ಮಿಥುನ್ ಚಕ್ರವರ್ತಿ ತೆರಳುತ್ತಿದ್ದ ಟೆಂಪೋ ನಿಲ್ಲಿಸಿ ಕಾರಿನಲ್ಲಿ ಡ್ರಾಪ್ ಕೊಟ್ಟಿದ್ದ ಅಮಿತಾಭ್ ಬಚ್ಚನ್

|

Updated on: Apr 09, 2023 | 7:14 AM

ಮಿಥುನ್ ನಟಿಸಿದ ಮೊದಲ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಆದರೆ, ಮಿಥುನ್ ಅವರನ್ನು ಚಿತ್ರರಂಗ ಹೊಸಬ ಅಂತಲೇ ಟ್ರೀಟ್ ಮಾಡುತ್ತಿತ್ತು. ಈ ಬಗ್ಗೆ ನಮಾಶಿ ಮಾತನಾಡಿದ್ದಾರೆ.

ಮಿಥುನ್ ಚಕ್ರವರ್ತಿ ತೆರಳುತ್ತಿದ್ದ ಟೆಂಪೋ ನಿಲ್ಲಿಸಿ ಕಾರಿನಲ್ಲಿ ಡ್ರಾಪ್ ಕೊಟ್ಟಿದ್ದ ಅಮಿತಾಭ್ ಬಚ್ಚನ್
ಅಮಿತಾಭ್-ಮಿಥುನ್ ಚಕ್ರವರ್ತಿ
Follow us on

ಅಮಿತಾಭ್​ ಬಚ್ಚನ್ ಹಾಗೂ ಮಿಥುನ್ ಚಕ್ರವರ್ತಿ (Mithun Chakraborty) ನಡುವೆ ಒಳ್ಳೆಯ ಬಾಂಧವ್ಯ ಇದೆ. ಹಲವು ವರ್ಷಗಳಿಂದ ಇವರು ಚಿತ್ರರಂಗದಲ್ಲಿದ್ದಾರೆ. ಮಿಥುನ್ ಚಕ್ರವರ್ತಿ ಅವರು ಚಿತ್ರರಂಗಕ್ಕೆ ಬಂದಾಗ ಅಮಿತಾಭ್ ಬಚ್ಚನ್ ಹೀರೋ ಆಗಿ ಗುರುತಿಸಿಕೊಂಡಿದ್ದರು. ಮಿಥುನ್ ಅವರನ್ನು ಚಿತ್ರರಂಗದವರು ಹೊಸ ಹುಡುಗ ಎಂದು ನೋಡುತ್ತಿದ್ದ ಕಾಲ ಇತ್ತು. ಆದರೆ, ಅಮಿತಾಭ್ ಬಚ್ಚನ್ (Amitabh Bachchan) ಮಾತ್ರ ಮಿಥುನ್​ಗೆ ಸಾಕಷ್ಟು ಗೌರವ ನೀಡುತ್ತಿದ್ದರು. ಒಮ್ಮೆ ಮಿಥುನ್ ಬಳಿ ಅಮಿತಾಭ್ ನಡೆದುಕೊಂಡ ರೀತಿಯ ಬಗ್ಗೆ ಮಿಥುನ್ ಮಗ ನಮಾಶಿ ಚಕ್ರವರ್ತಿ ಅವರು ಮಾತನಾಡಿದ್ದಾರೆ.

ನಮಾಶಿ ಚಕ್ರವರ್ತಿ ಅವರು ‘ಬ್ಯಾಡ್ ಬಾಯ್​’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಅವರು ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಿಥುನ್ ನಟಿಸಿದ ಮೊದಲ ಸಿನಿಮಾ ‘ಮೃಗಯಾ’ 1976ರಲ್ಲಿ ತೆರೆಗೆ ಬಂತು. ಇದು ಬೆಂಗಾಲಿ ಭಾಷೆಯ ಸಿನಿಮಾ. ಈ ಸಿನಿಮಾದ ನಟನೆಗೆ ಮಿಥುನ್​ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಆದರೆ, ಮಿಥುನ್ ಅವರನ್ನು ಚಿತ್ರರಂಗ ಹೊಸಬ ಅಂತಲೇ ಟ್ರೀಟ್ ಮಾಡುತ್ತಿತ್ತು. ಈ ಬಗ್ಗೆ ನಮಾಶಿ ಮಾತನಾಡಿದ್ದಾರೆ.

‘ತರನಾ ಸಿನಿಮಾದಲ್ಲಿ ನನ್ನ ತಂದೆ (ಮಿಥುನ್ ಚಕ್ರವರ್ತಿ) ನಟಿಸುತ್ತಿದ್ದರು. ಅವರನ್ನು ಹೊಸಬ ಅಂತಲೇ ಚಿತ್ರರಂಗದವರು ಪರಿಗಣಿಸಿದ್ದರು. ಈ ಚಿತ್ರಕ್ಕೆ ರಂಜೀತಾ ಕೌರ್ ನಾಯಕಿ ಆಗಿದ್ದರು. ಅವರು ಆಗ ಸ್ಟಾರ್ ಹೀರೋಯಿನ್. ಅವರಿಗೆ ವ್ಯಾನಿಟಿ ವ್ಯಾನ್ ನೀಡಲಾಗಿತ್ತು. ಆದರೆ, ನನ್ನ ತಂದೆಗೆ ಆ ವ್ಯವಸ್ಥೆ ಇರಲಿಲ್ಲ. ಈ ಚಿತ್ರದ ಶೂಟಿಂಗ್ ಶಿಮ್ಲಾದಲ್ಲಿ ನಡೆಯುತ್ತಿತ್ತು. ಅಮಿತಾಭ್ ಬಚ್ಚನ್ ಅವರ ‘ಮಿಸ್ಟರ್​ ನಟ್ವರ್​​ಲಾಲ್​’ ಸಿನಿಮಾ ಚಿತ್ರೀಕರಣ ಕೂಡ ಶಿಮ್ಲಾದಲ್ಲೇ ನಡೆಯುತ್ತಿತ್ತು. ಆಗ ಮಿಥುನ್ ಅವರನ್ನು ಅಮಿತಾಭ್ ಮೊದಲ ಬಾರಿ ನೋಡಿದ್ದರು’ ಎಂದಿದ್ದಾರೆ ನಮಾಶಿ.

‘ಪ್ರೊಡಕ್ಷನ್​ಹೌಸ್​ನವರ ಜೊತೆ ಮಿಥುನ್ ಟೆಂಪೋದಲ್ಲಿ ಕೂತಿದ್ದರು. ಇದನ್ನು ನೋಡಿ ಅಮಿತಾಭ್​​ಗೆ ಅಚ್ಚರಿ ಆಯಿತು. ಅವರು ಇಳಿದು ಬಂದು ‘ನೀವು ಮೃಗಯಾ ಚಿತ್ರದ ಮಿಥುನ್​ ಅಲ್ಲವೇ’ ಎಂದು ಕೇಳಿದರು. ನಮ್ಮ ತಂದೆ ಹೌದು ಎಂದರು. ಆಗ ನನ್ನ ತಂದೆಯನ್ನು ಟೆಂಪೋದಿಂದ ಇಳಿಸಿ ಕಾರಿನಲ್ಲೇ ಶೂಟಿಂಗ್ ಸ್ಥಳಕ್ಕೆ ಬಿಟ್ಟರು. ಇಬ್ಬರ ನಡುವೆ ಫ್ರೆಂಡ್​ಶಿಪ್ ಬೆಳೆಯಿತು. ಈ ಗೆಳತನಕ್ಕೆ ಈಗ 45 ವರ್ಷ’ ಎಂದಿದ್ದಾರೆ ಅವರು.

ಇದನ್ನೂ ಓದಿ: Amitabh Bachchan: ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್​ಗೆ ಶೂಟಿಂಗ್ ವೇಳೆ ಗಂಭೀರ ಗಾಯ

ಅಮಿತಾಭ್ ಬಚ್ಚನ್ ಹಾಗೂ ಮಿಥುನ್ ಚಕ್ರವರ್ತಿ ಇಬ್ಬರೂ ಮುಕುಲ್ ಆನಂದ್ ನಿರ್ದೇಶನದ ‘ಅಗ್ನೀಪತ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ