
ಗಿಲ್ಲಿ ನಟ, ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ವಿನ್ನರ್ ಆಗಿದ್ದಾರೆ. ಬಿಗ್ಬಾಸ್ ಇತಿಹಾಸದಲ್ಲೇ ಯಾರೂ ಪಡೆಯದಷ್ಟು ಮತಗಳನ್ನು ಪಡೆದು ಬಿಗ್ಬಾಸ್ ಗೆದ್ದಿದ್ದಾರೆ ಗಿಲ್ಲಿ ನಟ. ಆದರೆ ಗಿಲ್ಲಿಯ ಕೆಲ ಸಹ ಸ್ಪರ್ಧಿಗಳು ಗಿಲ್ಲಿ ತನ್ನ ಬಡತನವನ್ನು ಮುಂದೆ ಮಾಡಿ ಸಿಂಪತಿ ಗಿಟ್ಟಿಸಿಕೊಂಡ ಎಂದು ದೂರಿದ್ದಾರೆ. ಅಸಲಿಗೆ ಬಿಗ್ಬಾಸ್ ಮುಗಿಯುವವರೆಗೆ ಗಿಲ್ಲಿ ಎಲ್ಲಿಯೂ ತನ್ನ ಬಡತನವದ ಬಗ್ಗೆ ಹೇಳಿಕೊಂಡಿದ್ದಿಲ್ಲ. ಈ ಬಾರಿ ಬಿಗ್ಬಾಸ್ಗೆ ಹೋದ ಕೆಲವರು ಬಿಗ್ಬಾಸ್ ಮನೆಯಲ್ಲಿ ಧರಿಸಲು ಇರಿಸಿಕೊಂಡಿದ್ದ ಬಟ್ಟೆಗಳಿಗಾಗಿಯೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದ್ದಿದೆ. ಆದರೆ ಗಿಲ್ಲಿ ಬಿಗ್ಬಾಸ್ಗಾಗಿ ಖರ್ಚು ಮಾಡಿದ್ದೆಷ್ಟು? ಅವರೇ ಕೊಟ್ಟಿದ್ದಾರೆ ಉತ್ತರ.
ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಬಿಡುವಿಲ್ಲದಂತೆ ಕಾರ್ಯಕ್ರಮಗಳು, ಸಂದರ್ಶನಗಳಲ್ಲಿ ಗಿಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಪಾಲ್ಗೊಂಡಿರುವ ಗಿಲ್ಲಿ, ತಾವು ಬಿಗ್ಬಾಸ್ ಮನೆಗೆ ಹೋಗಲು ಎಷ್ಟು ಹಣ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಗಿಲ್ಲಿ ಬಿಗ್ಬಾಸ್ ಮನೆಗೆ ಹೋಗಲು ಬಟ್ಟೆಗಾಗಿ ಬಿಟ್ಟರೆ ಇನ್ನೇನಕ್ಕೂ ಹಣ ಖರ್ಚು ಮಾಡಿಲ್ಲವಂತೆ.
‘ನಾನು ಬಿಗ್ಬಾಸ್ ಮನೆಗೆ ಹೋಗಲು ಬಟ್ಟೆಗಾಗಿ ಸುಮಾರು ಐದರಿಂದ ಹತ್ತು ಸಾವಿರ ರೂಪಾಯಿ ಮಾತ್ರವೇ ಹಣ ಖರ್ಚು ಮಾಡಿದ್ದೆ. ಸುಮಾರು ಹತ್ತು ಸಾವಿರಕ್ಕೆ ಬಟ್ಟೆಗಳನ್ನು ಖರೀದಿ ಮಾಡಿದ್ದೆ. ವೀಕೆಂಡ್ ಬಟ್ಟೆಗಳು ಪ್ರತಿ ವಾರ ಬರುತ್ತಿದ್ದವು. ನಾನು ತೆಗೆದುಕೊಂಡು ಹೋದ ಬಟ್ಟೆಗಳಲ್ಲಿಯೂ ಜಾಸ್ತಿ ಏನು ಬಳಸಲಿಲ್ಲ. ನನಗೆ ಕಂಪರ್ಟ್ ಅನಿಸಿದ್ದನ್ನು ನಾನು ಹಾಕಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಗಿಲ್ಲಿ.
ಇದನ್ನೂ ಓದಿ:ಬಿಗ್ಬಾಸ್ ಗೆದ್ದ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಆಶೀರ್ವಾದ: ಚಿತ್ರಗಳ ನೋಡಿ
‘ಬಿಗ್ಬಾಸ್ಗೆ ಹೋಗುವ ಮುಂಚೆ ನನ್ನ ತಾಯಿ ವಾಷಿಂಗ್ ಮಷಿನ್ ಕೊಡಿಸಿಕೊಡು ಎಂದು ಕೇಳುತ್ತಿದ್ದರು. ಅದಕ್ಕಾಗಿ ನನ್ನ ಬಳಿ ಇದ್ದ ಹಣದಲ್ಲಿ ಅಮ್ಮನಿಗೆ ವಾಷಿಂಗ್ ಮಷಿನ್ ತೆಗೆಸಿಕೊಟ್ಟೆ. ಹತ್ತು ಸಾವಿರದಲ್ಲಿ ಬಟ್ಟೆ ಖರೀದಿ ಮಾಡಿ ಒಳಗೆ ಹೋದೆ. ನಾನು ಹಣದ ವಿಷಯದಲ್ಲಿ ಸ್ವಲ್ಪ ಜಾಗೃತೆ ಹೆಚ್ಚು. ಹಣವನ್ನು ನಾನು ಹೆಚ್ಚು ಖರ್ಚು ಮಾಡುವುದಿಲ್ಲ. ದುಬಾರಿ ಬಟ್ಟೆಗಳಿಗೆಲ್ಲ ನಾನು ಖರೀದಿಸುವುದಿಲ್ಲ’ ಎಂದು ಗಿಲ್ಲಿ ಹೇಳಿದ್ದಾರೆ.
ಅದೇ ಸೀಸನ್ನ ಸ್ಪರ್ಧಿಯಾಗಿ ಭಾಗವಹಿಸಿ ಮೊದಲ ಕೆಲ ವಾರಗಳಲ್ಲೇ ಮನೆಯಿಂದ ಹೊರಗೆ ಬಂದ ಡಾಗ್ ಸತೀಶ್ ಅವರು ಸುಮಾರು 80 ಲಕ್ಷ ರೂಪಾಯಿ ಹಣ ತೆತ್ತು ಬಟ್ಟೆಗಳನ್ನು ಖರೀದಿ ಮಾಡಿದ್ದಾಗಿ ಹೇಳಿಕೊಂಡಿದ್ದರು. ಪ್ರತಿ ಶರ್ಟ್ಗೆ ಒಂದೊಂದು ಲಕ್ಷ ರೂಪಾಯಿ ಹಣವನ್ನು ನೀಡಿರುವುದಾಗಿ ಅವರು ಹೇಳಿಕೊಂಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ