ವಾಚಾಳಿ ವಂಶಿ, ನಾಚಿಕೆ ಕೃಷ್ಣನ ಕಥೆಯಿರುವ ಹೊಸ ಧಾರಾವಾಹಿ ‘ಕೃಷ್ಣವಂಶಿ’

ಮಾರ್ಚ್ 2ರಿಂದ ಪ್ರಸಾರವಾಗುವ ‘ಕೃಷ್ಣವಂಶಿ’ ಧಾರಾವಾಹಿಗೆ ಸುಬ್ರಹ್ಮಣ್ಯ ಪ್ರಸಾದ್ ಅವರ ನಿರ್ದೇಶನವಿದೆ. ‘ಪರಿಣಿತ ಪ್ರೊಡಕ್ಷನ್’ ಬ್ಯಾನರ್ ಮೂಲಕ ತೇಜಸ್ವಿನಿ ಭಾಸ್ಕರ್ ಮಂಗಾಡಹಳ್ಳಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ರೋಹನ್, ಶಾರದಾ ಪುಂಡಿ, ಗಿರಿಜಾ ಲೋಕೇಶ್ ಅವರು ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ.

ವಾಚಾಳಿ ವಂಶಿ, ನಾಚಿಕೆ ಕೃಷ್ಣನ ಕಥೆಯಿರುವ ಹೊಸ ಧಾರಾವಾಹಿ ‘ಕೃಷ್ಣವಂಶಿ’
Rohan, Sharada Pundi
Image Credit source: Udaya TV

Updated on: Feb 25, 2026 | 3:07 PM

ಕನ್ನಡ ಕಿರುತೆರೆ ಸೀರಿಯಲ್ ಕ್ಷೇತ್ರದಲ್ಲಿ ‘ಉದಯ ಟಿವಿ’ (Udaya Tv) ಪರಂಪರೆ ದೊಡ್ಡದು. ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಈಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆರಂಭಿಸಲಿರುವ ‘ಕೃಷ್ಣವಂಶಿ’ (Krishna Vamshi) ಧಾರಾವಾಹಿಯು ಒಂದು ವಿಶೇಷವಾದ ಕಥೆಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ಆ ಬಗ್ಗೆ ಉಯಯ ವಾಹಿನಿ ಮಾಹಿತಿ ಹಂಚಿಕೊಂಡಿದೆ.

ನಾಚಿಕೆ ಸ್ವಭಾವದ ಹುಡುಗ ಕೃಷ್ಣ, ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೀತಿಯ ಕಥಾಹಂದರ ಈ ಧಾರಾವಾಹಿಯಲ್ಲಿ ಇದೆ. ಒಳ್ಳೆಯ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಅಲ್ಲಿಂದ ಕಥೆ ಆರಂಭ.

ಇದರ ಜೊತೆಗೆ ತಂದೆಯ ಮಮತೆಯ ಕಥೆ ಕೂಡ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಪ್ರಪಂಚ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆ ಅವರದ್ದು. ಆದರೆ ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ.

ವಂಶಿ ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾಹಂದರ ಎಂದು ಉದಯ ವಾಹಿನಿ ತಿಳಿಸಿದೆ.

ಇದನ್ನೂ ಓದಿ: 35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ

ನಾಯಕ ಕೃಷ್ಣನ ಪಾತ್ರದಲ್ಲಿ ರೋಹನ್ ಎ. ಅಭಿನಯಿಸುತ್ತಿದ್ದಾರೆ. ನಾಯಕಿ ವಂಶಿ ಪಾತ್ರವನ್ನು ಶಾರದಾ ಪುಂಡಿ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ಹಂಸ, ವಿಜಯ್, ಹನುಮಂತೇಗೌಡ, ರಜಿನಿ ಟಿ.ಡಿ, ಸಿದ್ದಾರ್ಥ್ ಮಾಧ್ಯಮಿಕ, ಸಿಂಧೂ ಪಿ, ಸಂದೀಪ್ ಎಸ್.ಆರ್, ಪುಷ್ಪ ಅನಿಲ್‌ ಕುಮಾರ್, ಸುಕೃತಾ ನಾಗ್ ಮತ್ತಿತರರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us