ್ಣದ ಬೆಕ್ಕು ಇದಾಗಿದ್ದು, ಕತ್ತಿನ ಸುತ್ತ ಕಂದು ಬಣ್ಣವಿದೆ. ಪರ್ಷಿಯನ್ ಜಾತಿಗೆ ಸೇರಿದ ಗಂಡು ಬೆಕ್ಕು ಇದಾಗಿದ್ದು, ವಯಸ್ಸು 9 ತಿಂಗಳು. ಹುಡುಕಿಕೊಟ್ಟವರಿಗೆ 10-15 ಸಾವಿರ ರೂಪಾಯಿ ಬಹುಮಾನ ಕೊಡಲಾಗುವುದು’ ಎಂದು ದೀಪಿಕಾ ದಾಸ್ ಪೋಸ್ಟ್ ಮಾಡಿದ್ದಾರೆ. ಕೆಲ ಮೊಬೈಲ್ ಸಂಖ್ಯೆ ನೀಡಿ, ಆ ನಂಬರ್​ಗಳಿಗೆ ಕರೆ ಮಾಡಿ ಎಂದು ದೀಪಿಕಾ ದಾಸ್ ಕೋರಿದ್ದಾರೆ.

ಅನೇಕರು ಈ ಪೋಸ್ಟ್​ನ ಗಂಭೀರವಾಗಿ ಸ್ವೀಕರಿಸಿಲ್ಲ. ನೆಗೆಟಿವ್ ಆಗಿ ಇದಕ್ಕೆ ಕಮೆಂಟ್ ಮಾಡುತ್ತಿದ್ದಾರೆ. ‘ಬೆಕ್ಕಿಗೆ ಇದ್ದಷ್ಟು ಬೆಲೆ ಜನರಿಗೆ ಇಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ‘ನನಗೆ ಬೆಕ್ಕು ಎಲ್ಲಿದೆ ಎಂದು ಗೊತ್ತಿದೆ, ಆದರೆ ಹೇಳಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹೀಗಾಗಿ, ಈ ಪೋಸ್ಟ್​ನಿಂದ ದೀಪಿಕಾ ದಾಸ್ ನಿಜವಾದ ಆಶಯ ಈಡೇರುತ್ತದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ.

ಇತ್ತೀಚೆಗೆ ದೀಪಿಕಾ ದಾಸ್ ಅವರು ದುಬೈ ಟ್ರಿಪ್​ಗೆ ತೆರಳಿದ್ದರು. ಈ ವೇಳೆ ವೆಸ್ಟ್​ ಇಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಅವರು, ಇದೊಂದು ಅನಿರೀಕ್ಷಿತ ಭೇಟಿ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ