ಮಂಜು ನಿರ್ಧಾರಕ್ಕೆ ಸುದೀಪ್ ಅಸಮಾಧಾನ; ಬಿಗ್ ಬಾಸ್ ವೇದಿಕೆ ಮೇಲೆ 2 ಲಕ್ಷ ರೂ. ದಾನ ಮಾಡಿದ ಕಿಚ್ಚ

|

Updated on: Jan 26, 2025 | 9:07 PM

ಬಿಗ್ ಬಾಸ್ ಕನ್ನಡದಲ್ಲಿ ಮಂಜು ಎಲಿಮಿನೇಟ್ ಆದ ನಂತರ, ಅವರಿಗೆ ಸಿಕ್ಕ ಬಹುಮಾನವನ್ನು ದಾನ ಮಾಡುವ ಬಗ್ಗೆ ಹೇಳಿದಾಗ, ಕಿಚ್ಚ ಸುದೀಪ್ ಅವರು ಸ್ವತಃ ತಾವೇ ಆ 2 ಲಕ್ಷ ರೂಪಾಯಿಗಳನ್ನು ದಾನ ಮಾಡಿದರು. ‘ದಾನ ಧರ್ಮ ಇರಲಿ, ದಡ್ಡತನ ಬೇಡ’ಎಂದು ಮಂಜುಗೆ ಸುದೀಪ್ ಕಿವಿ ಮಾತು ಹೇಳಿದರು.

ಮಂಜು ನಿರ್ಧಾರಕ್ಕೆ ಸುದೀಪ್ ಅಸಮಾಧಾನ; ಬಿಗ್ ಬಾಸ್ ವೇದಿಕೆ ಮೇಲೆ 2 ಲಕ್ಷ ರೂ. ದಾನ ಮಾಡಿದ ಕಿಚ್ಚ
ಮಂಜು-ಸುದೀಪ್
Follow us on

ಕಿಚ್ಚ ಸುದೀಪ್ ಅವರು ಉದಾರತೆಗೆ ಮತ್ತೊಂದು ಹೆಸರು. ಅವರು ಸಾಕಷ್ಟು ದಾನ-ಧರ್ಮ ಮಾಡುತ್ತಾರೆ. ಆದರೆ, ಅದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಈಗ ‘ಬಿಗ್ ಬಾಸ್’ ವೇದಿಕೆ ಮೇಲೆ ಅವರು 2 ಲಕ್ಷ ರೂಪಾಯಿ ದಾನ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಮಂಜು ತೆಗೆದುಕೊಂಡ ಆ ಒಂದು ನಿರ್ಧಾರ. ಅಷ್ಟಕ್ಕೂ ಬಿಗ್ ಬಾಸ್ ವೇದಿಕೆ ಮೇಲೆ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಮನೆಯಿಂದ ಮಂಜು ಅವರು ಎಲಿಮಿನೇಟ್ ಆದರು. ಭಾನುವಾರ (ಜನವರಿ 26)  ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಅವರಾಗಿದ್ದಾರೆ. ಅವರು ವೇದಿಕೆ ಮೇಲೆ ಬಂದು ಸುದೀಪ್ ಬಳಿ ಮಾತುಕತೆ ನಡೆಸಿದರು. ‘ನನಗೆ ಇಲ್ಲಿರೋದಕ್ಕೆ ಯಾವುದೇ ಬೇಸರ ಇಲ್ಲ. ನನಗೆ ಸಖತ್ ಖುಷಿ ಇದೆ’ ಎಂದು ಸುದೀಪ್ ಅವರ ಬಳಿ ಮಂಜು ಹೇಳಿಕೊಂಡರು. ಆ ಬಳಿಕ ಅವರಿಗೆ ಬಹುಮಾನದ ಹಣ ನೀಡಲಾಯಿತು.

‘ವಾಕ್​ಮೇಟ್ ಫುಟ್​ವೇರ್​’ ಕಡೆಯಿಂದ ಮಂಜುಗೆ 2 ಲಕ್ಷ ರೂಪಾಯಿ ಬಹುಮಾನ ಮೊತ್ತ ಬಂತು. ‘ಇದನ್ನು ವೃದ್ಧಾಶ್ರಮಕ್ಕೆ ನೀಡಿ’ ಎಂಬರ್ಥದಲ್ಲಿ ಮಂಜು ಹೇಳಿದರು. ಆ ಬಳಿಕ ‘ಇಕೋ ಪ್ಲ್ಯಾನೆಟ್​’ ಕಡೆಯಿಂದ ಮಂಜುಗೆ 1 ಲಕ್ಷ ರೂಪಾಯಿ ನೀಡಲಾಯಿತು. ‘ಇದನ್ನು ಯಾರಿಗೆ ನೀಡ್ತೀರಿ’ ಎಂದು ಸುದೀಪ್ ಕೇಳಿದರು.

‘ಅಪ್ಪ ಇದನ್ನು ಊರಿನ ಕಷ್ಟದಲ್ಲಿರುವ ರೈತರಿಗೆ ನೀಡಿ’ ಎಂದು ಮಂಜು ಹೇಳಿದರು. ಇದನ್ನು ಕೇಳಿ ಸುದೀಪ್​ಗೆ ಸಿಟ್ಟೇ ಬಂತು. ‘ಅಪ್ಪ ಎಂದು ಎದ್ದುನಿಂತರಲ್ಲ ಅವರು ರೈತರೇ. ಈ ಹಣವನ್ನು ನೀವೆ ಇಟ್ಟುಕೊಳ್ಳಿ. ದಾನ-ಧರ್ಮ ಬೇಕು, ದಡ್ಡತನ ಬೇಡ’ ಎಂದು ಸುದೀಪ್ ಹೇಳಿದರು. ನಂತರ ಇದನ್ನು ತಪ್ಪು ತಿಳಿಯಬೇಡಿ ಎಂದು ಕೂಡ ಅವರು ಹೇಳಿದರು.

ಇದನ್ನೂ ಓದಿ: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಹನುಮಂತ; ಮೊದಲೇ ಸೋರಿಕೆ ಆಯ್ತು ಮಾಹಿತಿ

‘2 ಲಕ್ಷ ಕೊಡ್ತೀನಿ ಅಂದ್ರಲ್ಲ ಅದನ್ನು ನಾನು ಕೊಡ್ತೇನೆ. ಒಂದು ಸಂಸ್ಥೆ ಕಡೆಯಿಂದ ಗೌರವ ಪೂರ್ವಕವಾಗಿ ಬಂದಿದೆ ಎಂದಾಗ ಅದನ್ನು ಇಟ್ಟುಕೊಳ್ಳಬೇಕು. ವೇದಿಕೆ ಮೇಲೆ ಸಂಪಾದಿಸಿದೀರಾ ಅದನ್ನು ಇಟ್ಟುಕೊಳ್ಳಿ’ ಎಂದು ಸುದೀಪ್ ಮಂಜು ಸೂಚಿಸಿದರು. ‘ಸಂಗೀತ ಮೊಬೈಲ್ಸ್​’ ಕಡೆಯಿಂದ 50 ಸಾವಿರ ಗಿಫ್ಟ್ ವೋಚರ್ ಮಂಜುಗೆ ಸಿಕ್ಕಿದೆ. ಈ ಮೂಲಕ ಅವರಿಗೆ ಮೂರೂವರೆ ಲಕ್ಷ ರೂಪಾಯಿ ಸಿಕ್ಕಿದೆ.  ಸದ್ಯ ಸುದೀಪ್ ಉದಾರತೆಯ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.