‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಅನು ಸಿರಿಮನೆ ಕಣ್ಣೀರು ಹಾಕುತ್ತಿದ್ದಾಳೆ. ಪತಿ ಆರ್ಯವರ್ಧನ್ನ ಕಳೆದುಕೊಂಡಿದ್ದೇನೆ ಎಂಬ ದುಃಖದಲ್ಲಿ ಇದ್ದಾಳೆ. ಈ ಕಣ್ಣೀರು ಅಂತ್ಯವಾಗೋದು ಯಾವಾಗ ಎಂಬುದು ವೀಕ್ಷಕರ ಪ್ರಶ್ನೆಯಾಗಿತ್ತು. ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ಸೂಚನೆ ಸಿಕ್ಕಿದೆ. ಆರ್ಯವರ್ಧನ್ (Aryavardhan) ಅವರ ತಾಯಿ ಪ್ರಿಯಾ ಅವರು ರಾಜನಂದಿನಿ ವಿಲಾಸಕ್ಕೆ ಬಂದಿದ್ದಾಳೆ. ಅದೂ ಹೊಸ ಆರ್ಯವರ್ಧನ್ ಜತೆಗೆ. ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಆರ್ಯವರ್ಧನ್ಗೆ ಎಲ್ಲಾ ನೆನಪುಗಳು ಮರೆತಿವೆ. ಆದರೆ, ಮನೆಗೆ ಬರುತ್ತಿದ್ದಂತೆ ಆತನಿಗೆ ನೆನಪುಗಳು ಒಮ್ಮೆ ಕಣ್ಮುಂದೆ ಹಾದು ಹೋಗಿದೆ. ಅನುನ ಮದುವೆ ಆದ ಕ್ಷಣ ಕೂಡ ಒಮ್ಮೆ ನೆನಪಾಗಿದೆ.
ಆರ್ಯವರ್ಧನ್ ತಾಯಿ ಪ್ರಿಯಾಗೆ ಇಬ್ಬರು ಮಕ್ಕಳು. ಆ ಪೈಕಿ ಓರ್ವ ಮೃತಪಟ್ಟಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್ಗೆ ಹಾಕಲಾಗಿದೆ. ಹೀಗಾಗಿ, ಹೊಸ ಆರ್ಯವರ್ಧನ್ (ಹರೀಶ್ ರಾಜ್) ಎಂಟ್ರಿ ಆಗಿದೆ. ತಾಯಿ ಪ್ರಿಯಾ ಜತೆ ರಾಜ ನಂದಿನಿ ವಿಲಾಸಕ್ಕೆ ಆರ್ಯವರ್ಧನ್ ಬಂದಿದ್ದಾನೆ. ಕಥೆಯಲ್ಲಿ ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.
ಹೊಸ ಆರ್ಯವರ್ಧನ್ಗೆ ಸಂಪೂರ್ಣವಾಗಿ ನೆನಪು ಮಾಸಿ ಹೋಗಿದೆ. ತಾಯಿ ಪ್ರಿಯಾಳ ನೆನಪು ಮಾತ್ರ ಆತನಲ್ಲಿ ಉಳಿದುಕೊಂಡಿದೆ. ಹೀಗಾಗಿ, ಪ್ರತಿ ವಿಚಾರಕ್ಕೂ ಆತ ತಾಯಿಯನ್ನೇ ಕೇಳುತ್ತಿದ್ದಾನೆ. ರಾಜನಂದಿನಿ ವಿಲಾಸಕ್ಕೆ ತಾನು ಹೋಗುತ್ತಿರುವ ಹಿಂದಿನ ಉದ್ದೇಶ ಏನು ಎಂಬುದು ಕೂಡ ಆತನಿಗೆ ತಿಳಿದಿಲ್ಲ. ತಾಯಿಯ ಸೂಚನೆಯಂತೆ ಆತ ಅಲ್ಲಿಗೆ ತೆರಳಿದ್ದಾನೆ. ಕಾರು ಇಳಿಯುತ್ತಿದ್ದಂತೆ ಆತನಿಗೆ ಹಳೆಯ ನೆನಪು ಕಾಡಿದೆ.
ಆರ್ಯವರ್ಧನ್ ಮೂಲ ಹೆಸರು ಸಂಜು. ಮನೆಯಲ್ಲಿ ಹೊಸ ಆರ್ಯವರ್ಧನ್ನ ಪರಿಚಯಿಸುವಾಗ ತನ್ನ ಈತನ ಹೆಸರು ಸಂಜು ಎಂದೇ ಪರಿಚಯಿಸಿದ್ದಾಳೆ ಪ್ರಿಯಾ. ಇದನ್ನು ಕೇಳಿ ಅನು ಶಾಕ್ ಆಗಿದ್ದಾಳೆ. ಅವಳಿಗೆ ಆರ್ಯವರ್ಧನ್ ಹೆಸರು ನೆನಪಿಗೆ ಬಂದಿದೆ. ಸಂಜು ಹೆಸರು ಹೇಳುತ್ತಿದ್ದಂತೆ ಆಕೆ ಕಣ್ಣೀರು ಹಾಕೋಕು ಶುರುಮಾಡಿದ್ದಾಳೆ. ‘ಸಂಜು ಅನ್ನೋ ಹೆಸರು ನಂಗೆ ತುಂಬಾನೇ ಇಷ್ಟ. ಈ ಕಾರಣಕ್ಕೆ ಈತನಿಗೆ ಸಂಜು ಎಂದು ಕರೆಯುತ್ತೇನೆ’ ಎಂಬುದಾಗಿ ಸ್ಪಷ್ಟನೆ ನೀಡಿದ್ದಾಳೆ ಪ್ರಿಯಾ.
‘ಸಂಜುಗೆ ಅಪಘಾತವಾಗಿದೆ. ಈ ಕಾರಣಕ್ಕೆ ನೆನಪು ಬರುವವರೆಗೆ ಆತ ಇಲ್ಲಿಯೇ ಉಳಿದುಕೊಳ್ಳುತ್ತಾನೆ ಇಂಬುದಾಗಿ ಪ್ರಿಯಾ ಹೇಳಿದ್ದಾಳೆ. ಇದಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿದೆ. ಆದರೆ, ಮಾನ್ಸಿಗೆ ಈ ಬಗ್ಗೆ ಸಂತೋಷವಿಲ್ಲ. ಅವಳು ಕೊಂಕು ತೆಗೆದಿದ್ದಾಳೆ.
ಇದನ್ನೂ ಓದಿ: ಮೌನಕ್ಕೆ ಶರಣಾದ ಅನು ಸಿರಿಮನೆ; ಮನದಲ್ಲಿ ಹುಟ್ಟಿದೆ ದ್ವೇಷದ ಬೆಂಕಿ?
ಮತ್ತೊಂದೆಡೆ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಮನೆಯಲ್ಲಿದ್ದ ಫೋಟೋವನ್ನು ತೆಗೆದು ಮೂಲೆಗೆ ಸೇರಿಸಲಾಗಿದೆ. ಧಾರಾವಾಹಿಯ ಟೈಟಲ್ ಕಾರ್ಡ್ ಕೂಡ ಬದಲಾಗಿದೆ. ಹೀಗಾಗಿ ಇನ್ನುಮುಂದೆ ಹರೀಶ್ ರಾಜ್ ಅವರೇ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗೆ ಸಿಕ್ಕ ಟ್ವಿಸ್ಟ್ ಅನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಸದ್ಯದ ಕುತೂಹಲ.
ಶ್ರೀಲಕ್ಷ್ಮಿ ಎಚ್.
Published On - 9:07 am, Sat, 24 September 22