
‘ಲಕ್ಷ್ಮೀ ನಿವಾಸ’ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ವೀಕ್ಷಕರಿಗೆ ಈಗ ಒಂದು ಬೇಸರದ ಸುದ್ದಿ ಸಿಕ್ಕಿದೆ. ಈ ಧಾರಾವಾಹಿಯಿಂದ ಲಕ್ಷ್ಮೀ ಪಾತ್ರಧಾರಿ ಶ್ವೇತಾ ಅಲಿಯಾಸ್ ವಿನೋದಿನಿ ಅವರು ಗುಡ್ಬೈ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ಕೂಡ ವಿವರಿಸಿದ್ದಾರೆ. ಇತ್ತೀಚೆಗೆ ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ ಆಗಿತ್ತು. ಆಗಲೇ ಪ್ರೇಕ್ಷಕರಿಗೆ ಅನುಮಾನ ಮೂಡಿತ್ತು. ಈಗ ಅವರು ಹೊರ ಹೋಗುತ್ತಿರುವ ವಿಚಾರ ಅಧಿಕೃತ ಆಗಿದೆ.
‘ಲಕ್ಷ್ಮೀ ನಿವಾಸ’ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೇಳುತ್ತದೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎನ್ನುವ ಲೋಕರೂಢಿಯ ಮಾತಿದೆ. ಇಡೀ ಧಾರಾವಾಹಿಗೆ ಅದುವೇ ಜೀವಾಳ. ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಎಷ್ಟು ಕಷ್ಟಪಡುತ್ತಾರೆ ಎಂದು ತೋರಿಸಲಾಗಿದೆ. ಮನೆಯ ಯಜಮಾನನ ಪಾತ್ರದಲ್ಲಿ ಅಶೋಕ್ ಜೆಂಬೆ ನಟಿಸುತ್ತಿದ್ದಾರೆ. ಅವರ ಪತ್ನಿ ಲಕ್ಮೀ ಪಾತ್ರದಲ್ಲಿ ಶ್ವೇತಾ ಇದ್ದರು.
ಶ್ವೇತಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದರು. ಆ ಬಳಿಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು. 2023-24ರವರೆಗೆ ಅವರು ತಮಿಳಿನ ‘ಸೀತಾ ರಮಣ್’ ಧಾರಾವಾಹಿಯಲ್ಲಿ ನಟಿಸಿದ್ದರು. 2024ರಲ್ಲಿ ಆರಂಭ ಆದ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅವರು ನಟನೆ ಆರಂಭಿಸಿದ್ದರು. ಆದರೆ, ಈಗ ಅವರು ವೈಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರೋ ಅವರು, ‘ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕೆಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಜನರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಈಗ ಎಲ್ಲರಲ್ಲೂ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ ಎಂದರೆ ಅವರು ಬಿಟ್ಟು ಹೋದ ಪಾತ್ರಕ್ಕೆ ಬರೋ ಕಲಾವಿದೆ ಯಾರು ಎಂದು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕೆಲವರು ಸುಧಾರಾಣಿ ಎಂದು ಹೇಳಿದರೆ ಇನ್ನೂ ಕೆಲವರು ಸ್ಪರ್ಶ ರೇಖಾ ಸೂಕ್ತ ಎನ್ನುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:37 am, Fri, 20 June 25