‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ ಗೆಲುವಿನಿಂದಾಗಿ ಓಟಿಟಿ ವಲಯದಲ್ಲಿ ದೊಡ್ಡ ಸಂಚಲನ ಉಂಟಾಗಿದೆ. ಸಮಂತಾ ಅಕ್ಕಿನೇನಿ, ಪ್ರಿಯಾಮಣಿ, ಮನೋಜ್ ಬಾಜಪೇಯಿ ಮುಂತಾದವರು ನಟಿಸಿರುವ ಈ ವೆಬ್ ಸರಣಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಸಮಂತಾ ವೃತ್ತಿಜೀವನಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇಷ್ಟು ದಿನ ಬರೀ ಸಿನಿಮಾಗಳಲ್ಲಿ ಮಿಂಚುತ್ತಿದ್ದ ಅವರು ಈಗ ವೆಬ್ ಸಿರೀಸ್ ದುನಿಯಾದಲ್ಲೂ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದರಂತೆ ಅವರ ಸಂಭಾವನೆ ಕೂಡ ಹೆಚ್ಚುತ್ತಿದೆ.
ಅಮೇಜಾನ್ ಪ್ರೈಂ ವಿಡಿಯೋದಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ಬಿಡುಗಡೆ ಆಯಿತು. ಅಮೇಜಾನ್ಗೆ ಸಖತ್ ಪೈಪೋಟಿ ನೀಡುತ್ತಿರುವ ನೆಟ್ಫ್ಲಿಕ್ಸ್ ಕೂಡ ಭಾರತದಲ್ಲಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚು ಜನರನ್ನು ಆಕರ್ಷಿಸಲು ಏನಾದರೂ ಕಸರತ್ತು ಮಾಡುವುದು ಅನಿವಾರ್ಯ ಆಗಿದೆ. ಹಾಗಾಗಿ ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಇದ್ದ ಕಲಾವಿದರಿಗೆ ನೆಟ್ಫ್ಲಿಕ್ಸ್ ಮಣೆ ಹಾಕುತ್ತಿದೆ. ನಟ ಮನೋಜ್ ಬಾಜಪೇಯಿ ಅವರು ಈಗಾಗಲೇ ನೆಟ್ಫ್ಲಿಕ್ಸ್ ಜೊತೆ ಕೈ ಜೋಡಿಸಿದ್ದಾರೆ. ಈಗಿನದ್ದು ಸಮಂತಾ ಸರದಿ.
ಮೂಲಗಳ ಪ್ರಕಾರ ಸಮಂತಾ ಅವರಿಗೆ ನೆಟ್ಫ್ಲಿಕ್ಸ್ ಕಡೆಯಿಂದ ದೊಡ್ಡದೊಂದು ಆಫರ್ ಬಂದಿದೆ. ಹೊಸ ವೆಬ್ಸಿರೀಸ್ನಲ್ಲಿ ನಟಿಸಲು ಅವರಿಗೆ ಆಹ್ವಾನಿಸಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ಸಮಂತಾ ಪಡೆದುಕೊಂಡಿದ್ದಕ್ಕಿಂತಲೂ ಡಬಲ್ ಸಂಭಾವನೆಯನ್ನು ನೀಡಲು ನೆಟ್ಫ್ಲಿಕ್ಸ್ ಒಪ್ಪಿಕೊಂಡಿದೆ ಎನ್ನಲಾಗಿದೆ. ‘ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ನಟಿಸಿದ್ದಕ್ಕಾಗಿ ಸಮಂತಾಗೆ 4 ಕೋಟಿ ರೂ. ಸಂಭಾವನೆ ಸಿಕ್ಕಿದೆ ಎಂಬ ಸುದ್ದಿ ಇದೆ. ಈಗ ಅವರಿಗೆ ನೆಟ್ಫ್ಲಿಕ್ಸ್ ಕಡೆಯಿಂದ ಬರೋಬ್ಬರಿ 8 ಕೋಟಿ ರೂ. ಆಫರ್ ಮಾಡಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ನೆಟ್ಫ್ಲಿಕ್ಸ್ ನಿರ್ಮಾಣ ಮಾಡಲಿರುವ ಹೊಸ ವೆಬ್ ಸರಣಿ ಮೂರು ಭಾಷೆಯಲ್ಲಿ ಮೂಡಿಬರಲಿದ್ದು, ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕರು ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಈ ಹೊಸ ಬೆಳವಣಿಗೆ ಬಗ್ಗೆ ಸಮಂತಾ ಇನ್ನೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಟಾಲಿವುಡ್ನಲ್ಲಿ ಅವರು ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ಟ್ರೇಲರ್ ಬಿಡುಗಡೆ ಆದಾಗಿನಿಂದ ಸಮಂತಾ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅದರ ನಡುವೆಯೂ ಈ ವೆಬ್ ಸರಣಿಗೆ ದೊಡ್ಡ ಗೆಲುವು ಸಿಕ್ಕಿದೆ.
ಇದನ್ನೂ ಓದಿ:
ದಿ ಫ್ಯಾಮಿಲಿ ಮ್ಯಾನ್ 2ನಲ್ಲಿ ಸಮಂತಾ ಆ್ಯಕ್ಷನ್ ನೋಡಿದ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಸಮಂತಾ ರಾಜಿ ಆಗಲು ಒಪ್ಪಿಕೊಂಡಿದ್ದು ಏಕೆ? ಭಾರಿ ವಿವಾದದ ಬಳಿಕ ಬಾಯ್ಬಿಟ್ಟ ನಟಿ