ಟಿಆರ್ಪಿ ರೇಸ್ನಲ್ಲಿ ಧಾರಾವಾಹಿಗಳ ಸ್ಥಾನಪಲ್ಲಟ ಆಗೋದು ಸಾಮಾನ್ಯ. ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್ಪಿಯಲ್ಲಿ ಬದಲಾಗುತ್ತಲೇ ಇರುತ್ತದೆ. ಆದರೆ, ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಪುಟ್ಟಕ್ಕನ ಮಕ್ಕಳು’ (Puttakkana Makkalu) ಧಾರಾವಾಹಿ ಕಳೆದ ಕೆಲವು ತಿಂಗಳಿಂದ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ವಿಶೇಷ ಎಂಬಂತೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಗೀತಾ’ ಧಾರಾವಾಹಿಯ (Geetha Serials) ಟಿಆರ್ಪಿ ಏಕಾಏಕಿ ಏರಿಕೆ ಕಂಡಿದೆ. ಹಾಗಾದರೆ ಈ ವಾರ ಯಾವ ಧಾರಾವಾಹಿ ಯಾವ ಸ್ಥಾನವನ್ನು ಕಾಪಾಡಿಕೊಂಡಿದೆ? ಇತ್ತೀಚೆಗೆ ಆರಂಭ ಆದ ಧಾರಾವಾಹಿಗಳಿಗೆ ಎಷ್ಟನೇ ಸ್ಥಾನ ಸಿಕ್ಕಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ 33ನೇ ವಾರದ ಟಿಆರ್ಪಿ ಪಟ್ಟಿಯಲ್ಲಿದೆ ಮಾಹಿತಿ.
ಉಮಾಶ್ರೀ ಅವರು ಹಿರಿತೆರೆಯಲ್ಲಿ ಮಿಂಚಿದವರು. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಸಂಜನಾ ಬುರುಳಿ ಮೊದಲಾದವರು ನಿರ್ವಹಿಸುತ್ತಿರುವ ಪಾತ್ರವೂ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಎರಡಂಕಿ ಟಿಆರ್ಪಿ ಪಡೆದು ಮೊದಲ ಸ್ಥಾನ ಕಾಪಾಡಿಕೊಂಡಿದೆ.
‘ಸೀತಾ ರಾಮ’ ಧಾರಾವಾಹಿಯನ್ನು ಬಹಳ ಅದ್ದೂರಿಯಾಗಿ ಕಟ್ಟಿಕೊಡಲಾಗುತ್ತಿದೆ. ರಾಮ ಹಾಗೂ ಸೀತಾ (ವೈಷ್ಣವಿ-ಗಗನ್) ಮಧ್ಯೆ ಈಗ ತಾನೇ ಆಪ್ತತೆ ಮೂಡುತ್ತಿದೆ. ಇದಕ್ಕೆ ಸಿಹಿ (ರೀತು ಸಿಂಗ್) ಸೇತುವೆ ಆಗುತ್ತಿದ್ದಾಳೆ. ಅಶೋಕ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ಕಾಮಿಡಿ ಪಂಚ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಈ ಧಾರಾವಾಹಿ ಕಳೆದ ವಾರ ಎರಡನೇ ಸ್ಥಾನದಲ್ಲಿತ್ತು. ಅದನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದೆ.
ನಿಶಾ ರವಿಕೃಷ್ಣನ್, ರಕ್ಷಿತ್ ಗೌಡ ಮುಖ್ಯಭೂಮಿಕೆ ನಿಭಾಯಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ಧಾರಾವಾಹಿ ಹಾಗೂ ‘ಸೀತಾ ರಾಮ’ ಧಾರಾವಾಹಿ ಮಧ್ಯೆ ಟಫ್ ಕಾಂಪಿಟೇಷನ್ ಇದೆ. ‘ಗಟ್ಟಿಮೇಳ’ ಧಾರಾವಾಹಿ ಸಾವಿರ ಎಪಿಸೋಡ್ ದಾಟಿದರೂ ಟಿಆರ್ಪಿ ರೇಸ್ನಲ್ಲಿ ಮುಂದಿದೆ.
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಕಥೆಯಲ್ಲಿ ಪ್ರಮುಖ ತಿರುವು ಸಿಕ್ಕಿರುವುದರಿಂದ ಈ ಧಾರಾವಾಹಿಯ ಟಿಆರ್ಪಿ ಹೆಚ್ಚಿದೆ. ಸುಧಾರಾಣಿ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.
ಇದನ್ನೂ ಓದಿ: ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್ಪಿ ರೇಸ್ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ
ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ ‘ಅಮೃತಧಾರೆ’ ಧಾರಾವಾಹಿ ಈ ವಾರ ಐದನೇ ಸ್ಥಾನದಲ್ಲಿದೆ. ಈ ಧಾರಾವಾಹಿಯಲ್ಲಿ ಈ ವಾರ ಮದುವೆ ಇದೆ. ಹೀಗಾಗಿ 34ನೇ ವಾರದಲ್ಲಿ ಟಿಆರ್ಪಿ ಹೆಚ್ಚಬಹುದು.
ಆರನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಇದೆ. ಏಳನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಈ ಬಾರಿ ‘ಗೀತಾ’ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಸಿಕ್ಕಿದೆ. ಹೀಗಾಗಿ, ಈ ಧಾರಾವಾಹಿಗೆ ಎಂಟನೇ ಸ್ಥಾನ ಸಿಕ್ಕಿದೆ.
Published On - 1:04 pm, Thu, 24 August 23