
ಬಿಗ್ಬಾಸ್ ಮನೆಯಲ್ಲಿ ಕಳೆದ ಕೆಲ ವಾರಗಳಿಂದ ನಗು, ತಮಾಷೆ, ಭಾವುಕತೆ, ಸೆಂಟಿಮೆಂಟ್ಗಳು ತುಂಬಿವೆ. ಆದರೆ ಇದೀಗ ಬಿಗ್ಬಾಸ್ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ರೌಡಿತನ ಮೆರೆದಿದ್ದ ಮಾಡರ್ನ್ ಕವಿ ಮಂಜ ಇದೀಗ ಬಿಗ್ಬಾಸ್ ಮನೆಗೆ ಮರಳುತ್ತಿದ್ದಾರೆ. ಆತನ ವರ್ತನೆಯ ಕಾರಣದಿಂದಾಗಿ ಮಂಜನನ್ನು ಹೊರಗೆ ಹಾಕಿದ್ದ ಬಿಗ್ಬಾಸ್ ಇದೀಗ ಮತ್ತೆ ಅವರೇ ಮಂಜನನ್ನು ಮನೆಗೆ ಕಳಿಸುತ್ತಿದ್ದಾರೆ.
ಇಂದು (ನವೆಂಬರ್ 08) ಬೆಳಿಗ್ಗೆ ಪ್ರಸಾರ ಆಗಿರುವ ಪ್ರೋಮೊನಲ್ಲಿ ತೋರಿಸಿರುವಂತೆ ಸುದೀಪ್ ಅವರು ಮಾಡರ್ನ್ ಕವಿ ಮಂಜನನ್ನು ವೇದಿಕೆಗೆ ಕರೆದಿದ್ದಾರೆ. ಅದಕ್ಕೂ ಮುಂಚೆ, ‘ದೀಪಾವಳಿಗೆ ಬರೀ ಸಿಹಿ ಮಾತ್ರವಲ್ಲ ಸ್ವಲ್ಪ ಖಾರವನ್ನೂ ಸಹ ಮನೆಗೆ ಕಳಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಆ ಮೂಲಕ ಮಂಜನನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸುತ್ತಿದ್ದಾರೆ ಬಿಗ್ಬಾಸ್. ಮಂಜನೂ ಸಹ, ಕಳೆದ ಬಾರಿ ನಾನು ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಸುದೀಪ್ ಎದುರು ಹೇಳಿ ಒಳಗೆ ಹೋಗಿದ್ದಾರೆ. ಆದರೆ ಹೋಗುವ ಮುಂಚೆ, ‘ಮನೆಯಲ್ಲಿ ಎಲ್ಲರಿಗೂ ಪಟಾಕಿ ಇಡುತ್ತೀನಿ’ ಎಂದು ಹೇಳಿ ಒಳಗೆ ಹೋಗಿದ್ದಾರೆ ಮಂಜ.
ಮಂಜ ‘ಅಗ್ನಿಪರೀಕ್ಷೆ’ ಮೂಲಕ ಬಿಗ್ಬಾಸ್ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ಮಂಜ ಮಿತಿ ಮೀರಿದ ವರ್ತನೆ ತೋರಿದ್ದರು. ತನ್ನನ್ನು ತಾನು ‘ಮಾಡರ್ನ್ ಕವಿ’ ಎಂದು ಕರೆದುಕೊಳ್ಳುವ ಮಂಜ, ಮನೆಯೊಳಗೆ ತೋರಿದ್ದು ಮಾತ್ರ ಅಪ್ಪಟ ರೌಡಿ ವರ್ತನೆ. ತೀರಾ ಕೆಟ್ಟದಾಗಿ ಮಾತನಾಡುವುದು, ಸಹ ಸ್ಪರ್ಧಿಗಳ ಮೇಲೆ ಅಸಹ್ಯಕರ ರೀತಿಯ ಆರೋಪಗಳನ್ನು ಮಾಡುವುದು. ಸಹಸ್ಪರ್ಧಿಗಳ ಕುಟುಂಬ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಮಹಿಳಾ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡುವುದು ಮಾಡಿದ್ದರು. ಒಟ್ಟಾರೆ ಮನೆಯ ನೆಮ್ಮದಿಯನ್ನು ಹಾಳು ಮಾಡಿದ್ದರು. ಇದೇ ಕಾರಣದಿಂದಾಗಿ ಮಂಜನನ್ನು ಬಿಗ್ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ
ಮಂಜನನ್ನು ಹೊರಗೆ ಕಳಿಸಿದ್ದು ವೈಯಕ್ತಿಕವಾಗಿ ಸುದೀಪ್ ಅವರಿಗೆ ಇಷ್ಟವಾಗಿರಲಿಲ್ಲ. ‘ಕೆಟ್ಟ ಭಾಷೆ ಬಳಕೆ ಮಾಡಿದ್ದಕ್ಕೆ ಹೊರಗೆ ಕಳಿಸುವುದಾದರೆ ಮಂಜನನ್ನು ಮಾತ್ರವಲ್ಲ ಇನ್ನೂ ಕೆಲವರನ್ನು ಹೊರಗೆ ಕಳಿಸಬೇಕಿತ್ತು, ಇದು ನನ್ನ ನಿರ್ಧಾರ ಅಲ್ಲ, ಬಿಗ್ಬಾಸ್ ನಿರ್ಧಾರ. ಈ ನಿರ್ಧಾರದೊಟ್ಟಿಗೆ ನನ್ನ ಸಹಮತ ಇಲ್ಲ’ ಎಂದು ಸಹ ಸುದೀಪ್ ಹೇಳಿದ್ದರು. ಮಂಜನನ್ನು ಕಳಿಸುವಾಗ, ‘ನೀನು ನನ್ನ ತಮ್ಮನಂತೆ’ ಎಂದು ಬೆಂಬಲ ಸಹ ವ್ಯಕ್ತಪಡಿಸಿದ್ದರು. ಇದೀಗ ಮಂಜನನ್ನು ಶೋಗೆ ವಾಪಸ್ ತರಲಾಗಿದೆ. ಖುದ್ದು ಸುದೀಪ್ ಅವರು ಸ್ವಾಗತಿಸಿ ಮತ್ತೊಮ್ಮೆ ಮಂಜನನ್ನು ಮನೆಯೊಳಗೆ ಕಳಿಸಿದ್ದಾರೆ.
ಕಳೆದ ಬಾರಿ ತಮ್ಮ ದುಷ್ಟ ವರ್ತನೆ, ಕೆಟ್ಟ ಮಾತುಗಳಿಂದ ಮನೆಯಲ್ಲಿ ಅಲ್ಲೋಲ ಕಲ್ಲೊಲ ಎಬ್ಬಿಸಿದ್ದ ಮಂಜ ಈ ಬಾರಿ ಏನೆಲ್ಲ ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಭಾನುವಾರದ ಎಪಿಸೋಡಿನಿಂದ ಮಂಜ ಮತ್ತೆ ಮನೆಗೆ ಎಂಟ್ರಿ ಕೊಡುತ್ತಿದ್ದಾನೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:54 am, Sun, 8 November 26