ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಪ್ರತಿ ಶುಕ್ರವಾರ ‘ಶಾನ್ದಾರ್ ಶುಕ್ರವಾರ್’ ಎಂಬ ಹೆಸರಿನಲ್ಲಿ ಸೆಲೆಬ್ರಿಟಿಗಳು ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಚಾರಿಟಿಯ ಉದ್ದೇಶದಿಂದ ಅವರು ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದ ಹಣವನ್ನು ನಿರ್ದಿಷ್ಟ ಉದ್ದೇಶಗಳಿಗೆ ದಾನ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮೊದಲ ವಾರ ಖ್ಯಾತ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಭಾಗವಹಿಸಿದ್ದರು. ನಂತರ ಬಾಲಿವುಡ್ನ ಖ್ಯಾತ ನಿರ್ದೇಶಕಿ ಫರಾ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಕಳೆದ ವಾರ ಟೊಕಿಯೊ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದುಕೊಟ್ಟಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಹಾಕಿ ಆಟಗಾರ ಪಿ.ಶ್ರೀಜೇಶ್ ಭಾಗವಹಿಸಿದ್ದರು. ಪ್ರತೀ ವಾರದ ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿಬಂದಿದ್ದು ವೀಕ್ಷಕರಿಗೆ ಇಷ್ಟವಾಗಿದ್ದವು.
ಆದ್ದರಿಂದಲೇ ಈ ವಾರ ಯಾವ ತಾರೆಯರು ಹಾಟ್ ಸೀಟ್ನಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬುದು ವೀಕ್ಷಕರಿಗೆ ಕುತೂಹಲವಿತ್ತು. ಇದೀಗ ಅದಕ್ಕೆ ಉತ್ತರ ಲಭ್ಯವಾಗಿದೆ. ಸ್ಯಾಂಡಲ್ವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಮಿಂಚಿರುವ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಹಿರಿಯ ನಟ ಜಾಕಿ ಶ್ರಾಫ್ ಕೆಬಿಸಿ 13ರ ಈ ವಾರದ ಅತಿಥಿಗಳಾಗಿದ್ದಾರೆ. ಚಾನಲ್ ಈ ಕುರಿತು ಪ್ರೋಮೋ ಬಿಡುಗಡೆ ಮಾಡಿದ್ದು, ವೀಕ್ಷಕರ ಮನ ಸೆಳೆದಿದೆ.
ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸುನೀಲ್ ಶೆಟ್ಟಿ, ಫಿಟ್ನೆಸ್ ಪ್ರಿಯರು. 60 ವರ್ಷವಾದರೂ ಕೂಡ ಯುವಕರೂ ನಾಚುವಂತೆ ತಮ್ಮ ದೇಹವನ್ನು ಕಾಪಿಟ್ಟುಕೊಂಡಿರುವ ಅವರು, ತಮ್ಮ ಖಡಕ್ ಪಾತ್ರಗಳಿಂದ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಜಾಕಿ ಶ್ರಾಫ್ ಕೂಡ ಫಿಟ್ನೆಸ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಚಾನಲ್ ಬಿಡುಗಡೆ ಮಾಡಿರುವ ನೂತನ ಪ್ರೋಮೋದಲ್ಲಿ ಈರ್ವರೂ ನಟರು ಅಮಿತಾಭ್ಗೆ ತಮ್ಮ ತೋಳುಗಳನ್ನು ತೋರಿಸಿ ಶಕ್ತಿ ಪ್ರದರ್ಶನ ಮಾಡಿದ್ದು, ಆ ಸಂದರ್ಭದ ದೃಶ್ಯಗಳು ಸಖತ್ ಮಜವಾಗಿ ಮೂಡಿಬಂದಿದೆ. ಇದೇ ಸಂದರ್ಭದಲ್ಲಿ ಸುನೀಲ್ ಶೆಟ್ಟಿ ತಾವು ವಾರಕ್ಕೆ ಆರು ದಿನ ಜಿಮ್ಗೆ ತೆರಳುತ್ತೇನೆ ಎಂದು ತಮ್ಮ ಫಿಟ್ನೆಸ್ ರಹಸ್ಯವನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರತಿ ಶುಕ್ರವಾರ ಕೆಬಿಸಿಯಲ್ಲಿ ವಿಶೇಷ ಅತಿಥಿಗಳು ಭಾಗವಹಿಸುವ ಕಾರ್ಯಕ್ರಮ ಪ್ರಸಾರವಾಗುತ್ತದೆ. ಸೋನಿ ವಾಹಿನಿಯಲ್ಲಿ ರಾತ್ರಿ ಒಂಬತ್ತು ಗಂಟೆಗೆ ಈ ಸಂಚಿಕೆ ಪ್ರಸಾರವಾಗಲಿದ್ದು, ತಾರೆಯರು ತಾವು ಗೆದ್ದ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತಾರೆ.
ಇದನ್ನೂ ಓದಿ:
Sai Pallavi: ‘ಅಂತಹ ಚಿತ್ರಗಳಲ್ಲಿ ನಟಿಸೋಕೆ ನನಗೆ ಭಯ’; ಮುಕ್ತವಾಗಿ ಹೇಳಿಕೊಂಡ ಸಾಯಿ ಪಲ್ಲವಿ
(Suniel Shetty and Jackie Shroff are next guests for KBC 13 special episode hosted by Amitabh Bachchan)