
ನಟ ದಳಪತಿ ವಿಜಯ್ (Thalapathy Vijay) ಅವರ ಕೊನೇ ಸಿನಿಮಾ ಎಂಬ ಕಾರಣಕ್ಕೆ ‘ಜನ ನಾಯಗನ್’ (Jana Nayagan) ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜನವರಿ 9ರಂದು ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿತ್ತು. ಅಡ್ವಾನ್ಸ್ ಬುಕಿಂಗ್ ಕೂಡ ಶುರುವಾಗಿತ್ತು. ಆದರೆ ಅಂತಿಮ ಹಂತದಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಯಿತು. ಸೆನ್ಸಾರ್ ಪ್ರಮಾಣಪತ್ರ ಸಿಗದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡುವುದು ಅನಿವಾರ್ಯ ಆಯಿತು. ಈಗ ಈ ವಿವಾದ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ.
ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ಸಿಗದೇ ಇರುವುದನ್ನು ಪ್ರಶ್ನಿಸಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಪ್ರಮಾಣಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶ ನೀಡಿತ್ತು. ಆದರೆ ಕೆಲವೇ ಗಂಟೆಗಳ ಬಳಿಕ ಈ ಆದೇಶಕ್ಕೆ ಸ್ವತಃ ಮದ್ರಾಸ್ ಹೈಕೋರ್ಟ್ ತಡೆ ನೀಡಿತು.
ಈ ಅರ್ಜಿಯ ಸೂಕ್ತ ವಿಚಾರಣೆ ನಡೆಯದೆಯೇ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಹಾಗಾಗಿ ವಿಚಾರಣೆಯನ್ನು ಜನವರಿ 21ಕ್ಕೆ ಮುಂದೂಡಲಾಯಿತು. ಅಂದರೆ, ಅಲ್ಲಿಯ ತನಕ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಅವಕಾಶ ಇಲ್ಲದಂತಾಯಿತು. ಈಗ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮದ್ರಾಸ್ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
‘ಜನ ನಾಯಗನ್’ ಸಿನಿಮಾದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಕತೆ ಇದೆ ಎನ್ನಲಾಗಿದೆ. ಸ್ವತಃ ವಿಜಯ್ ಅವರು ಸಿನಿಮಾ ಬಿಟ್ಟು ರಾಜಕೀಯದ ಕಡೆಗೆ ಹೊರಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ವಿರುದ್ಧ ರಾಜಕೀಯ ಕುತಂತ್ರದ ಭಾಗವಾಗಿಯೇ ‘ಜನ ನಾಯಗನ್’ ಸಿನಿಮಾಗೆ ತೊಂದರೆ ಕೊಡಲಾಗಿದೆ ಎನ್ನಲಾಗುತ್ತಿದೆ. ಒಟ್ಟಾರೆ ಈ ವಿವಾದವು ಈಗ ರಾಜಕೀಯದ ತಿರುವು ಪಡೆದುಕೊಂಡಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಜನವರಿ 21ಕ್ಕೆ ಮದ್ರಾಸ್ ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಇದರ ವಿಚಾರಣೆ ನಡೆದು, ಅಂತಿಮ ತೀರ್ಪು ಯಾವಾಗ ಬರಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಿರ್ಮಾಣ ಸಂಸ್ಥೆಗೆ ಸಾಕಷ್ಟು ನಷ್ಟ ಆಗಲಿದೆ. ‘ಜನ ನಾಯಗನ್’ ಬಿಡುಗಡೆ ದಿನಾಂಕ ಅನಿಶ್ವಿತ ಆಗಿರುವುದರಿಂದ ಇನ್ನುಳಿದ ಸಿನಿಮಾ ಮೇಲೂ ಇದು ಪರಿಣಾಮ ಬೀರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.