ಮಂಜು ಪಾವಗಡ ಅವರು ‘ಕನ್ನಡ ಬಿಗ್ ಬಾಸ್ ಸೀಸನ್ 8’ ಗೆದ್ದ ಬಳಿಕ ಖ್ಯಾತಿ ದುಪಟ್ಟಾಗಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಮಜಾ ಭಾರತ’ ಕಾರ್ಯಕ್ರಮದಲ್ಲಿ ಸಖತ್ ಎಂಟರ್ಟೇನ್ಮೆಂಟ್ ನೀಡಿದ್ದರು ಅವರು. ನಂತರ ಬಿಗ್ ಬಾಸ್ನಲ್ಲಿಯೂ ಮನರಂಜನೆ ನೀಡುವುದನ್ನು ಮುಂದುವರಿಸಿದ್ದರು. ಆ ಶೋನ ವಿನ್ನರ್ ಕೂಡ ಆದರು. ಬಿಗ್ ಬಾಸ್ನಿಂದ ಅವರಿಗೆ ದೊಡ್ಡ ಮಟ್ಟದ ಹೆಸರು ಬಂದಿದೆ. ಈಗ ಮಂಜು ಅವರು ವಿಚಿತ್ರ ಹೆಸರಲ್ಲಿ ಅವಾರ್ಡ್ ಒಂದನ್ನು ನೀಡೋಕೆ ಮುಂದಾಗಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಏನಿದು ಸಮಾಚಾರ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಜಾ ರಾಣಿ’ ರಿಯಾಲಿಟಿ ಶೋ ಅಂತ್ಯಗೊಂಡಿದೆ. ಸೃಜನ್ ಲೋಕೇಶ್ ಮತ್ತು ಹಿರಿಯ ನಟಿ ತಾರಾ ಜಡ್ಜ್ ಆಗಿದ್ದ ಈ ಕಾರ್ಯಕ್ರಮದ ಫಿನಾಲೆ ಭಾನುವಾರ (ನವೆಂಬರ್ 21) ನಡೆದಿದೆ. ರಿಯಾಲಿಟಿ ಶೋ ಫಿನಾಲೆ ಎಂದರೆ ಅಲ್ಲೊಂದು ಅದ್ದೂರಿತನ ಇರುತ್ತದೆ. ಅದೇ ರೀತಿ ಈ ಶೋನ ಕೊನೆಯ ಎಪಿಸೋಡ್ ಸಖತ್ ಗ್ರ್ಯಾಂಡ್ ಆಗಿತ್ತು. ಈ ರಿಯಾಲಿಟಿಶೋನಲ್ಲಿ ‘ಗೊಂಬೆ’ ನೇಹಾ ಗೌಡ ಹಾಗೂ ಅವರ ಪತಿ ಚಂದನ್ ಗೆದ್ದು ಬೀಗಿದ್ದಾರೆ. ಈ ಶೋಗೆ ಮಂಜು ಕೂಡ ಆಗಮಿಸಿದ್ದರು. ಈ ವೇಳೆ ಅವರು ತಾವು ವಿಶೇಷ ಅವಾರ್ಡ್ ಕೊಡುವುದಾಗಿ ಘೋಷಿಸಿದರು.
‘ನಾನು ಬಿಗ್ ಬಾಸ್ಗೆ ಹೋಗಿ ಟ್ರೋಫಿ ತೆಗೆದುಕೊಂಡು ಬಂದೆ. ಆದರೆ, ಸಾಕಷ್ಟು ಜನರಿಗೆ ಇನ್ನೂ ಅವಾರ್ಡ್ ಸಿಕ್ಕಿಲ್ಲ. ಅವರೆಲ್ಲರೂ ಎಲೆಮರೆಯ ಕಾಯಿ ರೀತಿ ಇದ್ದಾರೆ. ‘ನೆನಪಿಗ್ ಇರ್ಲಿ’ ಅಂತ ಈ ಪ್ರಶಸ್ತಿಯ ಹೆಸರು’ ಎಂದರು ಮಂಜು. ಅಷ್ಟೇ ಅಲ್ಲ ‘ನೊಂದ ಗಂಡ’, ‘ಪ್ರಾಮಿಸಿಂಗ್ ಪ್ರಿಯತಮ’ ಮತ್ತಿತ್ಯಾದಿ ವಿಭಾಗದಲ್ಲಿ ಈ ಪ್ರಶಸ್ತಿ ನೀಡುವುದಾಗಿ ಅವರು ಘೋಷಿಸಿದರು.
‘ರಾಜಾ-ರಾಣಿ’ ಗೆದ್ದ ನೇಹಾ ಗೌಡ-ಚಂದನ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರವಾಗಿತ್ತು. ಈ ಮೂಲಕ ಸಾವಿರಾರು ಕಂತುಗಳನ್ನು ಈ ಧಾರಾವಾಹಿ ಕಂಡಿದೆ. ಅಲ್ಲದೆ, ವೀಕ್ಷಕರಿಗೂ ಧಾರಾವಾಹಿ ಇಷ್ಟವಾಗಿತ್ತು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಗೊಂಬೆ ಎಂದೇ ಜನಪ್ರಿಯರಾದವರು ನೇಹಾ ಗೌಡ. ಅವರು ಚಂದನ್ ಜತೆ ಮದುವೆ ಆಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈಗ ಈ ದಂಪತಿ ರಾಜಾ ರಾಣಿ ಕಿರೀಟ ಗೆದ್ದಿದ್ದಾರೆ.
ಇದನ್ನೂ ಓದಿ: ‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ