ಹುಟ್ಟುಹಬ್ಬದಂದು ಲೋಕ ಮೆಚ್ಚುವ ಕಾರ್ಯ ಮಾಡಲಿದ್ದಾರೆ ಡ್ರೋನ್ ಪ್ರತಾಪ್

|

Updated on: May 21, 2024 | 6:31 PM

ಬಿಗ್​ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಬಿಗ್​ಬಾಸ್ ಮನೆಯಿಂದ ಹೊರಬಂದ ಮೇಲೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಪ್ರತಾಪ್ ತಮ್ಮ ಹುಟ್ಟುಹಬ್ಬದಂದು ಒಳ್ಳೆಯ ಕಾರ್ಯ ಮಾಡಲು ಮುಂದಾಗಿದ್ದಾರೆ.

ಹುಟ್ಟುಹಬ್ಬದಂದು ಲೋಕ ಮೆಚ್ಚುವ ಕಾರ್ಯ ಮಾಡಲಿದ್ದಾರೆ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us on

ಬಿಗ್​ಬಾಸ್ ಕನ್ನಡ ಸೀಸನ್ 10ರ (Bigg Boss Kannada) ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap), ಬಿಗ್​ಬಾಸ್ ಮನೆಯಿಂದ ಹೊರಬಂದ ಬಳಿಕ ಕೆಲವು ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡ್ರೋನ್ ಕಂಡು ಹಿಡಿದಿದ್ದಾಗಿ ಸುಳ್ಳು ಹೇಳಿ ಭಾರಿ ಜನಪ್ರಿಯತೆಗಿಟ್ಟಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಬಿಗ್​ಬಾಸ್ ಶೋನಲ್ಲಿ ಉತ್ತಮವಾಗಿ ಆಡುವ ಮೂಲಕ ನಕಲಿ ಡ್ರೋನ್​ನಿಂದ ಹೋಗಿದ್ದ ಮಾನವನ್ನು ಬಿಗ್​ಬಾಸ್ ಮನೆಯಲ್ಲಿ ಮತ್ತೆ ಗಳಿಸಿಕೊಂಡಿದ್ದರು. ಈಗ ಹೊರಬಂದ ಬಳಿಕ ಕೆಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಹೆಸರು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಡ್ರೋನ್ ಪ್ರತಾಪ್, ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದು, ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ್ದಾರೆ. ಅಂದಿನ ದಿನ ತಾವು ಮಾಡಲು ಹೊರಟಿರುವ ಒಂದು ಸಮಾಜ ಸೇವಾ ಕಾರ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. ‘ಡಾ ರಾಜ್​ಕುಮಾರ್ ಅವರು ನೇತ್ರದಾನ ಮಹಾದಾನ ಎಂದಿದ್ದಾರೆ. ಜುಲೈ 11 ಕ್ಕೆ ನನ್ನ ಹುಟ್ಟುಹಬ್ಬವಿದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳಬೇಕು ಎಂದು ನಾನು ನಿರ್ಧರಿಸಿದ್ದೇನೆ’ ಎಂದಿದ್ದಾರೆ ಡ್ರೋನ್ ಪ್ರತಾಪ್.

‘ಯಾರಾದರೂ ಐದು ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ನಾನು ತೀರ್ಮಾನ ಮಾಡಿದ್ದೀನಿ. ಯಾರಾದರೂ ಬಡವರಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಹಣ ಭರಿಸಲು ಸಾಧ್ಯವಾಗದೇ ಇರುವವರು ಇದ್ದರೆ ದಯವಿಟ್ಟು ನಮಗೆ ತಿಳಿಸಿ. ನಮಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳಿಸಿ ಅಥವಾ ಕಮೆಂಟ್ ಸೆಕ್ಷನ್​ನಲ್ಲಿ ಅವರನ್ನು ಮೆನ್ಷನ್ ಮಾಡಿ, ನಾವು ಅಗತ್ಯವಿರುವ ಐದು ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸುತ್ತೇವೆ’ ಎಂದಿದ್ದಾರೆ ಡ್ರೋನ್ ಪ್ರತಾಪ್.

ಇದನ್ನೂ ಓದಿ:ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಡ್ರೋನ್ ಪ್ರತಾಪ್; ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್

ಡ್ರೋನ್ ಪ್ರತಾಪ್​ರ ಈ ವಿಡಿಯೋಕ್ಕೆ ಸಾಕಷ್ಟು ಮಂದಿ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಂತೂ ‘ಬಿಗ್​ಬಾಸ್​ನಲ್ಲಿ ನಿಮಗೆ ಮತ ಹಾಕಿದ್ದಕ್ಕೆ ಸಾರ್ಥಕವಾಯ್ತು’ ಎಂದಿದ್ದಾರೆ. ಇನ್ನು ಕೆಲವರು ತಾವೂ ಸಹ ನಿಮ್ಮೊಂದಿಗೆ ಈ ಸೇವಾ ಕಾರ್ಯದಲ್ಲಿ ಜೊತೆಯಾಗುವುದಾಗಿ ಹೇಳಿದ್ದಾರೆ. ಕೆಲವರು, ಅಗತ್ಯ ಇರುವವರ ಮೊಬೈಲ್ ಸಂಖ್ಯೆ, ವಿಳಾಸಗಳನ್ನು ಕಮೆಂಟ್ ಸೆಕ್ಷನ್​ನಲ್ಲಿ ಹಾಕಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಸಂಗೀತಾ ಶೃಂಗೇರಿಯ ಹುಟ್ಟುಹಬ್ಬವಿತ್ತು. ಬಿಗ್​ಬಾಸ್ ಮನೆಯಲ್ಲಿ ಪ್ರತಾಪ್​ರ ಮೆಚ್ಚಿನ ಅಕ್ಕನಾಗಿದ್ದ ಸಂಗೀತಾಗೆ ಪ್ರತಾಪ್ ಶುಭಾಶಯಗಳನ್ನು ತಿಳಿಸಿದರು. ವಿಶೇಷ ಉಡುಗೊರೆಯನ್ನು ಸಹ ನೀಡಿದ್ದರು. ಈಗ ಪ್ರತಾಪ್, ತಮ್ಮ ಹುಟ್ಟುಹಬ್ಬವನ್ನು ಸಮಾಜ ಸೇವೆಯ ಮೂಲಕ ಆಚರಿಸಲು ಮುಂದಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ