‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ರತ್ನಮಾಲಾ ಪ್ರಮುಖಳು. ಇಡೀ ಧಾರಾವಾಹಿಗೆ ಅವಳ ಪಾತ್ರವೇ ಹೈಲೈಟ್. ಸಾನಿಯಾ ಮಾಡೋ ಪ್ರತಿ ಪ್ಲ್ಯಾನ್ನ ಫ್ಲಾಪ್ ಮಾಡಿಸುವ ಕೆಲಸ ರತ್ನಮಾಲಾ ಮಾಡುತ್ತಲೇ ಬರ್ತಿದ್ದಾಳೆ. ಇನ್ನು ಸಾನಿಯಾ ಮಾಡುವ ಕೆಲ ಕೆಟ್ಟ ಕೆಲಸವನ್ನು ನೋಡಿದ್ದೂ ನೋಡದಂತೆ ಇರ್ತಾಳೆ ರತ್ನಮಾಲಾ. ಅತ್ತು-ಕರೆದು ತೀಡಿದ್ದಕ್ಕೆ ಸಾನಿಯಾಗೆ ಎಂಡಿ ಪಟ್ಟ ನೀಡಿದ್ಲು ರತ್ನಮಾಲಾ. ಸಾನಿಯಾ ತನ್ನನ್ನು ಕೊಲ್ಲೋಕೆ ಪ್ಲ್ಯಾನ್ ರೂಪಿಸಿರುವ ವಿಚಾರ ಗೊತ್ತಿದ್ದ ಹೊರತಾಗಿಯೂ ಸುಮ್ಮನೆ ಇದ್ದಾಳೆ ರತ್ನಮಾಲಾ. ಈಗ ಆಕೆಯನ್ನು ಕೆಲಸದಿಂದ ತೆಗೆಯೋಕೆ ರತ್ನಮಾಲಾ (Ratnamala) ನಿರ್ಧಾರ ಮಾಡಿದಂತಿದೆ. ಈ ಮಧ್ಯೆ ಸಾನಿಯಾಗೆ ತಾನೇ ಮಾಡಿದ ಪ್ಲ್ಯಾನ್ ಮುಳುವಾಗಿದೆ.
ಹರ್ಷನನ್ನು ಭುವಿ ಮದುವೆ ಆಗಿದ್ದಾಳೆ. ಇವರ ಮದುವೆ ಬಗ್ಗೆ ಸಾನಿಯಾಗೆ ಎಲ್ಲಿಲ್ಲದ ಅಸಮಾಧಾನ. ರತ್ನಮಾಲಾ ಸಂಸ್ಥೆಗೆ ಭುವಿ ಎಂಡಿ ಎಂಬ ವಿಚಾರವನ್ನು ರತ್ನಮಾಲಾ ಈ ಮೊದಲೇ ಘೋಷಣೆ ಮಾಡಿದ್ದಳು. ಇದನ್ನು ಸಾನಿಯಾ ಕದ್ದು ಕೇಳಿದ್ದಾಳೆ. ಆಗಿನಿಂದ ಆಕೆಯ ತಲೆಯಲ್ಲಿ ಬೇರೆಯದೇ ಆಲೋಚ್ನೆ ಓಡ್ತಿದೆ. ಹೇಗಾದ್ರೂ ಮಾಡಿ ತನ್ನ ಎಂಡಿ ಸ್ಥಾನ ಉಳಿಸಿಕೊಳ್ಳೇಬೇಕು ಎಂಬ ಹಠಕ್ಕೆ ಬಿದ್ದಿದ್ದಾಳೆ. ಮತ್ತೊಂದೆಡೆ ಸಾನಿಯಾ ಎಂಡಿ ಪಟ್ಟ ಹೋಗೋದು ಖಚಿತವಾದಂತಿದೆ.
ಸಾನಿಯಾ ವಿಚಾರವಾಗಿ ರತ್ನಮಾಲಾ ಜತೆ ಭುವಿ ಮಾತನಾಡಿದ್ದಾಳೆ. ‘ಸಾನಿಯಾ ಕೂಡ ನಿಮ್ಮ ಸೊಸೆ. ಆದರೆ, ನನಗೆ ಕೊಟ್ಟಷ್ಟು ಪ್ರಾಮುಖ್ಯತೆ ಅವರಿಗೆ ನೀವು ಕೊಡ್ತಿಲ್ಲವಲ್ಲ’ ಎಂಬ ಮಾತನ್ನು ರತ್ನಮಾಲಾ ಎದುರು ಪ್ರಸ್ತಾಪ ಮಾಡಿದ್ದಾಳೆ ಭುವಿ. ಇದನ್ನು ಕೇಳುತ್ತಿದ್ದಂತೆ ರತ್ನಮಾಲಾ ಸಖತ್ ಗಂಭೀರಳಾಗಿದ್ದಾಳೆ. ‘ನಾನು ಸಂಸ್ಥೆಯನ್ನು ಮಗುವಿನಂತೆ ಕಟ್ಟು ಬೆಳ್ಸಿದ್ದೀನಿ. ಅದನ್ನ ಯಾರ್ಯಾದೋ ಕೈಗೆ ಕೊಡೋಕೆ ನಂಗೆ ಇಷ್ಟ ಇಲ್ಲ. ಈ ಕಾರಣಕ್ಕೆ ಸಾನಿಯಾನ ಕೆಲಸದಿಂದ ತೆಗೆಯೋಕೆ ಸಿದ್ಧತೆ ನಡೆದಿದೆ’ ಎಂಬ ಮಾತನ್ನು ರತ್ನಮಾಲಾ ಹೇಳಿದ್ದಾಳೆ. ಈ ಮಾತು ಕೇಳಿ ಭುವಿ ಶಾಕ್ ಆದಳು. ಆದರೆ, ರತ್ನಮಾಲಾ ಯಾವುದೇ ಚಿಂತೆ ಇಲ್ಲದೆ ನಿದ್ರಿಸಿದಳು.
ಮತ್ತೊಂದೆಡೆ ರತ್ನಮಾಲಾಳನ್ನು ಕೆಳಗೆ ಬೀಳಿಸೋಕೆ ಹೋಗಿ ಸಾನಿಯಾ ಗಂಭೀರ ಪೆಟ್ಟು ಮಾಡಿಕೊಂಡಿದ್ದಾಳೆ. ಹೌದು, ಅಮ್ಮಮ್ಮ ಮೊಬೈಲ್ ಕರೆಯಲ್ಲಿ ಬ್ಯುಸಿ ಇದ್ದಳು. ಆಕೆ ಮೆಟ್ಟಿಲು ಇಳಿದು ಬರುವಾಗ ಎಣ್ಣೆ ಹಾಕಿ ಆಕೆಯನ್ನು ಬೀಳಿಸಬೇಕು ಎಂಬುದು ಆಕೆಯ ಆಲೋಚನೆ ಆಗಿತ್ತು. ಆದರೆ, ಈ ಪ್ಲ್ಯಾನ್ ಉಲ್ಟಾ ಹೊಡೆದಿದೆ. ಎಣ್ಣೆ ಹಾಕಿದ ಜಾಗದಲ್ಲಿ ತಾನೇ ಓಡಿ ಹೋಗಿದ್ದರಿಂದ ಆಕೆ ಕಾಲು ಜಾರಿ ಬಿದ್ದಿದ್ದಾಳೆ. ಇದರಿಂದ ಆಕೆಯ ಹಣೆಗೆ ತೀವ್ರವಾಗಿ ಪೆಟ್ಟಾಗಿದೆ. ಒಟ್ಟಿನಲ್ಲಿ ತಾನೇ ತೋಡಿದ ಹೊಂಡದಲ್ಲಿ ಆಕೆ ಬಿದ್ದಿದ್ದಾಳೆ. ಈ ಕಾರಣದಿಂದ ಆಕೆ ಆಸ್ಪತ್ರೆ ಸೇರೋದು ಪಕ್ಕಾ ಆಗಿದೆ. ಧಾರಾವಾಹಿ ಮುಂದೆ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಈಗ ಹೆಚ್ಚು ಕಾಣಿಸಿಕೊಳ್ಳದೇ ಇರಲು ಇದೇ ಕಾರಣ
‘ಕನ್ನಡತಿ’ ಧಾರಾವಾಹಿ ಈಗಾಗಲೇ 700 ಶೋಗಳನ್ನು ಪೂರ್ಣಗೊಳಿಸಿದೆ. ಮುಂದಿನ ದಿನಗಳಲ್ಲಿ ಭುವಿ ಕೈಗೆ ಅಧಿಕಾರ ಹಸ್ತಾಂತರ ಆಗಬಹುದು. ಆಗ, ಸಾನಿಯಾ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ಕಾದು ನೋಡ್ಬೇಕಿದೆ.
ಶ್ರೀಲಕ್ಷ್ಮಿ ಎಚ್.