ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಹಲವು ಹುಡುಗಿಯರ ಜೊತೆ ಅವರು ಕಳೆದ ಖಾಸಗಿ ಕ್ಷಣಗಳ ವಿಡಿಯೋ ವೈರಲ್ ಆಗಿದೆ. ಪೆನ್ಡ್ರೈವ್ನಲ್ಲಿ ಈ ವಿಡಿಯೋಗಳನ್ನು ಹಾಕಿ ಎಲ್ಲ ಕಡೆ ಹಂಚಲಾಗಿದೆ ಎನ್ನುವ ಆರೋಪವೂ ಇದೆ. ಈ ಮಧ್ಯೆ ಅಭಿಮಾನಿಯೋರ್ವ ರಮೇಶ್ ಅರವಿಂದ್ಗೆ ಪೆನ್ಡ್ರೈವ್ ನೀಡಿದ್ದಾರೆ. ಇದನ್ನು ನೋಡಿ ಅವರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಅಭಿಮಾನಿ ರಮೇಶ್ ಅರವಿಂದ್ಗೆ ಪೆನ್ಡ್ರೈವ್ ಕೊಟ್ಟಿದ್ದು ಏಕೆ? ಆ ಪೆನ್ಡ್ರೈವ್ನಲ್ಲಿ ಏನಿತ್ತು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಧಾರಾವಾಹಿಗಳು, ರಿಯಾಲಿಟಿ ಶೋ ಮೊದಲಾದ ಕಾರ್ಯಕ್ರಮಗಳ ಪ್ರಮೋಷನ್ಗೆ ಹೊಸ ಹೊಸ ತಂತ್ರ ಬಳಸಲಾಗುತ್ತದೆ. ಈಗ ‘ಜೀ ಪಿಚ್ಚರ್’ನ ಶಾರ್ಟ್ ಫಿಲ್ಮ್ ಸ್ಪರ್ಧೆ ಏರ್ಪಡಿಸಿದೆ. ಇದರ ಪ್ರಮೋಷನ್ಗೆ ಪೆನ್ಡ್ರೈವ್ ಡ್ರಾಮಾ ಮಾಡಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಮೇಶ್ ಅರವಿಂದ್ ಅವರು ಸೆಟ್ನಿಂದ ಬರುತ್ತಾ ಇರುತ್ತಾರೆ. ಆಗ ಅವರ ಸಹಾಯಕರು ಬಂದು, ‘ಇವರು ನಿಮಗೆ ಏನನ್ನೋ ಕೊಡಬೇಕು ಎಂದು ಬೆಳಗಿನಿಂದ ಕಾಯುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ. ಆಗ ಕುತೂಹಲಕ್ಕೆ ಒಳಗಾಗುವ ರಮೇಶ್ ಅರವಿಂದ್ ಎದುರಿದ್ದ ವ್ಯಕ್ತಿ ಬಳಿ ಅದನ್ನು ಕೊಡುವಂತೆ ಕೇಳುತ್ತಾರೆ. ಆಗ ಎದುರಿದ್ದ ಅಭಿಮಾನಿ ಪೆನ್ಡ್ರೈವ್ ನೀಡುತ್ತಾರೆ.
ಇದನ್ನೂ ಓದಿ: ರಮೇಶ್ ಅರವಿಂದ್, ಅನುಶ್ರೀ ಸೇರಿ ‘ಮಹಾನಟಿ’ ತಂಡದ ವಿರುದ್ಧ ದಾಖಲಾಯ್ತು ದೂರು; ಕಾರಣವೇನು?
ಆಗ ರಮೇಶ್ ಅರವಿಂದ್ ಶಾಕ್ಗೆ ಒಳಗಾಗುತ್ತಾರೆ. ‘ಏನಿದು? ಮೊದಲು ಪೆನ್ಡ್ರೈವ್ನ ಫ್ರೆಮ್ನಿಂದ ತೆಗೆಯಿರಿ’ ಎಂದು ಕೇಳುತ್ತಾರೆ. ‘ನಾನೊಂದು ಶಾರ್ಟ್ ಫಿಲ್ಮ್ ಮಾಡಿದ್ದೇನೆ. ಅದನ್ನು ನೀಡಬೇಕಿತ್ತು’ ಎಂದು ಅಭಿಮಾನಿ ಮಾಹಿತಿ ಹಂಚಿಕೊಳ್ಳುತ್ತಾರೆ. ‘ಕೆಳಗೆ ಕ್ಯೂಆರ್ ಕೋಡ್ ಇದೆ ಅಥವಾ ಲಿಂಕ್ ಇದೆ. ಅಲ್ಲಿಗೆ ಹೋಗಿ ಏನ್ ಮಾಡಬೇಕು ಎಂದು ನಿಮಗೆ ಗೊತ್ತಾಗುತ್ತದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.