‘ಇದು ಹಾವು-ಏಣಿ ಆಟ’; ಬಣ್ಣದ ಲೋಕದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ‘ಮುದ್ದುಲಕ್ಷ್ಮಿ’ ಅಶ್ವಿನಿ

|

Updated on: Oct 04, 2023 | 2:21 PM

ಅಶ್ವಿನಿ ಅವರು ಕಿರುತೆರೆಯಲ್ಲಿ ಕಳೆದ 10 ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಆ್ಯಂಕರಿಂಗ್ ಮಾಡುತ್ತಿದ್ದ ಅವರು ನಂತರ ಕಿರುತೆರೆಗೆ ಕಾಲಿಟ್ಟರು. ‘ಮುದ್ದುಲಕ್ಷ್ಮಿ’, ‘ಮುದ್ದುಮನಸೆ’ ಸೇರಿ ಅನೇಕ ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

‘ಇದು ಹಾವು-ಏಣಿ ಆಟ’; ಬಣ್ಣದ ಲೋಕದ ಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ‘ಮುದ್ದುಲಕ್ಷ್ಮಿ’ ಅಶ್ವಿನಿ
ಅಶ್ವಿನಿ
Follow us on

ಹೊರಗಿನಿಂದ ನೋಡಿದವರಿಗೆ ಬಣ್ಣದ ಲೋಕ ಯಾವಾಗಲೂ ಕಲರ್​ಫುಲ್. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುವ ಕಲಾವಿದರ ಬದುಕು ಸಾಕಷ್ಟು ಐಷಾರಾಮಿ ಆಗಿರುತ್ತದೆ ಅನ್ನೋದು ಅನೇಕರ ನಂಬಿಕೆ. ಆದರೆ, ನಿಜಕ್ಕೂ ಹಾಗಿರುತ್ತದೆಯೇ? ಅವರ ವೃತ್ತಿಜೀವನದಲ್ಲೂ ಸಾಕಷ್ಟು ತೊಳಲಾಟಗಳು ಇರುತ್ತವೆ. ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಆಪ್ಶನ್ ಇರುತ್ತದೆ. ಮತ್ತೊಂದು ಕಂಪನಿಯಿಂದ ಆಫರ್ ಲೆಟರ್ ಸಿಕ್ಕ ಬಳಿಕವೇ ಈಗಿರುವ ಕಂಪನಿಯಲ್ಲಿ ರಿಸೈನ್ ಮಾಡುವ ಅವಕಾಶ ಇರುತ್ತದೆ. ಆದರೆ, ಧಾರಾವಾಹಿಗಳಲ್ಲಿ ಹಾಗಲ್ಲ. ಈ ರೀತಿಯ ಒಂದಷ್ಟು ವಿಚಾರಗಳ ಬಗ್ಗೆ ‘ಮುದ್ದುಲಕ್ಷ್ಮಿ’ (Muddulakshmi Serial) ಧಾರಾವಾಹಿಯ ನಟಿ ಅಶ್ವಿನಿ (Ashwini)  ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ.

ಅಶ್ವಿನಿ ಅವರು ಕಿರುತೆರೆಯಲ್ಲಿ ಕಳೆದ 10 ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಆ್ಯಂಕರಿಂಗ್ ಮಾಡುತ್ತಿದ್ದ ಅವರು ನಂತರ ಕಿರುತೆರೆಗೆ ಕಾಲಿಟ್ಟರು. ಉದಯದಲ್ಲಿ ಪ್ರಸಾರ ಕಾಣುತ್ತಿದ್ದ ‘ಅನುರಾಗ ಸಂಗಮ’ ಧಾರಾವಾಹಿಯಲ್ಲಿ ಅವರು ಮೊದಲು ನಟಿಸಿದರು. ‘ಮುದ್ದುಲಕ್ಷ್ಮಿ’, ‘ಮುದ್ದುಮನಸೆ’ ಸೇರಿ ಅನೇಕ ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ‘ಮುದ್ದುಲಕ್ಷ್ಮಿ’ ಧಾರಾವಾಹಿ ಪೂರ್ಣಗೊಂಡು ಒಂದು ತಿಂಗಳಾಗಿದೆ. ಸದ್ಯ ಅವರು ಒಂದು ಬ್ರೇಕ್​ನಲ್ಲಿದ್ದಾರೆ. ಮುಂದೆ ಬರುವ ಪ್ರಾಜೆಕ್ಟ್​ಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫಿಟ್ನೆಸ್ ಕಾಯ್ದುಕೊಳ್ಳಲು ನಿತ್ಯವೂ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ.

ಈಗ ಸೂಪರ್​ಸ್ಟಾರ್ ಆದ ಅನೇಕರು ಆರಂಭದ ದಿನಗಳಲ್ಲಿ ಕಷ್ಟದ ದಿನಗಳನ್ನು ನೋಡಿರುತ್ತಾರೆ. ಅಶ್ವಿನಿ ಅವರದ್ದೂ ಇದೇ ಅಭಿಪ್ರಾಯ. ‘ನಟನೆಯನ್ನು ಆಯ್ಕೆ ಮಾಡಿಕೊಂಡ ಬಹುತೇಕರು ಕಷ್ಟದ ದಿನಗಳನ್ನು ನೋಡಿರುತ್ತಾರೆ. ಕೆಲಸ ಇದ್ದಾಗ ಕೈ ತುಂಬಾ ಇರುತ್ತದೆ. ಇಲ್ಲ ಎಂದಾಗ ಏನೂ ಇರುವುದಿಲ್ಲ. ಒಂದು ಪ್ರಾಜೆಕ್ಟ್​ನಿಂದ ಮತ್ತೊಂದು ಪ್ರಾಜೆಕ್ಟ್​ಗೆ ಇರುವ ಬ್ರೇಕ್ ಸಮಯ ತುಂಬಾನೇ ಕಷ್ಟ. ಮೇಕಪ್​ ಹಾಕಿಕೊಳ್ಳುವುದು ಇಲ್ಲ ಎಂದಾಗ ಮುಂದೇನು ಎನ್ನುವ ಪ್ರಶ್ನೆ ಬರುತ್ತದೆ’ ಎಂದಿದ್ದಾರೆ ಅಶ್ವಿನಿ.

‘ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಆದರೆ, ನಮ್ಮ ಕ್ಷೇತ್ರದಲ್ಲಿ ಪ್ರಿಡಿಕ್ಟ್ ಮಾಡೋಕೆ ಆಗಲ್ಲ. ನಮ್ಮ ಜೀವನ ಹಾವು ಏಣಿ ಆಟದ ರೀತಿ. ಏಣಿ ಏರುವುದು, ಇಳಿಯುವುದು ಇದ್ದೇ ಇದೆ. ಆದರೆ, ಗೆಲುವಂತೂ ಕಾಣ್ತೀವಿ’ ಎಂಬುದು ಅಶ್ವಿನಿ ಅಭಿಪ್ರಾಯ.

‘ಒಂದು ಧಾರಾವಾಹಿಯಲ್ಲಿ ನಟಿಸಿದ ಬಳಿಕ ಅವರಿಗೆ ಮತ್ತೆ ಅವಕಾಶ ಸಿಗೋದು ಅಷ್ಟು ಸುಲಭವಲ್ಲ. ಇದು ಗೊತ್ತಿರುವ ಮುಖವೇ, ಇವರಿಗೆ ಮತ್ತೆ ಅವಕಾಶ ನೀಡಬೇಕೆ ಎನ್ನುವ ಪ್ರಶ್ನೆ ನಿರ್ಮಾಪಕರಲ್ಲಿ ಮೂಡಿರುತ್ತದೆ. ಕಲಾವಿದರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಇಷ್ಟೊಂದು ಕಲಾವಿದರು ಇದ್ದಾರೆ. ಎಲ್ಲರೂ ಇಂಡಸ್ಟ್ರಿಯಲ್ಲಿ ಹೇಗೆ ಉಳಿದುಕೊಂಡಿದ್ದಾರೆ ಅನ್ನೋ ಪ್ರಶ್ನೆ ಮೂಡುತ್ತದೆ’ ಎಂಬುದು ಅಶ್ವಿನಿ ಮಾತು.

ಹಾಗಂತ ಬಣ್ಣದ ಲೋಕಕ್ಕೆ ಬಂದರೆ ಕೈ ಸುಟ್ಟಿಕೊಳ್ಳೋದು ಖಚಿತ ಎಂದಲ್ಲ. ಛಲಬಿಡದೆ ಶ್ರಮ ಹಾಕಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನೋದು ಅಶ್ವಿನಿ ಮಾತು. ಎಲ್ಲದಕ್ಕೂ ನಮ್ಮನ್ನು ನಾವು ಸಿದ್ಧವಾಗಿಟ್ಟುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಅವರು ಹೊರಹಾಕುತ್ತಾರೆ.

ಇದನ್ನೂ ಓದಿ: ಮಹೇಶ್​ ಬಾಬು ನಿರ್ದೇಶನದ ಹೊಸ ಸಿನಿಮಾಗೆ ‘ಕನ್ನಡತಿ’ ಧಾರಾವಾಹಿಯ ಸ್ಮೈಲ್ ಗುರು ರಕ್ಷಿತ್ ಹೀರೋ

ಅಶ್ವಿನಿ ಅವರಿಗೆ ಸಾಕಷ್ಟು ಆಫರ್​ಗಳು ಬರುತ್ತಿವೆ. ಆದರೆ, ಅವರು ಅಳೆದು ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಉದ್ಯಮದಲ್ಲಿ ತೊಡಗಿಕೊಳ್ಳುವ ಆಲೋಚನೆಯಲ್ಲಿಯೂ ಅವರಿದ್ದಾರೆ. ಸಿನಿಮಾದಲ್ಲಿ ನಟಿಸುವ ಬಗ್ಗೆ ಅವರು ಗಮನ ಹರಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:32 pm, Wed, 4 October 23