
ನಟ ದಳಪತಿ ವಿಜಯ್ ಅವರಿಗೆ (Thalapathy Vijay) ಕಾಲಿವುಡ್ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ತೆರೆಗೆ ಬಂದರೆ ಸಾಕು ಅಭಿಮಾನಿಗಳು ಹಬ್ಬ ಮಾಡುತ್ತಾರೆ. ಅವರ ಕಟೌಟ್ ನಿರ್ಮಿಸಿ, ಹಾಲಿನ ಅಭಿಷೇಕ ಮಾಡುತ್ತಾರೆ. ಅವರ ನಟನೆಯ ‘ಬೀಸ್ಟ್’ ಸಿನಿಮಾ (Beast Movie) ತೆರೆಗೆ ಬರೋಕೆ ರೆಡಿ ಆಗಿದೆ. ಅದಕ್ಕೂ ಮೊದಲೇ ವಿಜಯ್ ಅವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆಯಾಚಿಸಿದ್ದಾರೆ. ವಿಶೇಷ ಎಂದರೆ ಇದರಲ್ಲಿ ‘ದಳಪತಿ’ ವಿಜಯ್ ಅವರ ಯಾವುದೇ ತಪ್ಪು ಕೂಡ ಇರಲಿಲ್ಲ! ಸದ್ಯ, ಅವರು ಕ್ಷಮೆ ಕೇಳಿರುವ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.
ಶನಿವಾರ (ಫೆಬ್ರವರಿ 19) ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಚೆನ್ನೈನಲ್ಲಿ ವಿಜಯ್ ಅವರು ತಮ್ಮ ಮತ ಚಲಾಯಿಸಲು ಬಂದಿದ್ದರು. ಈ ವೇಳೆ ವಿಜಯ್ ಅವರನ್ನು ನೋಡೋಕೆ ಅಭಿಮಾನಿಗಳು ಹಾಗೂ ಮಾಧ್ಯಮದವರು ಮುತ್ತಿಕೊಂಡರು. ಅಭಿಮಾನಿಗಳು ಜೋರಾಗಿ ಕೂಗೋಕೆ ಆರಂಭಿಸಿದ್ದರು. ಮತಗಟ್ಟೆಯಲ್ಲಿ ನೂಕುನುಗ್ಗಲು ಆರಂಭವಾಯಿತು. ಅಭಿಮಾನಿಗಳನ್ನು ನಿಯಂತ್ರಿಸೋಕೆ ಪೊಲೀಸರಿಗೆ ಕಷ್ಟಸಾಧ್ಯವಾಯಿತು. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಅಭಿಮಾನಿಗಳು ಮುತ್ತಿಕೊಂಡಿದ್ದರಿಂದ ಮತ ಹಾಕಲು ಬಂದ ಜನಸಾಮಾನ್ಯರು ಹಾಗೂ ಮತಗಟ್ಟೆಯ ಅಧಿಕಾರಿಗಳಿಗೆ ತೀವ್ರ ತೊಂದರೆ ಆಗಿತ್ತು. ಅವರು ನಟನಿಗೆ ಬೈದುಕೊಂಡರು. ಅಚ್ಚರಿ ಎಂಬಂತೆ ವಿಜಯ್ ಅವರು ಕೈ ಮಗಿದು ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದರು. ಈ ವಿಡಿಯೋ ಈಗ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ನಟನ ಸರಳತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
‘ಬೀಸ್ಟ್’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ವಿಜಯ್ ಬ್ಯುಸಿ ಆಗಿದ್ದಾರೆ. ಪೂಜಾ ಹೆಗ್ಡೆ ಚಿತ್ರದ ನಾಯಕಿ. ನೆಲ್ಸನ್ ದಿಲೀಪ್ಕುಮಾರ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿನ್ನದ ಕಳ್ಳಸಾಗಣೆ ಬಗ್ಗೆ ಸಿನಿಮಾ ಇದೆ. ಈ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ವರೆಗೆ ಚಿತ್ರತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿಲ್ಲ. ‘ಕೆಜಿಎಫ್ 2’ ಎದುರು ಈ ಸಿನಿಮಾ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ರಿಲೀಸ್ ಆದ ‘ಬೀಸ್ಟ್’ ಸಿನಿಮಾದ ‘ಅರೇಬಿಕ್ ಕುಥು..’ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೂಜಾ ಹೆಗ್ಡೆ ಹಾಗೂ ವಿಜಯ್ ಸ್ಟೆಪ್ ಹಾಕಿರೋದು ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಸಿನಿಮಾದ ಹಾಡಿಗೆ ಅನೇಕರು ಸ್ಟೆಪ್ ಹಾಕುತ್ತಿದ್ದಾರೆ. ನಟಿ ಸಮಂತಾ ಅವರು ಏರ್ಪೋರ್ಟ್ನಲ್ಲಿ ಈ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದರು.
ಇದನ್ನೂ ಓದಿ: ತಂದೆ-ತಾಯಿ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ ನಟ ದಳಪತಿ ವಿಜಯ್; ಇದು ಸರಿ ಇದೆ ಎಂದ ಫ್ಯಾನ್ಸ್
ದಳಪತಿ ವಿಜಯ್ ಮನೆಗೆ ಬಾಂಬ್ ಇಟ್ಟಿದ್ದೇವೆಂದು ಬೆದರಿಕೆ; ಮುಂದೇನಾಯ್ತು?