ಗುರು ಬಿಟ್ಟು ಹೋದ ಜಾಗ ತುಂಬಲಿದ್ದಾರೆಯೇ ಶಿಷ್ಯ ವಿಜಯ್

|

Updated on: Aug 15, 2024 | 7:49 AM

Bigg Boss: ತಮಿಳು ಬಿಗ್​ಬಾಸ್ ನಿರೂಪಣೆ ಜವಾಬ್ದಾರಿಯಿಂದ ನಟ ಕಮಲ್ ಹಾಸನ್ ಹಿಂದೆ ಸರಿದಿದ್ದಾರೆ. ಹೊಸ ಸೀಸನ್ ಅನ್ನು ಕಮಲ್ ಹಾಸನ್​ರ ಶಿಷ್ಯ ವಿಜಯ್ ಸೇತುಪತಿ ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೊಸ ಜವಾಬ್ದಾರಿ ಒಪ್ಪಿಕೊಳ್ಳಲಿದ್ದಾರೆಯೇ ವಿಜಯ್.

ಗುರು ಬಿಟ್ಟು ಹೋದ ಜಾಗ ತುಂಬಲಿದ್ದಾರೆಯೇ ಶಿಷ್ಯ ವಿಜಯ್
Follow us on

ನಟ ಕಮಲ್ ಹಾಸನ್ ಬಹುಮುಖ ಪ್ರತಿಭೆ. ಅತ್ಯದ್ಭುತ ನಟ, ನಿರ್ದೇಶಕ, ನಿರ್ಮಾಪಕ, ಗೀತ ರಚನೆಕಾರ, ಸಂಭಾಷಣೆಕಾರ, ಕತೆಗಾರ, ಹಾಡುಗಾರರೂ ಆಗಿದ್ದಾರೆ ಕಮಲ್ ಹಾಸನ್. ಇದೆಲ್ಲದರ ನಡುವೆ ಕಳೆದ ಕೆಲ ವರ್ಷಗಳಿಂದ ಟಿವಿ ನಿರೂಪಣೆಯನ್ನೂ ಸಹ ಆರಂಭಿಸಿದ್ದರು. ಕಮಲ್ ಹಾಸನ್ ಅವರು ತಮಿಳು ಬಿಗ್​ಬಾಸ್ ಶೋ ನಿರೂಪಣೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಹಠಾತ್ತನೆ ಬಹಿರಂಗ ಪತ್ರವೊಂದನ್ನು ಬರೆದು ತಾವು ಬಿಗ್​ಬಾಸ್ ನಿರೂಪಣೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದರು. ಇದೀಗ ಕಮಲ್​ ರಿಂದ ತೆರವಾಗಿರುವ ಬಿಗ್​ಬಾಸ್ ನಿರೂಪಣೆಯನ್ನು ಯಾರು ಮುಂದುವರೆಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಕೆಲವು ಮೂಲಗಳ ಪ್ರಕಾರ ನಟ ವಿಜಯ್ ಸೇತುಪತಿ ಈ ಕಾರ್ಯವನ್ನು ಮುಂದುವರೆಸಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ಸೇತುಪತಿಗೆ ಕಮಲ್ ಹಾಸನ್ ಗುರು ಸಮಾನರು. ಗುರು ಬಿಟ್ಟು ಹೋದ ಅಥವಾ ಗುರುವನ್ನು ಒತ್ತಾಯಪೂರ್ವಕವಾಗಿ ತೆಗೆದು ಹಾಕಲಾಗಿರುವ ಜಾಗಕ್ಕೆ ವಿಜಯ್ ಸೇತುಪತಿ ಬರುತ್ತಾರೆಯೇ ಕಾದು ನೋಡಬೇಕಿದೆ. ಕಮಲ್​ರಂತೆ ವಿಜಯ್ ಸೇತುಪತಿ ಸಹ ಅದ್ಭುತ ನಟ. ವೈವಿಧ್ಯತೆ ಇರುವ ನಟ. ಬಿಗ್​ಬಾಸ್ ನಿರೂಪಣೆಯನ್ನು ಅವರು ಚೆನ್ನಾಗಿಯೇ ನಡೆಸಿಕೊಡಬಲ್ಲರು. ಆದರೆ ಅವರು ಒಪ್ಪಿಕೊಳ್ಳುತ್ತಾರೆಯೇ ಎಂಬುದೇ ಪ್ರಶ್ನೆ.

ಇದನ್ನೂ ಓದಿ:ಕಮಲ್ ಹಾಸನ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 64 ವರ್ಷ; ಅಪರೂಪದ ಸಾಧನೆ ಮಾಡಿದ ನಟ

ವಿಜಯ್ ಸೇತುಪತಿಗೆ ಕಿರುತೆರೆ ಹೊಸದೇನೂ ಅಲ್ಲ. ಈ ಹಿಂದೆ ಅವರು ಕುಕಿಂಗ್ ಶೋ ಒಂದನ್ನು ನಡೆಸಿಕೊಟ್ಟಿದ್ದರು. ಅದರ ಚಿತ್ರೀಕರಣ ಕರ್ನಾಟಕದಲ್ಲಿಯೇ ನಡೆದಿತ್ತು. ಕೆಲವು ಶೋಗಳಿಗೆ ಅತಿಥಿಯಾಗಿಯೂ ಸಹ ವಿಜಯ್ ಸೇತುಪತಿ ಆಗಮಿಸಿದ್ದಿದೆ. ಒಳ್ಳೆಯ ಜೀವನಾನುಭವ ಹೊಂದಿರುವ ವಿಜಯ್ ಸೇತುಪತಿ ಬೇರೆ ಬೇರೆ ರೀತಿಯ ಜೀವನ ಶೈಲಿಗಳಿಂದ ಬಂದಿರುವ ಸ್ಪರ್ಧಿಗಳನ್ನು ಚೆನ್ನಾಗಿ ಹ್ಯಾಂಡಲ್ ಮಾಡಲಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ.

ಕಮಲ್ ಹಾಸನ್ ಕಳೆದ ಏಳು ವರ್ಷಗಳಿಂದಲೂ ಬಿಗ್​ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ತಮಿಳು ಬಿಗ್​ಬಾಸ್ ಪ್ರಾರಂಭ ಆದಾಗಿನಿಂದಲೂ ಈ ಶೋಗೆ ಅವರೇ ಹೋಸ್ಟ್. ಇದೇ ಮೊದಲ ಬಾರಿಗೆ ಕಮಲ್ ಹಾಸನ್ ನಿರೂಪಕರಾಗಿ ಕೆಲಸ ಮಾಡುತ್ತಿಲ್ಲ. ಕೆಲವರು ಈ ಶೋ ಅನ್ನು ವಿಜಯ್ ಸೇತುಪತಿ ಹೋಸ್ಟ್ ಮಾಡಲಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ರಜನೀಕಾಂತ್ ಹೆಸರು ಸಹ ಹೇಳುತ್ತಿದ್ದಾರೆ. ಇನ್ನು ಕೆಲವೆಡೆ ನಟ ಸೂರ್ಯ ಹೆಸರು ಸಹ ಕೇಳಿ ಬರುತ್ತಿದೆ. ಯಾರು ನಿರೂಪಣೆ ಮಾಡಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ