
ರಾಕೇಶ್ ಪೂಜಾರಿ (Rakesh Poojary) ಅಕಾಲಿಕ ಮರಣಕ್ಕೆ ಕೆಲವು ವಾರಗಳು ಕಳೆದಿದ್ದರೂ ಅವರ ನೆನಪು, ಅವರ ನಗು ಹಾಗೂ ಅವರ ಬಗೆಗಿನ ಚರ್ಚೆ ಇನ್ನೂ ನಿಂತಿಲ್ಲ. ಅವರ ನಗುಮುಖದ ಫೋಟೋಗಳನ್ನು ನೋಡಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅವರು ಇಷ್ಟು ಬೇಗ ಸಾಯಬಾರದಿತ್ತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ಇನ್ನಷ್ಟು ಸಮಯ ನಮ್ಮ ಜೊತೆ ಇದ್ದು ನಮ್ಮ ನಗಿಸಬೇಕಿತ್ತು ಎನ್ನುತ್ತಿದ್ದಾರೆ. ಹೀಗಿರುವಾಗಲೇ ರಾಕೇಶ್ ಪೂಜಾರಿ ಅವರಿಗೆ ಜೀ ಕನ್ನಡ ವೇದಿಕೆ ಮೇಲೆ ವಿಶೇಷ ಗೌರವ ಸೂಚಿಸಲಾಗಿದೆ.
ರಾಕೇಶ್ ಪೂಜಾರಿ ಅವರು ಜೀ ಕನ್ನಡ ವೇದಿಕೆ ಮೇಲೆ ಗಮನ ಸೆಳೆದವರು. ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿನ್ನರ್ ಕೂಡ ಹೌದು. ರಾಕೇಶ್ ಪೂಜಾರಿಯನ್ನು ಅಲ್ಲಿ ಮಿಸ್ ಮಾಡಿಕೊಳ್ಳದವರೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲವೂ ಸರಿ ಇದ್ದಿದ್ದರೆ ಈ ವಾರ ವೇದಿಕೆ ಮೇಲೆ ಅವರು ಕೂಡ ಇರಬೇಕಿತ್ತು. ಆದರೆ, ಈ ರೀ ಯೂನಿಯನ್ಗೆ ಅವರು ಇಲ್ಲದೆ ಎಲ್ಲರಿಗೂ ದುಃಖ ಆವರಿಸಿದೆ.
ವೇದಿಕೆ ಮೇಲೆ ಕಾರ್ಯಕ್ರಮ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಆ ಬಳಿಕ ನಟ ರವಿಚಂದ್ರನ್ ಅವರು ಮಾತನಾಡಿದರು. ‘ಒಂದು ನಿಮಿಷ ಮೌನಾಚರಣೆ ಮಾಡುವಾಗ ರಾಕೇಶ್ನ ನಗು ಕಾಣಿಸಿತು. ಈಗ ಅವನು ನಗಿಸುತ್ತಿದ್ದಾನೆ. ಆದರೆ ನಮಗೆ ನಗೋಕೆ ಆಗ್ತಿಲ್ಲ. ವಯಸ್ಸಿಗೂ ಆಯಸ್ಸಿಗೂ ನಂಟು ಮುಗಿದು ಹೋಗಿದೆ. ಮೊದಲು ವಯಸ್ಸು ಮುಗಿದರೇ ಸಾವು ಎನ್ನುತ್ತಿದ್ದರು. ಆದರೆ, ಈಗ ಹಾಗಿಲ್ಲ. ದೇವರ ಲೆಕ್ಕಾಚಾರ ತಪ್ಪಿದೆ. ಗ್ರಹಚಾರ ಆಡ್ತಿದೆ. ನಂಬಿಕೆ ದೂರ ಆಗುತ್ತಿದೆ. ಬದುಕಿರಿ, ಇದ್ದಾಗ ನಗಬೇಕು’ ಎಂದು ಹೇಳಿದರು.
ಇದನ್ನೂ ಓದಿ: ‘ಅವನ ನಟನೆ ನೋಡೋದೇ ಆನಂದ’; ಜೀ ಕನ್ನಡ ವೇದಿಕೆ ಮೇಲೆ ರಾಕೇಶ್ ಪೂಜಾರಿಗೆ ವಿಶೇಷ ಗೌರವ
‘ಯಾರಾದರೂ ಸತ್ತ ಎಂದಾಗ ಅವರ ಮಾಡಿದ ಕೆಲಸ, ನಗುವಿನ ಮೂಲಕ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಲ್ಲರನ್ನೂ ನಗಿಸಿದವನು. ಪ್ರಕೃತಿ ಕರೆಯಿತು. ಅವನು ಹೋದ. ಅದನ್ನು ಹಾಸ್ಯವಾಗಿ ತೆಗೆದುಕೊಂಡ. ಅಕಾಲಿಕವಾಗಿ ಹೋದವರು ಹೋದರು ಎನ್ನಬಾರದು. ಅವರನ್ನು ಬೇರೆ ಬೇರೆ ರೀತಿಯಲ್ಲಿ ನಾವು ಮತ್ತೆ ಕಾಣಬೇಕು’ ಎಂದು ಯೋಗರಾಜ್ ಭಟ್ ಅವರು ಅಭಿಪ್ರಾಯ ಹೊರಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:33 am, Sat, 24 May 25