ವಾರಗಳು ಕಳೆದಂತೆ ಬಿಗ್ಬಾಸ್ (BiggBoss) ಮನೆ ಚಿಕ್ಕದಾಗುತ್ತಾ ಬರುತ್ತಿದೆ. ಮನೆಯ ಗಾತ್ರ ಅಷ್ಟೇ ಇದೆ ಆದರೆ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತಿದೆ. ಫಿನಾಲೆಗೆ ಹತ್ತಿರವಾದಂತೆ ಒಳ್ಳೆಯ ಸ್ಪರ್ಧಿಗಳೇ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಈ ವಾರಾಂತ್ಯದ ಎಪಿಸೋಡ್ ನಡೆಸಿಕೊಡಲು ಸುದೀಪ್ ಬಂದಿರಲಿಲ್ಲ, ಹಾಗಾಗಿ ಎಲಿಮಿನೇಷನ್ ಇರುವುದಿಲ್ಲ ಎಂದು ಹಲವರು ಭಾವಿಸಿದ್ದರು. ಆದರೆ ಎಲಿಮಿನೇಷನ್ ಪ್ರಕ್ರಿಯೆಯನ್ನು ಬಿಗ್ಬಾಸ್ ಮುಗಿಸಿದ್ದು ಸಖತ್ ಶಾಕ್ ಅನ್ನೇ ನೀಡಿದ್ದಾರೆ.
ಸಂಗೀತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಅವಿನಾಶ್, ಸಿರಿ ಮತ್ತು ಮೈಖಲ್ ಅವರುಗಳು ಈ ವಾರ ನಾಮಿನೇಟ್ ಆಗಿದ್ದರು. ಶನಿವಾರದ ಎಪಿಸೋಡ್ನಲ್ಲಿ ಮನೆಗೆ ಅತಿಥಿಯಾಗಿ ಬಂದಿದ್ದ ಶ್ರುತಿ ಅವರು ಸಂಗೀತಾ ಎಲಿಮಿನೇಷನ್ನಿಂದ ಪಾರಾಗಿರುವುದನ್ನು ಬಿಗ್ಬಾಸ್ ಆದೇಶದಂತೆ ಘೋಷಿಸಿದ್ದರು. ಅದಾದ ಬಳಿಕ ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಅವಿನಾಶ್, ಸಿರಿ ಮತ್ತು ಮೈಖಲ್ ಅವರುಗಳು ಎಲಿಮಿನೇಷನ್ ಹಾದಿಯಲ್ಲಿ ಉಳಿದಿದ್ದರು.
ಭಾನುವಾರದ ಎಪಿಸೋಡ್ಗೆ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಅವರುಗಳು ಬಿಗ್ಬಾಸ್ ಮನೆಗೆ ಬಂದಿದ್ದರು. ಬಿಗ್ಬಾಸ್ ಆದೇಶದಂತೆ ಕೆಲವು ಟಾಸ್ಕ್ಗಳನ್ನು ಆಡಿಸಿ ನಾಮಿನೇಷನ್ನಿಂದ ಪಾರಾದವರ ಹೆಸರು ಘೋಷಿಸಲಾಯ್ತು. ಮೊದಲಿಗೆ ಐದು ಪ್ಲಾಸ್ಕ್ಗಳನ್ನು ಒಟ್ಟಿಗೆ ಇಡಲಾಯ್ತು, ಅದರಲ್ಲಿ ಹಳದಿ ಬಣ್ಣದ ದ್ರವ ಇಡಲಾಗಿತ್ತು. ನಾಮಿನೇಟ್ ಆಗಿರುವ ಸದಸ್ಯರು ಆ ಫ್ಲಾಸ್ಕ್ ಒಳಕ್ಕೆ ದ್ರವವೊಂದನ್ನು ಹಾಕುವಂತೆ ಹೇಳಲಾಯ್ತು. ಯಾರ ಪ್ಲಾಸ್ಕ್ನಲ್ಲಿರುವ ದ್ರವದ ಬಣ್ಣ ಹಳದಿಯಾಗಿಯೇ ಉಳಿಯುತ್ತದೆಯೋ ಅವರು ನಾಮಿನೇಷನ್ನಿಂದ ಪಾರಾಗುತ್ತಾರೆ ಎಂದು ಹೇಳಲಾಯ್ತು.
ಇದನ್ನೂ ಓದಿ:‘ವಿನಯ್ ಸ್ವೀಟ್ ವ್ಯಕ್ತಿ, ಸಂಗೀತಾ ಬಹಳ ಒಳ್ಳೆಯವರು’ ಬಿಗ್ಬಾಸ್ ಮನೆಯಲ್ಲಿ ಏನಾಗುತ್ತಿದೆ?
ಅಂತೆಯೇ ಸಿರಿ, ಮೈಖಲ್, ಅವಿನಾಶ್ ಅವರು ದ್ರವ ಸುರಿದರು ಎಲ್ಲರ ಪ್ಲಾಸ್ಕ್ನಲ್ಲಿದ ದ್ರವ ಕೆಂಪಾಯಿತು. ಕೊನೆಗೆ ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಒಟ್ಟಿಗೆ ದ್ರವ ಸುರಿದರು. ಡ್ರೋನ್ ಪ್ರತಾಪ್ರ ಪ್ಲಾಸ್ಕ್ನಲ್ಲಿನ ದ್ರವ ಹಳದಿ ಬಣ್ಣದಲ್ಲಿಯೇ ಉಳಿದು ಅವರು ಎಲಿಮಿನೇಷನ್ನಿಂದ ಪಾರಾದರು. ಅದಾದ ಬಳಿಕ ಕೇಕ್ ಟಾಸ್ಕ್ ಮಾಡಿಸಲಾಯ್ತು. ಮೂರು ಕೇಕ್ಗಳನ್ನು ಇಟ್ಟು ಅದನ್ನು ಕೈಯಿಂದ ಮುಟ್ಟದೆ ತಿಂದರೆ ಎಲಿಮಿನೇಷನ್ನಿಂದ ಪಾರಾಗುವ ಸ್ಪರ್ಧಿಯ ಹೆಸರು ಕಾಣಲಿದೆ ಎನ್ನಲಾಯ್ತು. ಆ ಟಾಸ್ಕ್ನಲ್ಲಿ ಸಿರಿ ಹೆಸರು ಇದ್ದು ಅವರು ಎಲಿಮಿನೇಷನ್ನಿಂದ ಪಾರಾದರು.
ಕೊನೆಗೆ ಅವಿನಾಶ್ ಹಾಗೂ ಮೈಖಲ್ ಉಳಿದರು. ಆಗ ಗಾರ್ಡನ್ ಏರಿಯಾನಲ್ಲಿ ಎರಡು ಕಾರುಗಳು ಬಂದವು. ಅವಿ ಹಾಗೂ ಮೈಖಲ್ ಗಾರ್ಡನ್ ಏರಿಯಾಕ್ಕೆ ಬಂದು ಇಬ್ಬರೂ ಒಂದೊಂದು ಕಾರು ಹತ್ತಿದರು. ಕೆಲ ಹೊತ್ತು ಎರಡೂ ಕಾರುಗಳು ಅಲ್ಲಿಯೇ ಗಾರ್ಡನ್ ಏರಿಯಾದಲ್ಲಿ ಸುತ್ತು ಹೊಡೆದವು. ಬಳಿಕ ಮೈಖಲ್ ಕೂತಿದ್ದ ಕಾರು ಮೊದಲಿಗೆ ಹೊರಗೆ ಹೋಯ್ತು. ಆಗ ಅವಿನಾಶ್ ಉಳಿದುಕೊಂಡರೇನೊ ಎಂದು ಮನೆಯ ಸದಸ್ಯರು ಅಂದುಕೊಂಡರು. ಆದರೆ ಬಳಿಕ ಅವಿನಾಶ್ ಕೂತಿದ್ದ ಕಾರು ಸಹ ಹೊರಗೆ ಹೋಗಿಬಿಟ್ಟತು. ಆ ಮೂಲಕ ಈ ವಾರ ಡಬಲ್ ಎಲಿಮಿನೇಷನ್ ಆಗಿ ಅವಿನಾಶ್, ಮೈಖಲ್ ಇಬ್ಬರೂ ಹೊರಗೆ ಹೋದರು.
ಈಗ ಮನೆಯಲ್ಲಿ ಸಂಗೀತಾ, ಡ್ರೋನ್ ಪ್ರತಾಪ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ನಮ್ರತಾ ಗೌಡ, ಸಿರಿ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಅವರುಗಳು ಮಾತ್ರವೇ ಉಳಿದಿದ್ದಾರೆ. ಇನ್ನು ಮೂರು ವಾರವಷ್ಟೆ ಉಳಿದಿದ್ದು, ಮುಂದಿನ ವಾರ ಯಾರು ಹೊರಗೆ ಹೋಗಲಿದ್ದಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ