
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಈಗ 68 ದಿನಗಳು ಕಳೆದಿವೆ. ಆರಂಭದಿಂದಲೂ ಎಲ್ಲರನ್ನೂ ನಗಿಸುತ್ತಾ ಬಂದಿರುವ ಗಿಲ್ಲಿ ನಟ ಅವರು ಎರಡನೇ ಬಾರಿಗೆ ಕಳಪೆ ಪಟ್ಟ ಪಡೆದಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಅನೇಕರು ಕಳಪೆ ಪಟ್ಟಕ್ಕೆ ಗಿಲ್ಲಿ ಹೆಸರನ್ನು ಸೂಚಿಸಿದ್ದಾರೆ. ಅದಕ್ಕೆ ಎಲ್ಲರೂ ನೀಡಿದ ಕಾರಣವೇ ಗಿಲ್ಲಿಯ ಅತಿರೇಕದ ಮಾತು! ಹಾಸ್ಯದ ಹೆಸರಿನಲ್ಲಿ ಗಿಲ್ಲಿ ನಟ (Gilli Nata) ಅನೇಕರನ್ನು ಅಪಹಾಸ್ಯ ಮಾಡುತ್ತಾರೆ. ಆ ಕಾರಣದಿಂದಲೇ ರಘು, ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ಮುಂತಾದವರು ಗಿಲ್ಲಿಗೆ ಕಳಪೆ ಪಟ್ಟ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಸದಾ ಲವಲವಿಕೆಯಿಂದ ಇರುತ್ತಾರೆ. ಎಲ್ಲರ ಜೊತೆಗೂ ಅವರು ಮಾತನಾಡುತ್ತಾರೆ. ಮಾತಿನಿಂದಲೇ ಅವರು ವೀಕ್ಷಕರ ಗಮನ ಸೆಳೆದಿದ್ದಾರೆ. ಅವರು ಕಾಮಿಡಿ ಮಾಡುವಾಗ ಬಿಗ್ ಬಾಸ್ ಮನೆಯ ಹಲವರು ಎಂಜಾಯ್ ಮಾಡುತ್ತಾರೆ. ಆದರೆ ವೈಯಕ್ತಿಯ ವಿಚಾರಗಳನ್ನು ಇಟ್ಟುಕೊಂಡು ಗಿಲ್ಲಿ ನಟ ಕಾಮಿಡಿ ಮಾಡಿದ್ದನ್ನು ಅನೇಕರು ವಿರೋಧಿಸಿದ್ದಾರೆ.
ಈ ಮೊದಲು ರಘು ಅವರು ಗಿಲ್ಲಿ ಜೊತೆ ಹೆಚ್ಚು ಬೆರೆಯುತ್ತಿದ್ದರು. ಆಗ ಅವರಿಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು. ಆದರೆ ದಿನದಿಂದ ದಿನಕ್ಕೆ ರಘು ಅವರಿಗೆ ಗಿಲ್ಲಿ ಮೇಲಿನ ಭಾವನೆ ಬದಲಾಗುತ್ತಾ ಹೋಯಿತು. ಸಹ ಸ್ಪರ್ಧಿಗಳ ಬಗ್ಗೆ ಗಿಲ್ಲಿ ಅಪಹಾಸ್ಯ ಮಾಡಿದ್ದನ್ನು ರಘು ಅವರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಅದನ್ನು ಯಾರೂ ಮೀರಬಾರದು ಎಂದು ರಘು ಹೇಳುತ್ತಿದ್ದಾರೆ. ಆದರೆ ಅದನ್ನು ಗಿಲ್ಲಿ ಅರ್ಥ ಮಾಡಿಕೊಳ್ಳುತ್ತಿಲ್ಲ.
ಕೆಲವು ಸ್ಪರ್ಧಿಗಳ ವಯಸ್ಸಿನ ಬಗ್ಗೆಯೂ ಗಿಲ್ಲಿ ಅವರು ಅಪಹಾಸ್ಯ ಮಾಡಿದ್ದಾರೆ. ಸೀನಿಯರ್ ಸಿಟಿಜನ್, ವಯಸ್ಸಾದವರು, ವೃದ್ಧರು ಎಂದೆಲ್ಲ ಪದ ಬಳಕೆ ಮಾಡಿದ್ದಾರೆ. ಇದು ಕೂಡ ಹಲವರ ಕೋಪಕ್ಕೆ ಕಾರಣ ಆಗಿದೆ. ಈ ವಿಚಾರದಲ್ಲಿ ಚೈತ್ರಾ ಕುಂದಾಪುರ ಅವರು ಗಿಲ್ಲಿಯನ್ನು ಬಲವಾಗಿ ಖಂಡಿಸಿದ್ದಾರೆ. ಆದರೂ ಕೂಡ ಗಿಲ್ಲಿ ಅವರು ತಮ್ಮದೇ ಸರಿ ಎಂದು ವಾದ ಮಾಡಿದ್ದಾರೆ.
ಇದನ್ನೂ ಓದಿ: ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿರುವ ಚೈತ್ರಾ ಕುಂದಾಪುರ ಅವರು ಈ ವಾರ ಉತ್ತಮ ಎನಿಸಿಕೊಂಡಿದ್ದಾರೆ. ಎಲ್ಲರ ಜೊತೆಗೂ ಅವರು ಬೆರೆತಿದ್ದಾರೆ. ಕೊಟ್ಟ ಟಾಸ್ಕ್ಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸ್ಪಂದನಾ ಬದಲು ಕ್ಯಾಪ್ಟೆನ್ಸಿ ಟಾಸ್ಕ್ ಆಡಿ ಗೆದ್ದಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಚೈತ್ರಾ ಕುಂದಾಪುರ ಅವರು ಉತ್ತಮ ಪಟ್ಟ ಪಡೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.