
ನಟ ಧ್ರುವಂತ್ (Dhruvanth) ಅವರು ಇತ್ತೀಚಿನ ಕೆಲವು ವಾರಗಳಿಂದ ಗಿಲ್ಲಿ ನಟ (Gilli Nata) ವಿರುದ್ಧ ಗರಂ ಆಗಿದ್ದಾರೆ. ಗಿಲ್ಲಿ ಮಾಡುವ ಕಾಮಿಡಿಯನ್ನು ಅವರು ವಿರೋಧಿಸುತ್ತಾ ಬಂದಿದ್ದಾರೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಹಾಗಿದ್ದರು ಕೂಡ ಸೋಮವಾರದ (ಡಿಸೆಂಬರ್ 8) ಸಂಚಿಕೆಯಲ್ಲಿ ಧ್ರುವಂತ್ ಅವರು ಗಿಲ್ಲಿಗೆ ಕೈ ಮುಗಿದಿದ್ದಾರೆ! ಈ ಘಟನೆಯಿಂದ ವೀಕ್ಷಕರಿಗೆ ಅಚ್ಚರಿ ಆಗಿದೆ. ಬಿಗ್ ಬಾಸ್ (Bigg Boss Kannada Season 12) ಮನೆಯ ಒಳಗೆ ಇರುವ ದೇವರ ಪ್ರತಿಮೆಯ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು ಧ್ರುವಂತ್ ಅವರು ಕೈ ಮುಗಿದು ಒಂದು ಮನವಿ ಮಾಡಿಕೊಂಡಿದ್ದಾರೆ.
‘ಏನೂ ದೊಡ್ಡ ಮುಖ್ಯವಾದ ವಿಷಯ ಅಲ್ಲ. ಬನ್ನಿ ಇಲ್ಲಿ… ಸ್ನೇಹಪೂರ್ವಕವಾಗಿ ಒಂದು ಮಾತು ಹೇಳುತ್ತೇನೆ. ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೇನೆ. ಅದಕ್ಕೆ ಸಾಕ್ಷಿಯೇ ಈ ದೇವಿ. ನೀವು ದಯವಿಟ್ಟು ನನ್ನನ್ನು ಮತ್ತು ನನ್ನ ಆಟವನ್ನು ಅವಮಾನಿಸಬೇಡಿ. ನನ್ನ ಹಿಂದೆ ಹೇಗೆ ಇರುತ್ತೀರೋ ಅದು ನನಗೆ ಗೊತ್ತಿಲ್ಲ. ಅದು ನಿಮ್ಮ ವ್ಯಕ್ತಿತ್ವ. ನಿಮಗೆ ಅಭ್ಯಂತರ ಇಲ್ಲ ಎಂದರೆ ನಮ್ಮನ್ನು ಬಿಟ್ಟು ಬಿಡಿ. ಹೆಂಗೋ ಬಡಜೀವ ಬದುಕಿಕೊಳ್ಳುತ್ತದೆ’ ಎಂದು ಧ್ರುವಂತ್ ಅವರು ಗಿಲ್ಲಿಯ ಬಳಿಕ ಮನವಿ ಮಾಡಿದ್ದಾರೆ.
ಧ್ರುವಂತ್ ಅವರು ಬಿಗ್ ಬಾಸ್ ಮನೆಯಿಂದ ಸ್ವತಃ ಹೊರಗೆ ಹೋಗಲು ನಿರ್ಧರಿಸಿದ್ದರು. ಆಗ ಅವರನ್ನು ಹೆಚ್ಚು ಲೇವಡಿ ಮಾಡಿದ್ದೇ ಗಿಲ್ಲಿ ನಟ. ಅದರಿಂದ ಧ್ರುವಂತ್ ಅವರಿಗೆ ತುಂಬಾ ಕಿರಿಕಿರಿ ಆಗಿತ್ತು. ಅದೇ ವಿಚಾರಕ್ಕೆ ಅವರು ಜಗಳ ಕೂಡ ಮಾಡಿದ್ದರು. ಕಳೆದ ವಾರ ಧ್ರುವಂತ್ ಅವರು ಮನೆಯಿಂದ ಹೊರಗೆ ಹೋಗಬಹುದು ಎಂದೇ ಊಹಿಸಲಾಗಿತ್ತು. ಆದರೆ ಧ್ರುವಂತ್ ಬಚಾವ್ ಆದರು.
ಧೈರ್ಯದಿಂದ ಆಟ ಮುಂದುವರಿಸುವಂತೆ ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಸಲಹೆ ನೀಡಿದ್ದರು. ‘ಸೋಲುವವರೆಗೂ ಸೋಲಬೇಡಿ’ ಎಂದು ಧೈರ್ಯ ತುಂಬಿದ್ದರು. ಆ ಕಾರಣದಿಂದ ಧ್ರುವಂತ್ ಅವರು ಈಗ ಬಿಗ್ ಬಾಸ್ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆದರೆ ಅದಕ್ಕೆ ಗಿಲ್ಲಿ ಮತ್ತೆ ಅಡ್ಡಿ ಆಗಬಾರದು ಎಂದು ಧ್ರುವಂತ್ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅದೇ ಕಾರಣಕ್ಕಾಗಿ ಗಿಲ್ಲಿಯ ಬಳಿ ಅವರು ಕೈ ಮುಗಿದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಡೀ ಕರ್ನಾಟಕದಲ್ಲಿ ಗಿಲ್ಲಿ ಕ್ರೇಜ್: ಎಲಿಮಿನೇಟ್ ಆಗಿ ಬಂದ ಅಭಿಷೇಕ್ ಹೇಳಿದ್ದೇನು?
ಬೇರೆಯವರನ್ನು ಅಪಹಾಸ್ಯ ಮಾಡುವ ಮೂಲಕ ಗಿಲ್ಲಿ ನಟ ಅವರು ಮೈಲೇಜ್ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಕೂಡ ತಮ್ಮ ವಿಷಯದಲ್ಲಿ ಅದೇ ಮುಂದುವರಿದರೆ ತಮ್ಮಿಂದಾಗಿ ಗಿಲ್ಲಿಗೆ ಹೆಚ್ಚು ಸ್ಕೋಪ್ ಸಿಗುತ್ತದೆ ಎಂಬುದು ಧ್ರುವಂತ್ ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ತಮ್ಮ ವಿಷಯಕ್ಕೆ ತಲೆ ಹಾಕದಂತೆ ಮನವಿ ಮಾಡಿದ್ದಾರೆ. ಅದಕ್ಕೆ ಗಿಲ್ಲಿ ಅವರು ಹು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಎಲ್ಲಿಯ ತನಕ ಈ ಒಪ್ಪಂದ ಮುಂದುವರಿಯುತ್ತದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.