‘ಬಿಗ್ ಬಾಸ್’ನಲ್ಲಿ ಖ್ಯಾತ ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ಗಳು ಹೋಗೋದು ಸಾಮಾನ್ಯ. ಆದರೆ, ಈ ಬಾರಿಯ ಹಿಂದಿ ಬಿಗ್ ಬಾಸ್ಗೆ ಕತ್ತೆಯನ್ನು ತೆಗೆದುಕೊಂಡು ಹೋಗಲಾಗಿದೆ. ಅದನ್ನು ಕೂಡ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಪ್ರಾಣಿಗಳ ಹಕ್ಕುಗಳ ರಕ್ಷಣಾ ವೇದಿಕೆ ‘ಪೆಟಾ’ ಅಪಸ್ವರ ತೆಗೆದಿದೆ. ಈ ರಿಯಾಲಿಟಿ ಶೋನಲ್ಲಿ ಪ್ರಾಣಿಗಳ ಬಳಕೆ ಆಗಬಾರದು ಎಂದು ಹೇಳಿದೆ.
ಪೆಟಾ ಈ ಸಂಬಂಧ ಪತ್ರ ಬರೆದಿದೆ. ‘ಪ್ರಾಣಿಗಳನ್ನು ಬಿಗ್ ಬಾಸ್ನಿಂದ ಹೊರಕ್ಕೆ ಇಡಿ’ ಎಂದು ಪತ್ರದಲ್ಲಿ ಕೋರಲಾಗಿದೆ. ‘ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಇಟ್ಟಿರುವ ಬಗ್ಗೆ ಸಾರ್ವಜನಿಕರಿಂದ ನಮಗೆ ದೂರುಗಳು ಬರುತ್ತಿವೆ. ಜನರ ಕಾಳಜಿ ಮಾನ್ಯವಾಗಿರುತ್ತವೆ ಮತ್ತು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದು ಪೆಟಾ ಹೇಳಿದೆ.
‘ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ, ಬಿಗ್ ಬಾಸ್‌ನ ನಿರೂಪಕರಾಗಿ ನೀವು (ಸಲ್ಮಾನ್ ಖಾನ್) ಮಾದರಿಯಾಗುವ ತಾಕತ್ತನ್ನು ಹೊಂದಿದ್ದೀರಿ. ಪ್ರಾಣಿಗಳನ್ನು ಮನರಂಜನೆಗಾಗಿ ಬಳಸದಂತೆ ವಾಹಿನಿಯವರಿಗೆ ನೀವು ಒತ್ತಡ ಹೇರಬೇಕು. ಅದಕ್ಕೆ ನೀವು ಪ್ರಭಾವವನ್ನು ಬಳಸಬೇಕು’ ಎಂದು ಪೆಟಾ ಮನವಿ ಮಾಡಿಕೊಂಡಿದೆ.
ಈ ಕತ್ತೆಯ ಹೆಸರು ಮ್ಯಾಕ್ಸ್. ಇದನ್ನು ವಕೀಲ ಗುಣರತ್ನ ಅವರು ದೊಡ್ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಇದನ್ನು ಪೆಟಾಗೆ ಹಸ್ತಾಂತರಿಸಬೇಕು ಎಂದು ಕೋರಲಾಗಿದೆ. ‘ಕತ್ತೆಗಳು ಭಯ ಬೀಳುತ್ತವೆ. ಬೆಳಕು, ಗದ್ದಲದಿಂದ ಅವು ತೊಂದರೆಗೆ ಒಳಗಾಗುತ್ತವೆ. ಹೀಗಾಗಿ, ಅದನ್ನು ಶೋನಿಂದ ದೂರ ಇಡಿ’ ಎಂದು ಕೋರಲಾಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ಗೆ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟ ಕತ್ತೆ; ತಲೆಗೆ ಹುಳ ಬಿಟ್ಟ ಕಲರ್ಸ್
‘ಬಿಗ್ ಬಾಸ್’ನಲ್ಲಿ ಪ್ರಾಣಿಯನ್ನು ಕರೆದುಕೊಂಡು ಬಂದಿದ್ದು ಇದೇ ಮೊದಲು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಭಾನುವಾರ (ಅಕ್ಟೋಬರ್ 6) ಬಿಗ್ ಬಾಸ್ ಶೋಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ಅನೇಕ ಸೆಲೆಬ್ರಿಟಿಗಳು ಇದರ ಭಾಗ ಆಗಿದ್ದಾರೆ. ಸ್ವತಃ ಸಲ್ಮಾನ್ ಖಾನ್ ಅವರು ಕತ್ತೆಯನ್ನು ವೇದಿಕೆ ಮೇಲೆ ಕರೆ ತಂದಿದ್ದಾರೆ. ಬಿಗ್ ಬಾಸ್ನಲ್ಲಿ ಒಂದು ಕಡೆಯಲ್ಲಿ ಕತ್ತೆಯನ್ನು ಕಟ್ಟಿಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.