ಶೀಘ್ರವೇ ಪ್ರಾರಂಭವಾಗಲಿದೆ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 2?

Bigg Boss Kannada OTT: ಬಿಗ್​ಬಾಸ್ ಕನ್ನಡ ಸೀಸನ್ 10 ಇತ್ತೀಚೆಗಷ್ಟೆ ಮುಗಿದಿದೆ. ಬಿಗ್​ಬಾಸ್ ಕನ್ನಡ ಇತಿಹಾಸದಲ್ಲಿಯೇ ಸೀಸನ್ 10 ಅತ್ಯಂತ ಯಶಸ್ವಿ ಶೋ ಆಗಿದೆ. ಇದೀಗ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 2 ಆರಂಭಿಸುವ ಯೋಜನೆ ಸಿದ್ಧವಾಗುತ್ತಿದೆ.

ಶೀಘ್ರವೇ ಪ್ರಾರಂಭವಾಗಲಿದೆ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 2?
Follow us
ಮಂಜುನಾಥ ಸಿ.
|

Updated on: Feb 08, 2024 | 10:12 PM

ಬಿಗ್​ಬಾಸ್ (BiggBoss) ಕನ್ನಡ ಸೀಸನ್ 10 ಕೆಲ ದಿನಗಳ ಹಿಂದಷ್ಟೆ ಮುಕ್ತಾಯವಾಗಿದೆ. ಕಿಚ್ಚ ಸುದೀಪ್ ಅವರೇ ಹೇಳಿದಂತೆ ಸೀಸನ್ 10 ಈವರೆಗಿನ ಬಿಗ್​ಬಾಸ್ ಕನ್ನಡ ಸೀಸನ್​ಗಳಲ್ಲಿಯೇ ಅತ್ಯಂತ ಯಶಸ್ವಿ, ಅತ್ಯಂತ ಜನಪ್ರಿಯ ಸೀಸನ್. ಅದು ನಿಜವೂ ಹೌದು, ಫಿನಾಲೆ ವೇಳೆಗಾಗಲೇ ಒಬ್ಬೊಬ್ಬರ ಸ್ಪರ್ಧಿಗೆ ಎರಡು ಕೋಟಿ, ಮೂರು ಕೋಟಿ ಮತಗಳು ಬಂದಿದ್ದವು. ಬಿಗ್​ಬಾಸ್​ನಿಂದ ಹೊರಬಂದ ಮೇಲಂತೂ ಸ್ಪರ್ಧಿಗಳು ಸೆಲೆಬ್ರಿಟಿಗಳೇ ಆಗಿಬಿಟ್ಟಿದ್ದಾರೆ. ಬಿಗ್​ಬಾಸ್​ ಸೀಸನ್ 10ರ ಯಶಸ್ಸು ಕಂಡು ಇದೀಗ ಬಿಗ್​ಬಾಸ್ ಒಟಿಟಿಯನ್ನು ಪುನಃ ಆರಂಭಿಸುವ ಆಲೋಚನೆ ಆಯೋಜಕರಲ್ಲಿ ಮೂಡಿದೆ.

ಬಿಗ್​ಬಾಸ್ ಒಟಿಟಿ ಸೀಸನ್ ಈಗಾಗಲೇ ಹಿಂದಿಯಲ್ಲಿ ಪ್ರಸಾರವಾಗಿದೆ. ಕನ್ನಡದಲ್ಲಿಯೂ ಸಹ ಬಿಗ್​ಬಾಸ್ ಒಟಿಟಿ ಒಂದು ಸೀಸನ್ ನಡೆದಿದೆ. ಇದೀಗ ಇದೇ ಸೀಸನ್​ನ ಎರಡನೇ ಭಾಗವನ್ನು ಪ್ರಾರಂಭಿಸಲು ಯೋಜನೆ ಸಿದ್ಧವಾಗುತ್ತಿದೆ. ಮೊದಲ ಬಿಗ್​ಬಾಸ್ ಒಟಿಟಿ ಸೀಸನ್ 2022ರಲ್ಲಿ ನಡೆದಿತ್ತು. 42 ದಿನಗಳ ಕಾಲ ನಡೆದ ಈ ಶೋನಲ್ಲಿ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಹಾಗೂ ಸಾನ್ಯಾ ಐಯ್ಯರ್ ಅವರುಗಳು ಚಾಂಪಿಯನ್​ಗಳಾಗಿ, ಬಿಗ್​ಬಾಸ್ ಟಿವಿ ಸೀಸನ್​ಗೆ ಆಯ್ಕೆ ಆಗಿದ್ದರು. ಟಿವಿ ಸೀಸನ್​ನಲ್ಲೂ ಚೆನ್ನಾಗಿ ಆಡಿದ್ದ ರಾಕೇಶ್ ಅಡಿಗ ಹಾಗೂ ರೂಪೇಶ್ ಫಿನಾಲೆಗೆ ಬಂದರು. ರೂಪೇಶ್ ವಿನ್ನರ್ ಆಗಿದ್ದರು.

ಇದನ್ನೂ ಓದಿ:ಬಿಗ್​ಬಾಸ್​ ಕನ್ನಡ 10ರ ಸ್ಪರ್ಧಿಗಳ ಆಯ್ಕೆ ಹೇಗೆ ನಡೆಯಿತು? ನಿರ್ದೇಶಕರ ಉತ್ತರ

ಅದೇ ರೀತಿ ಈಗ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 2 ಪ್ರಾರಂಭಿಸಲು ಆಯೋಜಕರು ಯೋಜನೆ ಹಾಕಿದ್ದು, ಮೊದಲ ಸೀಸನ್​ನಂತೆ ಇದನ್ನೂ ಸಹ 42 ದಿನಗಳ ಕಡಿಮೆ ಅವಧಿಗೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿ ವೂಟ್​ನಲ್ಲಿ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 1 ಪ್ರಸಾರವಾಗಿತ್ತು. ಆ ಶೋ ಅನ್ನೂ ಸಹ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿದ್ದರು. ಆದರೆ ಈ ಬಾರಿ ಬಿಗ್​ಬಾಸ್ ಒಟಿಟಿ ಸೀಸನ್ 2 ಜಿಯೋ ಸಿನಿಮಾಸ್​ ಒಟಿಟಿಯಲ್ಲಿ ಲೈವ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಈ ಸೀಸನ್​ ಅನ್ನೂ ಸಹ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ 114 ದಿನಗಳ ವರೆಗೆ ಬಿಗ್​ಬಾಸ್ ಕನ್ನಡ ಸೀಸನ್ 10ನ್ನು ಪ್ರೇಕ್ಷಕರು ನೋಡಿದ್ದಾರೆ. ಈಗ ಮತ್ತೆ ಒಟಿಟಿ ಸೀಸನ್ ಆರಂಭವಾದರೆ ಅದನ್ನು ಜನ ನೋಡುತ್ತಾರೆಯೇ, ಟಿವಿ ಬಿಗ್​ಬಾಸ್​ಗೆ ಸಿಕ್ಕ ಜನಪ್ರಿಯತೆ ಒಟಿಟಿಗೆ ಸಿಗುತ್ತದೆಯೇ? ಕಾದು ನೋಡಬೇಕಿದೆ. ಅಂದಹಾಗೆ, ಇದೇ ಪ್ರಶ್ನೆಗಳನ್ನಿಟ್ಟುಕೊಂಡು ಪ್ರಾರಂಭವಾಗಿದ್ದ ಈ ಹಿಂದಿನ ಬಿಗ್​ಬಾಸ್ ಕನ್ನಡ ಒಟಿಟಿ ಸೀಸನ್ 1 ಸಖತ್ ಆಗಿ ಜನಪ್ರಿಯವಾಗಿತ್ತು, ಈಗ ಜಿಯೋ ಫ್ರೀ ಸಹ ಇರುವ ಕಾರಣ ಈ ಸೀಸನ್ ಸಹ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ