ದಕ್ಷಿಣ ಭಾರತದ ಖ್ಯಾತ ನಟ ‘ದಳಪತಿ’ ವಿಜಯ್ (Thalapathy Vijay) ಅವರ ಅಭಿಮಾನಿಗಳಿಗೆ ಜೂನ್ 22 ಎಂದರೆ ಹಬ್ಬವೇ ಸರಿ. ಯಾಕೆಂದರೆ, ಇಂದು ವಿಜಯ್ ಹುಟ್ಟುಹಬ್ಬ (Thalapathy Vijay Birthday). ಕಾಲಿವುಡ್ನ ಈ ಸ್ಟಾರ್ ನಟನಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. 48ನೇ ವಸಂತಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್ ಅವರಿಗೆ ಎಲ್ಲೆಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು ಹರಿದುಬರುತ್ತಿವೆ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ವಿಜಯ್ ನಟಿಸಲಿರುವ ಮುಂದಿನ ಸಿನಿಮಾಗಳ ಬಗ್ಗೆ ಸಿನಿಪ್ರಿಯರಿಗೆ ಸಖತ್ ನಿರೀಕ್ಷೆ ಇದೆ. ಆ ಬಗ್ಗೆ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ. ವಿಜಯ್ ಅವರ ಸಿನಿಮಾಗಳ ಕುರಿತು ಬರ್ತ್ಡೇ ಪ್ರಯುಕ್ತ ಅಪ್ಡೇಟ್ ಸಿಗುತ್ತಿದೆ.
2022ರ ಏಪ್ರಿಲ್ 13ರಂದು ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ತೆರೆಕಂಡಿತು. ಆದರೆ ಈ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಲಿಲ್ಲ. ಬಾಕ್ಸ್ ಆಫೀಸ್ನಲ್ಲಿ ಬಹುಕೋಟಿ ರೂಪಾಯಿ ಕಮಾಯಿ ಮಾಡಿದರೂ ಕೂಡ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹವಾ ಮುಂದೆ ‘ಬೀಸ್ಟ್’ ಸದ್ದು ಕೇಳಿಸಲೇ ಇಲ್ಲ. ಅಲ್ಲದೇ ಈ ಚಿತ್ರದಲ್ಲಿ ಇರುವುದು ನೀರಸವಾದ ಕಥೆ ಎಂಬ ನೆಗೆಟಿವ್ ವಿಮರ್ಶೆ ಕೂಡ ಕೇಳಿಬಂತು. ಹಾಗಾಗಿ ಮುಂಬರುವ ಸಿನಿಮಾಗಳ ಮೂಲಕ ಗೆಲ್ಲುವ ಅನಿವಾರ್ಯತೆ ವಿಜಯ್ ಅವರಿಗೆ ಇದೆ.
ಇದನ್ನೂ ಓದಿ: ‘ಕೆಜಿಎಫ್ 2’ ಎದುರು ‘ಬೀಸ್ಟ್’ಗೆ ಹಿನ್ನಡೆ; ಚಿತ್ರರಂಗಕ್ಕೆ ದಳಪತಿ ವಿಜಯ್ ಮಗನ ಎಂಟ್ರಿ ಬಗ್ಗೆ ಟಾಕ್ ಶುರು
‘ದಳಪತಿ’ ವಿಜಯ್ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ 66ನೇ ಸಿನಿಮಾದ ಶೀರ್ಷಿಕೆ ಅನೌನ್ಸ್ ಆಗಿದೆ. ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದೆ. ಈ ಸಿನಿಮಾಗೆ ‘ವಾರಿಸು’ ಎಂದು ಶೀರ್ಷಿಕೆ ಇಡಲಾಗಿದೆ. 67ನೇ ಚಿತ್ರದಲ್ಲಿ ಅವರು ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆ ಕೈ ಜೋಡಿಸಲಿದ್ದಾರೆ. ‘ವಿಕ್ರಮ್’ ಸಿನಿಮಾ ಮೂಲಕ ಲೋಕೇಶ್ ಅವರು ಭರ್ಜರಿ ಖ್ಯಾತಿ ಗಳಿಸಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಮತ್ತು ವಿಜಯ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರದ ಬಗ್ಗೆ ಸಹಜವಾಗಿಯೇ ಕೌತುಕ ನಿರ್ಮಾಣ ಆಗಿದೆ.
ಧೋನಿ ಜತೆ ವಿಜಯ್ ಸಿನಿಮಾ?
ಎಂ.ಎಸ್. ಧೋನಿ ಅವರು ಸಿನಿಮಾ ನಿರ್ಮಾಣದಲ್ಲಿ ಆಸಕ್ತಿ ತೋರಿಸುತ್ತಿರುವ ಬಗ್ಗೆ ಈಗಾಗಲೇ ವರದಿ ಆಗಿದೆ. ಅವರು ನಿರ್ಮಾಣ ಮಾಡಲಿರುವ ಹೊಸ ಚಿತ್ರದಲ್ಲಿ ದಳಪತಿ ವಿಜಯ್ ನಟಿಸುತ್ತಾರೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ. ಇದೇ ಸಿನಿಮಾದಲ್ಲಿ ಧೋನಿ ಅವರು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಬಗ್ಗೆ ಕೂಡ ಅಂತೆ-ಕಂತೆಗಳು ಹರಿದಾಡುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.