ಬಿಗ್ಬಾಸ್ ಕನ್ನಡ ಸೀಸನ್ 10 (Bigg Boss) ಮನೊರಂಜನೆಯ ಜೊತೆಗೆ ವಿವಾದಗಳಿಂದಲೂ ಸುದ್ದಿಯಾಗುತ್ತಿದೆ. ಮೊದಲಿಗೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಬಿಗ್ಬಾಸ್ ಮನೆಯಿಂದ ನೇರ ಜೈಲಿಗೆ ಹೋದರು. ಜಾಮೀನಿನ ಮೇಲೆ ಹೊರಬಂದು ಈಗಲೂ ಬಿಗ್ಬಾಸ್ ಮನೆಯಲ್ಲಿಯೇ ಇದ್ದಾರೆ. ಅದಾದ ಬಳಿಕ ಈಗ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದ್ದು ಬಿಗ್ಬಾಸ್ ಆಯೋಜಕರಿಗೆ ಪೊಲೀಸರು ನೊಟೀಸ್ ನೀಡಿ, ತನಿಷಾ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗುತ್ತಿರುವ ಸನ್ನಿವೇಶದ ವಿಡಿಯೋ ನೀಡುವಂತೆ ಸೂಚಿಸಿದ್ದಾರೆ.
ಬಿಗ್ಬಾಸ್ ಮನೆಯ ಸ್ಪರ್ಧಿಗಳಿಂದ ಹೊರಗಡೆ ವಿವಾದಗಳು ಪ್ರಾರಂಭವಾದಾಗ ಬಿಗ್ಬಾಸ್ ಆಯೋಜಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ಮಾಜಿ ಬಿಗ್ಬಾಸ್ ಸ್ಪರ್ಧಿ, ಎರಡೆರಡು ಬಾರಿ ಬಿಗ್ಬಾಸ್ ಮನೆಯ ವಾಸಿಯಾಗಿರುವ ಪ್ರಶಾಂತ್ ಸಂಬರ್ಗಿ ಮಾತನಾಡಿದ್ದಾರೆ. ಬಿಗ್ಬಾಸ್ ಸ್ಪರ್ಧಿಯಿಂದ ಹೊರಗಡೆ ವಿವಾದ ಸೃಷ್ಟಿಯಾದರೆ ಬಿಗ್ಬಾಸ್ ಆಯೋಜಕರು ಸ್ಪರ್ಧಿಯ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಎಲ್ಲ ರೀತಿಯ ನಿಯಮಗಳನ್ನು ಪಾಲಿಸಿ, ಸ್ಪರ್ಧಿಯನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
”ನಾನು ಬಿಗ್ಬಾಸ್ ಮನೆ ಒಳಗೆ ಇದ್ದಾಗ ನೀಡಿದ ಹೇಳಿಕೆ ಒಂದರಿಂದ ಹೊರಗೆ ಗಲಾಟೆ ಆಗಿತ್ತು. ಯಾರೋ ಕೆಲವರು ಕನ್ನಡ ಪರ ಸಂಘಟನೆ ಸದಸ್ಯರ ಬಗ್ಗೆ ಆಡಿದ ಮಾತಿನ ಬಗ್ಗೆ ಹೊರಗೆ ಕನ್ನಡಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ನನ್ನ ವಿರುದ್ಧ ದೂರು ದಾಖಲಾಯ್ತು. ಸತತವಾಗಿ ಒಂದು ವಾರಕ್ಕೂ ಹೆಚ್ಚು ಸಮಯ ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಯ್ತು. ಆದರೆ ಆಗೆಲ್ಲ ಬಿಗ್ಬಾಸ್ ನನ್ನನ್ನು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ನಾನು ನನ್ನ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದೆ” ಎಂದು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಮಾತು
ಬಿಗ್ಬಾಸ್ಗೆ ಎರಡನೇ ಬಾರಿ ಅಂದರೆ ಒಂಬತ್ತನೇ ಸೀಸನ್ಗೆ ಪ್ರಶಾಂತ್ ಸಂಬರ್ಗಿ ಹೋದಾಗ ಅಲ್ಲಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಸಹ ಸ್ಪರ್ಧಿಯಾಗಿದ್ದರು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ನಡುವೆ ಆಗಾಗ್ಗೆ ಜಗಳ ಆಗುತ್ತಲೇ ಇತ್ತು. ಹೀಗೆಯೇ ಜಗಳ ಆಡುವಾಗ ಎಲ್ಲೆ ಮೀರಿದ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣನನ್ನು ಬೈಯ್ಯುವ ಭರದಲ್ಲಿ ಕನ್ನಡಪರ ಸಂಘಟನೆಗಳನ್ನು ಬೈದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಿಗ್ಬಾಸ್ ಮನೆ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಮನೆ ಒಳಗೆ ನುಗ್ಗುವ ಬೆದರಿಕೆ ಹಾಕಿದ್ದವು. ಆಗ ಬಿಗ್ಬಾಸ್ ಮನೆಗೆ ಪೊಲೀಸ್ ಬಂದೋಬಸ್ತ್ ಸಹ ನೀಡಲಾಗಿತ್ತು. ಕೊನೆಗೆ ಮನೆಯ ಒಳಗಿನಿಂದಲೇ ಸಂಬರ್ಗಿ, ಕಣ್ಣೀರು ಹಾಕುತ್ತಾ ಕನ್ನಡಪರ ಸಂಘಟನೆಗಳ ಕ್ಷಮೆ ಕೇಳಿದರು.
ಈಗ ತನಿಷಾ, ಡ್ರೋನ್ ಪ್ರತಾಪ್ಗೆ ಟಾಸ್ಕ್ ಒಂದರ ಸಂಬಂಧ ಬೈಯ್ಯುತ್ತಾ ಬಳಸಿದ ಮಾತೊಂದು ವಿವಾದಕ್ಕೆ ಕಾರಣವಾಗಿದೆ. ಭೋವಿ ಸಮುದಾಯದ ಕೆಲ ಮುಖಂಡರು, ತಮ್ಮ ಸಮುದಾಯಕ್ಕೆ ತನಿಷಾ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ