ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಸರಿಗಮಪ’ ಶೋಅನ್ನು ಹಲವು ಕಾರಣಗಳಿಗೆ ಇಷ್ಟವಾಗುತ್ತದೆ. ಈ ಶೋನ ಮಹಾಗುರು ಹಂಸಲೇಖ ಅವರಿಗಾಗಿಯೇ ಶೋ ನೋಡುವ ಅನೇಕರಿದ್ದಾರೆ. ಈ ವೇದಿಕೆ ಮೇಲೆ ಹಾಡಲು ಬರುವ ಸ್ಪರ್ಧಿಗಳಿಗೆ ಹಂಸಲೇಖ ಅವರ ಮಾರ್ಗದರ್ಶನ ಅತ್ಯಮೂಲ್ಯ. ಸಾಕಷ್ಟು ಸಂದರ್ಭಗಳಲ್ಲಿ ಸಂಗೀತದ ಬಗ್ಗೆ ತಾವು ಹೊಂದಿರುವ ಜ್ಞಾನವನ್ನು ಅವರು ಸ್ಪರ್ಧಿಗಳಿಗೆ ನೀಡಿದ್ದಿದೆ. ಈ ಮಧ್ಯೆ ಅವರು ಶನಿವಾರದ (ನವೆಂಬರ್ 28) ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಅನೇಕರಲ್ಲಿ ಬೇಸರ ಮೂಡಿಸಿತ್ತು. ಈಗ ಹಂಸಲೇಖ ಅವರ ಕಡೆಯಿಂದ ಈ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಿದೆ.
ಹಂಸಲೇಖ ಅವರು ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಿಂತಿಲ್ಲ. ಈ ಮಧ್ಯೆ, ಹಂಸಲೇಖ ಅವರನ್ನು ಶೋನಿಂದ ಹೊರಗೆ ಇಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಶನಿವಾರ ಅವರು ಶೋನಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಹಂಸಲೇಖ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
‘ಪ್ರೀತಿಯ ರಾಘು, ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ’ ಎಂದು ಜೀ ಕನ್ನಡ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರಿಗೆ ಹಂಸಲೇಖ ಪತ್ರ ಬರೆದಿದ್ದಾರೆ.
ಆರೋಗ್ಯವಾಗಿದ್ದೀನಿ ಎಂದಿದ್ದ ಹಂಸಲೇಖ
‘ನಮಸ್ಕಾರ, ನಾನು ಆರೋಗ್ಯವಾಗಿದ್ದೀನಿ. ನನಗೆ ಆರೋಗ್ಯ ತಪ್ಪಿದೆ ಅಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿದೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೆ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖ ಇವತ್ತು ಅನುಭವಿಸುತ್ತಿದ್ದೀನಿ. ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ’ ಎಂದಿದ್ದರು ಹಂಸಲೇಖ.
‘ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ. ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಗಳಿಗೆ ಕಾರಣವಾಗಬಾರದು. ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕೇಳಿಸುತ್ತದೆ. ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು. ನಿಮ್ಮ ಹಂಸಲೇಖ’ ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: ‘ಸರಿಗಮಪ’ ಶೋಗೆ ಹಂಸಲೇಖ ಗೈರಾಗಿದ್ದೇಕೆ?; ವಾಹಿನಿ ಕಡೆಯಿಂದ ಸ್ಪಷ್ಟನೆ
‘ನಾನು ಆರೋಗ್ಯವಾಗಿದ್ದೀನಿ, ಅಭಿಮಾನ ಆವೇಶವಾಗಬಾರದು; ಆವೇಶ ಅವಘಡಗಳಿಗೆ ಕಾರಣವಾಗಬಾರದು’: ಹಂಸಲೇಖ