ಉಮೇಶ್ ನಟನೆಯ ಕೊನೇ ಧಾರಾವಾಹಿ ‘ರಥಸಪ್ತಮಿ’: ಡಿ.8ರಿಂದ ಉದಯ ಟಿವಿಯಲ್ಲಿ

ಜೀವನ್, ಮೌಲ್ಯಾ ಗೌಡ, ಉಮೇಶ್ ಮುಂತಾದವರು ‘ರಥಸಪ್ತಮಿ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ‘ಸ್ಟೋರಿ ಬ್ರೀವ್ ಸ್ಟುಡಿಯೋಸ್’ ಮೂಲಕ ಹ್ಯಾರಿಸ್ ಅವರು ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ಉದಯ ಟಿವಿಯಲ್ಲಿ ಡಿಸೆಂಬರ್ 8ರಿಂದ ಈ ಸೀರಿಯಲ್ ಪ್ರಸಾರ ಆಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಉಮೇಶ್ ನಟನೆಯ ಕೊನೇ ಧಾರಾವಾಹಿ ‘ರಥಸಪ್ತಮಿ’: ಡಿ.8ರಿಂದ ಉದಯ ಟಿವಿಯಲ್ಲಿ
Umesh, Jeevan, Mauly Gowda

Updated on: Dec 04, 2025 | 5:47 PM

ಧಾರಾವಾಹಿ ಪ್ರಿಯರಿಗೆ ಉದಯ ಟಿವಿ (Udaya Tv) ಆ ಕಾಲದಿಂದಲೂ ಫೇವರಿಟ್. ಈಗ ಈ ವಾಹಿನಿಯಲ್ಲಿ ಹೊಸ ಧಾರಾವಾಹಿ ಪ್ರಸಾರಕ್ಕೆ ಸಜ್ಜಾಗಿದೆ. ‘ರಥಸಪ್ತಮಿ’ ಎಂಬುದು ಈ ಧಾರಾವಾಹಿಯ ಹೆಸರು. ಡಿಸೆಂಬರ್ 8ರಂದು ಈ ಸೀರಿಯಲ್ ಪ್ರಸಾರ ಆರಂಭ ಆಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ ಸಂಜೆ 6 ಗಂಟೆಗೆ ‘ರಥಸಪ್ತಮಿ’ ಸೀರಿಯಲ್ (Ratha Sapthami Serial) ಬಿತ್ತರ ಆಗುತ್ತದೆ. ಇದು ಹಿರಿಯ ನಟ ಉಮೇಶ್ ಅವರು ಅಭಿನಯಿಸಿದ ಕೊನೆಯ ಧಾರಾವಾಹಿ. ಇತ್ತೀಚೆಗಷ್ಟೇ ಉಮೇಶ್ (Umesh) ಅವರು ಅನಾರೋಗ್ಯದಿಂದ ನಿಧನರಾದರು. ‘ರಥಸಪ್ತಮಿ’ ಧಾರಾವಾಹಿಯ ಆರಂಭಿಕ ಸಂಚಿಕೆಗಳಲ್ಲಿ ಉಮೇಶ್ ನಟಿಸಿದ್ದರು.

‘ರಥಸಪ್ತಮಿ’ ಧಾರಾವಾಹಿಗೆ ರಂಗಭೂಮಿ ಹಿನ್ನೆಲೆಯ ನಟ, ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಾಯಕನಾಗಿ ಜೀವನ್ ಅವರು ಅಭಿನಯಿಸಿದ್ದಾರೆ. ಮೌಲ್ಯಾ ಗೌಡ ಅವರು ನಾಯಕಿಯ ಪಾತ್ರವನ್ನು ಮಾಡಿದ್ದಾರೆ. ನಾಗೇಶ್ ಮಯ್ಯ, ವಂದನಾ, ಸುನಿಲ್, ಭೂಮಿಕಾ, ಪುಷ್ಪಾ ಬೆಳವಾಡಿ, ಸುಮೋಕ್ಷಾ, ಪ್ರಮೀಳಾ, ಮಧುಸೂದನ್, ನೀನಾಸಂ ಪ್ರದೀಪ್, ಅಥರ್ವ ಮುಂತಾದವರು ಈ ಸೀರಿಯಲ್​​ನ ಪಾತ್ರವರ್ಗದಲ್ಲಿ ಇದ್ದಾರೆ.

ಕೃಷ್ಣ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಶಾಲ್ ವಿನಾಯಕ್ ಅವರು ಸಂಕಲನ ಮಾಡುತ್ತಿದ್ದಾರೆ. ಈ ಧಾರಾವಾಹಿಯ ಕಥೆ ಬಗ್ಗೆ ಉದಯ ವಾಹಿನಿ ಮಾಹಿತಿ ಹಂಚಿಕೊಂಡಿದೆ. ನಿಸ್ವಾರ್ಥ ಮತ್ತು ಉದಾರ ಮನೋಭಾವದ ಮಧ್ಯಮ ವರ್ಗದ ಹುಡುಗಿ ಸಪ್ತಮಿ. ಆಕೆಗೆ ಶ್ರೀಮಂತ್ ಎಂಬ ಒಬ್ಬ ಜಿಪುಣನ ಜೊತೆ ಮದುವೆ ನಿಶ್ಚಯವಾಗುತ್ತದೆ. ಅಲ್ಲಿಂದ ಶುರುವಾಗುವುದೇ ‘ರಥಸಪ್ತಮಿ’ ಧಾರಾವಾಹಿ ಕಥೆ.

‘ರಥಸಪ್ತಮಿ’ ಧಾರಾವಾಹಿ ಪ್ರೋಮೋ:

ಪದವಿ ಮುಗಿಸಿರುವ ಸಪ್ತಮಿ ಎಂದರೆ ಅಪ್ಪನಿಗೆ ಬಹಳ ಮುದ್ದು. ಆದರೆ ಸಪ್ತಮಿಯ ದಾನದ ಗುಣ ಕಂಡರೆ ಮಲತಾಯಿಗೆ ಇಷ್ಟವಾಗುವುದಿಲ್ಲ. ಸಪ್ತಮಿ ಗಂಡ ಶ್ರೀಮಂತ್ ಪೈಸೆ ಪೈಸೆಗೂ ಲೆಕ್ಕ ಇಡುವಂಥವನು. ಚಿಕ್ಕಪ್ಪನಿಂದ ಮೋಸವಾಗಿದ್ದರಿಂದ ಯಾರನ್ನೂ ನಂಬದೇ ಇರುವ ಪರಿಸ್ಥಿತಿ ಅನಿಗೆ ಬಂದಿದೆ. ಮನೆಯಲ್ಲಿ ಅವನ್ನು ಕಂಜೂಸ್ ಕುಮಾರ ಅಂತ ಕರೆಯುತ್ತಿರುತ್ತಾರೆ.

ಇದನ್ನೂ ಓದಿ: ಯಶ್ ಗೆಳೆಯ ಅಶೋಕ್​ಗೆ ಸಿಕ್ತು ಹೊಸ ಧಾರಾವಾಹಿ ಚಾನ್ಸ್

ಶ್ರೀಮಂತ್ ತರುವ ಸಂಬಳದಿಂದಲೇ ಇಡೀ ಕುಟುಂಬದ ಐದು ಜನರ ಬದುಕು ನಡೆಯಬೇಕು. ಎರಡೂ ಕುಟುಂಬಗಳು ಹೇಳುವ ಸುಳ್ಳುಗಳಿಂದ ಸಪ್ತಮಿ ಹಾಗೂ ಶ್ರೀಮಂತ್ ಪ್ರೀತಿಸುವಂತಾಗಿ ಮದುವೆ ಕೂಡ ಆಗುತ್ತಾರೆ. ತನ್ನ ಕುಟುಂಬವೇ ಸರ್ವಸ್ವ ಅಂತ ನಂಬಿರುವವಳು ಸಪ್ತಮಿ. ಆ ಕುಟುಂಬವನ್ನು ಭೂಮಿಗೆ ಭಾರ ಎನ್ನುವಂತೆ ನೋಡುತ್ತಾನೆ ಶ್ರೀಮಂತ್. ಆತನ ಜೊತೆ ಬದುಕುವ ಅನಿವಾರ್ಯತೆ ಸಪ್ತಮಿಯದ್ದು. ಹೀಗೆ ‘ರಥಸಪ್ತಮಿ’ ಜರೆ ಸಾಗುತ್ತದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:46 pm, Thu, 4 December 25