ಸೆಲೆಬ್ರಿಟಿಗಳು (Celerity) ತಮ್ಮ ಖಾಸಗಿ ಬದುಕಿನ ವಿಚಾರವನ್ನು ಆದಷ್ಟು ಗುಟ್ಟಾಗಿ ಇಡೋಕೆ ಪ್ರಯತ್ನಿಸುತ್ತಾರೆ. ಈ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಪ್ರೀತಿಪಾತ್ರರರ ಜತೆ ಸುತ್ತಾಟ ನಡೆಸಿದ ಹೊರತಾಗಿಯೂ ಆ ಬಗ್ಗೆ ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಾರೆ. ಈ ರೀತಿಯ ವಿಚಾರಗಳು ಮಾಧ್ಯಮ ಅಥವಾ ಫ್ಯಾನ್ಸ್ ಕಿವಿಗೆ ಬಿದ್ದರೆ ಅದು ನಾನಾ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವ ಭಯ ಅವರನ್ನು ಸದಾ ಕಾಡುತ್ತಿರುತ್ತದೆ. ಈಗ ಮರಾಠಿ ಕಿರುತೆರೆ ನಟಿ ವೀಣಾ ಜಗ್ತಾಪ್ಗೆ (Veena Jagtap) ಅಭಿಮಾನಿಯೋರ್ವ ವೈಯಕ್ತಿಕ ಪ್ರಶ್ನೆ ಕೇಳಿದ್ದಾನೆ. ಇದಕ್ಕೆ ನಟಿ ಖಡಕ್ ಉತ್ತರ ನೀಡಿದ್ದಾರೆ.
ವೀಣಾ ಅವರು 2019ರಲ್ಲಿ ಪ್ರಸಾರವಾದ ‘ಮರಾಠಿ ಬಿಗ್ ಬಾಸ್ 2’ ಮೂಲಕ ಹೆಚ್ಚು ಖ್ಯಾತಿ ಗಳಿಸಿದರು. ಈ ರಿಯಾಲಿಟಿ ಶೋನಿಂದ ಅವರಿಗೆ ಆಫರ್ಗಳು ಹೆಚ್ಚಿದವು. ಸುಮಾರು 4 ಲಕ್ಷ ಜನರು ವೀಣಾ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ಅವರ ಬಗ್ಗೆ ಈ ಮೊದಲಿನಿಂದಲೂ ವದಂತಿ ಒಂದಿದೆ. ಈ ಬಗ್ಗೆ ಅಭಿಮಾನಿ ಪ್ರಶ್ನೆ ಮಾಡಿದ್ದಾನೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರೀತಿ ಮೂಡಿದ ಸಾಕಷ್ಟು ಉದಾಹರಣೆ ಇದೆ. ಈ ಸಾಲಿನಲ್ಲಿ ವೀಣಾ ಕೂಡ ಇದ್ದಾರೆ. ಬಿಗ್ ಬಾಸ್ನ ಸಹ ಸ್ಪರ್ಧಿ ಆಗಿದ್ದ ಶಿವ್ ಠಾಕ್ರೆ ಜತೆ ವೀಣಾಗೆ ಪ್ರೀತಿ ಮೂಡಿದೆ ಎನ್ನುವ ಮಾತು ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಶನ್ ನಡೆಸಿದ್ದರು. ಈ ವೇಳೆ ಅವರಿಗೆ ನಾನಾ ರೀತಿಯ ಪ್ರಶ್ನೆಗಳು ಎದುರಾಗಿದ್ದವು. ಆ ಪೈಕಿ ರಿಲೇಶನ್ಶಿಪ್ ಬಗ್ಗೆಯೂ ಪ್ರಶ್ನೆ ಎದುರಾಯಿತು. ಇದಕ್ಕೆ ಅವರು ಉತ್ತರ ನೀಡದೇ ಇರಬಹುದಿತ್ತು. ಆದರೆ, ಅವರು ಆ ರೀತಿ ಮಾಡಿಲ್ಲ ಬದಲಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
‘ಮೊದಲು ಮತ್ತು ಕೊನೆಯದಾಗಿ ಹೇಳುತ್ತಿದ್ದೇನೆ. ನನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಾನು ಉತ್ತರ ನೀಡುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ಪೇಸ್ ನೀಡಿ. ನಾನು ಎಂದಾದರೂ ಬಂದು ನಿಮ್ಮ ಕಥೆ ಏನು? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದೀನಾ? ನಿಮ್ಮದನ್ನು ನೀವು ನೋಡಿಕೊಳ್ಳಿ’ ಎಂದು ವೀಣಾ ಉತ್ತರಿಸಿದ್ದಾರೆ. ಕಳೆದ ವರ್ಷ ಇವರ ರಿಲೇಶನ್ಶಿಪ್ ಬ್ರೇಕಪ್ನಲ್ಲಿ ಅಂತ್ಯವಾಗಿದೆ ಎಂಬ ವದಂತಿ ಹಬ್ಬಿತ್ತು. ವೀಣಾ ಅವರು 2013ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.