
ಬಿಗ್‌ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಹಠಾತ್ತನೆ ಬಂದ್ ಆಗಿದೆ. ಕೆಲ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಬಿಗ್‌ಬಾಸ್ ಮನೆಗೆ ಅಧಿಕಾರಿಗಳು ಬೀಗ ಜಡಿದಿದ್ದು, ಸ್ಪರ್ಧಿಗಳನ್ನೆಲ್ಲ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿದೆ. ಮನೆಯ ಸ್ಪರ್ಧಿಗಳೆಲ್ಲ ಈಗ ರಾಮನಗರದ ಬಳಿ ಇರುವ ಈಗಲ್ಟನ್ ರೆಸಾರ್ಟ್ನಲ್ಲಿದ್ದಾರೆ. ಬಿಗ್‌ಬಾಸ್ ಆಯೋಜಕರು, ಸರ್ಕಾರದ ಕ್ರಮದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ನಿನ್ನೆ ಸಂಜೆ ವೇಳೆಗೆ ಬಿಗ್‌ಬಾಸ್ ಮನೆಗೆ ಬೀಗ ಜಡಿಯಲಾಗಿದ್ದು, ಇಂದು (ಅಕ್ಟೋಬರ್ 08) ಬಿಗ್‌ಬಾಸ್ ಎಪಿಸೋಡ್ ಪ್ರಸಾರವಾಗುತ್ತದೆಯಾ? ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.
ಬಿಗ್‌ಬಾಸ್ ಮನೆಗೆ ಬೀಗ ಹಾಕಿ ಮನೆ ಖಾಲಿ ಮಾಡಿದ್ದರೂ ಸಹ ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್ ಮನೆಯ ಲೈವ್ ಚಾಲ್ತಿಯಲ್ಲಿದೆ. ಬೆಳಿಗಿನ ವೇಳೆಗೆ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಮಲಗಿದ್ದಾರೆ ಎಂದು ಲೈವ್ನಲ್ಲಿ ತೋರಿಸಲಾಗುತ್ತಿದೆ. ಅಸಲಿಗೆ ಬಿಗ್‌ಬಾಸ್ ಶೋ ಪ್ರಸಾರಕ್ಕೆ 24 ಗಂಟೆ ಅಂತರ ಇರುವ ಕಾರಣ, ಇಂದು ರಾತ್ರಿ ಬಿಗ್‌ಬಾಸ್ ಎಪಿಸೋಡ್ ಪ್ರಸಾರ ಆಗಲಿದೆ. ಭಾನುವಾರ-ಸೋಮವಾರ ನಡೆದ ಟಾಸ್ಕ್, ಮನೆಯ ಇನ್ನಿತರೆ ಡ್ರಾಮಾಗಳನ್ನು ಮಂಗಳವಾರ ಅಂದರೆ ನಿನ್ನೆಯ ಶೋನಲ್ಲಿ ಪ್ರಸಾರ ಮಾಡಲಾಗಿದೆ.
ಸೋಮವಾರ-ಮಂಗಳವಾರ ಚಿತ್ರೀಕರಣ ಮಾಡಿ ಎಡಿಟ್ ಮಾಡಲಾಗಿರುವ ಎಪಿಸೋಡ್ ಅನ್ನು ಇಂದು ಪ್ರಸಾರ ಮಾಡಲಾಗುತ್ತದೆ. ಅದು ಮಾತ್ರವೇ ಅಲ್ಲದೆ ಒಂದೊಮ್ಮೆ ಬಿಗ್‌ಬಾಸ್ ಆಯೋಜಕರು ಮನಸ್ಸು ಮಾಡಿದರೆ ಇನ್ನೂ ಒಂದೆರಡು ದಿನಗಳು ಪ್ರಸಾರ ಮಾಡಬಹುದಾದಷ್ಟು ಕಂಟೆಂಟ್ ಅವರುಗಳ ಬಳಿ ಇದೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಒಂದೆರಡು ದಿನಗಳ ಕಾಲ ಯಾವುದೇ ಅಡಚಣೆ ಇಲ್ಲದೆ ಬಿಗ್‌ಬಾಸ್ ಪ್ರಸಾರ ಆಗಲಿದೆ.
ಇದನ್ನೂ ಓದಿ:ರಣರಂಗವಾಯ್ತು ಬಿಗ್‌ಬಾಸ್ ಮನೆ: ಅಶ್ವಿನಿ ಗೌಡ vs ಅಶ್ವಿನಿ
ನಿನ್ನೆ ಸಹ ಜಿಯೋ ಹಾಟ್‌ಸ್ಟಾರ್‌ನಲ್ಲಿ ಎಪಿಸೋಡ್ ಪ್ರಸಾರದಲ್ಲಿ ತಡವಾಯ್ತು. ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದ ಕಲರ್ಸ್ ಕನ್ನಡ, ‘ಅನಿರೀಕ್ಷಿತ ಕಾರಣಗಳಿಂದಾಗಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ‘ಬಿಗ್‌ಬಾಸ್’ನ ಇಂದಿನ ಸಂಚಿಕೆಯ ಪ್ರಕಟಣೆಯ ಸಮಯದಲ್ಲಿ ವ್ಯತ್ಯಯ ಸಂಭವಿಸಿದೆ. ಈ ಅಡಚಣೆಗಾಗಿ ಕ್ಷಮೆ ಕೋರುತ್ತೇವೆ. ಇಂದಿನ ಸಂಚಿಕೆ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ’ ಎಂದು ಪ್ರಕಟಣೆ ಹೊರಡಿಸಿತು.
ಬಿಗ್‌ಬಾಸ್ ಮನೆಗೆ ಬೀಗ ಹಾಕಿರುವ ಹಿನ್ನೆಲೆಯಲ್ಲಿ ಇದೀಗ ಜಾಲಿವುಡ್ ಸ್ಟುಡಿಯೋ, ಬಿಗ್‌ಬಾಸ್ ಆಯೋಜಕರು ನ್ಯಾಯಾಲಯದ ಮೆಟ್ಟಿಲೇರಲಿದ್ದು, ಘಟನೆಗೆ ಸಂಬಂಧಿಸಿದಂತೆ ಇಂದೇ ಆದೇಶ ಹೊರಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಇಂದೇ ಆದೇಶ ಹೊರಬಿದ್ದರೆ, ಬಿಗ್‌ಬಾಸ್ ಕಾರ್ಯಕ್ರಮ ಯಾವುದೇ ಅಡಚಣೆ ಇಲ್ಲದೆ ಮುಂದುವರೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ