ನಿಮಗೆ ಬೇಕಾದವರಿಗೇ ಕಿಚ್ಚನ ಚಪ್ಪಾಳೆ ಕೊಡೋಕೆ ಆಗತ್ತಾ? ರಜತ್ ಕಿಶನ್ ಖಡಕ್ ಪ್ರಶ್ನೆ
ಸುದೀಪ್ ನೀಡಿದ ‘ಕಿಚ್ಚನ ಚಪ್ಪಾಳೆ’ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ‘ಕಿಚ್ಚನ ಚಪ್ಪಾಳೆ’ ನೀಡಿದ್ದು ಸರಿ ಅಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಅವರು ಟಿವಿ9 ಜೊತೆ ಮಾತನಾಡಿ ಈ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಳೆದ ವಾರದಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ (Kicchana Chappale) ನೀಡಿದರು. ಅದನ್ನು ವೀಕ್ಷಕರು ವಿರೋಧಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಹಳ ಚರ್ಚೆ ಆಗುತ್ತಿದೆ. ಈ ಕುರಿತು ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ ಕೂಡ ಮಾತನಾಡಿದ್ದಾರೆ. ರಜತ್ ಅವರು 12ನೇ ಸೀಸನ್ನಲ್ಲಿ ಕೂಡ ಅತಿಥಿಯಾಗಿ ಕೆಲವು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ‘ಕಿಚ್ಚನ ಚಪ್ಪಾಳೆ’ ವಿವಾದದ ಬಗ್ಗೆ ರಜತ್ (Rajath Kishan) ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಒಳ್ಳೆಯದು ಮಾಡಿದರೂ ಜನರು ಮಾತಾಡುತ್ತಾರೆ, ಕೆಟ್ಟದ್ದು ಮಾಡಿದರೂ ಮಾತನಾಡುತ್ತಾರೆ. ಹಾಗಾದ್ರೆ ಈ ವಾರ ಯಾರಿಗೆ ಕಿಚ್ಚ ಚಪ್ಪಾಳೆ ಕೊಡಬೇಕಿತ್ತಂತೆ? ಅಲ್ಲಿ ಏನು ನಡೆದಿದೆಯೋ ಅದನ್ನು ತೋರಿಸಿದ್ದಾರೆ. ಅದರ ಪ್ರಕಾರ ಇಡೀ ಟೀಮ್ ಹಾಗೂ ಸುದೀಪ್ ಸರ್ ನೋಡಿ ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎಂಬುದನ್ನು ನಿರ್ಧರಿಸಿಯೇ ಕೊಟ್ಟಿರುತ್ತಾರೆ’ ಎಂದು ರಜತ್ ಹೇಳಿದ್ದಾರೆ.
‘ಕಿಚ್ಚನ ಚಪ್ಪಾಳೆ ಒಂದು ದೊಡ್ಡ ಭಾಗ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ದೊಡ್ಡದು, ಮಹತ್ವ ಹೊಂದಿರುವುದು ಕಿಚ್ಚನ ಚಪ್ಪಾಳೆ. ಅದನ್ನು ತುಂಬಾ ಯೋಚನೆ ಮಾಡಿ ಕೊಟ್ಟಿರುತ್ತಾರೆ. ಅಶ್ವಿನಿ ಅವರಿಗಾಗಲಿ, ಧ್ರುವಂತ್ ಅವರಿಗಾಗಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದರೆ ಅವರು ಅರ್ಹರು ಅಂತ ಅರ್ಥ’ ಎಂದಿದ್ದಾರೆ ರಜತ್.
‘ಅರ್ಹರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಾಗ ಜನರು ದ್ವೇಷ ಯಾಕೆ ತೋರಿಸಬೇಕು? ಎಲ್ಲದನ್ನೂ ಯೋಚನೆ ಮಾಡಿಯೇ ಕೊಟ್ಟಿರುತ್ತಾರೆ. ಹಾಗಾದ್ರೆ ನಿಮಗೆ ಯಾರಿಗೆ ಬೇಕೋ ಅವರಿಗೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಂಡು ಹೋಗೋಕೆ ಆಗತ್ತಾ? ಆಗಲ್ಲ ತಾನೇ? ಈಗ ಕಿಚ್ಚನ ಚಪ್ಪಾಳೆ ಕೊಟ್ಟಿರುವುದು ಸರಿ ಇದೆ ಅಂತ ನನಗೆ ಅನಿಸುತ್ತದೆ’ ಎಂದು ರಜತ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಿಚ್ಚನ ಚಪ್ಪಾಳೆ: ಸುದೀಪ್ ಇನ್ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್
ಇತ್ತೀಚಿನ ದಿನಗಳಲ್ಲಿ ಗಿಲ್ಲಿ ಸ್ವಲ್ಪ ಸೈಲೆಂಟ್ ಆಗಿದ್ದಾರೆ. ಆ ಬಗ್ಗೆ ರಜತ್ ಪ್ರತಿಕ್ರಿಯೆ ನೀಡಿದ್ದಾರೆ. ‘ಎರಡು ವಾರದಿಂದ ಗಿಲ್ಲಿ ಸೈಲೆಂಟ್ ಆಗಿದ್ದಾನೆ ಅಷ್ಟೇ. ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಏರಿಳಿತ ಸಹಜ. 24 ಗಂಟೆ ಅಲ್ಲಿ ಒಂದೇ ರೀತಿ ಇರೋಕೆ ಆಗಲ್ಲ. ಹೊರಗಡೆಯಾದರೆ ನಮಗೆ ಜನರು ಸಿಗುತ್ತಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ನೋಡಿದ ಮುಖಗಳನ್ನೇ ನೋಡಬೇಕು. ಆದರೂ ಗಿಲ್ಲಿ ಚೆನ್ನಾಗಿ ಆಡಿದ್ದಾನೆ’ ಎಂದು ರಜತ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



