‘ಥಗ್ ಲೈಫ್’ ಅಘೋಷಿತ ನಿಷೇಧ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೊಟೀಸ್

Thug Life movie: ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ಅಘೋಷಿತ ನಿಷೇಧ ಹೇರಿರುವ ಬೆನ್ನಲ್ಲೆ ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದ್ದು, ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ರಾಜ್ಯ ಸರ್ಕಾರವು, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕಿದೆ.

‘ಥಗ್ ಲೈಫ್’ ಅಘೋಷಿತ ನಿಷೇಧ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೊಟೀಸ್
Thug Life

Updated on: Jun 13, 2025 | 12:46 PM

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ಅನಧಿಕೃತ ನಿಷೇಧ ಹೇರಿರುವ ಕುರಿತಂತೆ ಕಮಲ್ ಹಾಸನ್, ನ್ಯಾಯಾಲಯದ ಮೊರೆ ಹೋಗಿದ್ದಾರೆ. ರಾಜ್ಯ ಹೈಕೋರ್ಟ್​ನಲ್ಲಿ ಅವರಿಗೆ ಅನುಕೂಲವಲ್ಲದ ಆದೇಶ ಬಂದ ಬೆನ್ನಲ್ಲೆ ಸುಪ್ರೀಂಕೋರ್ಟ್​​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಕಮಲ್ ಪರ ವಕೀಲರು, ರಾಜ್ಯದಲ್ಲಿ ಕೆಲವು ಧಮನಕಾರಿ ಸಂಘಟನೆಗಳು ಭಾಷೆಯ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಸಿನಿಮಾದ ವಿರುದ್ಧ ನಿಷೇಧ ಹೇರಿವೆ ಎಂದು ವಾದಿಸಿದ್ದಾರೆ.

ಇದೀಗ ಸುಪ್ರೀಂಕೋರ್ಟ್, ‘ಥಗ್ ಲೈಫ್’ ಸಿನಿಮಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದ್ದು, ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಮೊದಲು ಇದೇ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆದಾಗ, ಪ್ರಕರಣವನ್ನು ರಾಜ್ಯ ಹೈಕೋರ್ಟ್​​ನಲ್ಲಿಯೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿತ್ತು, ಆದರೆ ಕಮಲ್ ಪರ ವಕೀಲರು, ‘ಯಾರು ಸಿನಿಮಾದ ಬಿಡುಗಡೆಗೆ ತಡೆ ಒಡ್ಡುತ್ತಿದ್ದಾರೆಯೋ ಅವರೊಟ್ಟಿಗೆ ಸಂಧಾನ ಮಾಡಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿದೆ’ ಎಂದು ಉತ್ತರಿಸಿದ್ದರು. ಇದೇ ಕಾರಣಕ್ಕೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿತ್ತು.

‘ಥಗ್ ಲೈಫ್’ ಸಿನಿಮಾ ಪರವಾಗಿ ವಾದ ಮಂಡಿಸಿದ ವಕೀಲ ನವಪ್ರೀತ್ ಕೌರ್, ‘ಕೆಲವು ಧಮನಕಾರಿ ಗುಣವೊಂದಿರುವ ಸಂಘಟನೆಗಳು ಭಾಷಾ ಅಲ್ಪಸಂಖ್ಯಾತರನ್ನು ಬೆದರಿಸುತ್ತಿದ್ದು, ಭಾಷೆಯ ಕಾರಣಕ್ಕೆ ತಮಿಳು ಸಿನಿಮಾದ ಬಿಡುಗಡೆಗೆ ತಡೆ ಒಡ್ಡಿದ್ದು, ಹಿಂಸೆಯ ಬೆದರಿಕೆಯನ್ನು ಒಡ್ಡಿವೆ. ಹಾಗಾಗಿ ನಾವು ಸಿನಿಮಾ ಹಾಗೂ ಚಿತ್ರಮಂದಿರಗಳ ಭದ್ರತೆಯನ್ನು ಕೋರುತ್ತಿದ್ದೇವೆ’ ಎಂದಿದ್ದಾರೆ. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಥಗ್ ಲೈಫ್’ ವಿಚಾರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್​ಗೆ ಹಿನ್ನಡೆ

ವಾದ ಆಲಿಸಿದ ಸುಪ್ರೀಂಕೋರ್ಟ್, ‘ಸಿಬಿಎಫ್​ಸಿ ಪ್ರಮಾಣ ಪತ್ರ ಪಡೆದಿರುವ ತಮಿಳು ಚಲನಚಿತ್ರ “ಥಗ್ ಲೈಫ್” ಅನ್ನು ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಅನಧಿಕೃತವಾಗಿ ನಿಷೇಧ ಹೇರಲಾಗಿದೆ. ಹಿಂಸಾಚಾರದ ಬೆದರಿಕೆಯಡಿಯಲ್ಲಿ ಈ ನಿಷೇಧವನ್ನು ಜಾರಿ ಮಾಡಿಲಾಗಿದೆಯೇ ವಿನಃ ಯಾವುದೇ ಕಾನೂನು ಪ್ರಕ್ರಿಯೆಯಿಂದ ನಿಷೇಧವನ್ನು ಹೇರಲಾಗಿಲ್ಲ, ಸಿನಿಮಾ ಮಂದಿರಗಳಿಗೆ ಬೆಂಕಿ ಹಚ್ಚುವ ಸ್ಪಷ್ಟ ಬೆದರಿಕೆ ಹಾಕಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಹಿಂಸಾಚಾರದ ಪ್ರಚೋದನೆ ಮಾಡಲಾಗಿದೆ. ಭಯದ ವಾತಾವರಣ ನಿರ್ಮಿಸುವ ಪ್ರಯತ್ನ ಕಾಣುತ್ತಿದೆ. ಅರ್ಜಿಯ ತುರ್ತು ಮತ್ತು ನ್ಯಾಯಾಲಯದ ಮುಂದೆ ಹಾಜರುಪಡಿಸಲಾದ ವಿಷಯಗಳನ್ನು ಪರಿಗಣಿಸಿ ಪ್ರತಿವಾದಿಗಳಿಗೆ ಪ್ರತಿಕ್ರಿಯೆ ನೀಡಲು ನೊಟೀಸ್ ನೀಡಲಾಗಿದೆ’ ಎಂದಿದೆ.

‘ಥಗ್ ಲೈಫ್’ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು, ‘ಕನ್ನಡ ಭಾಷೆಯು ತಮಿಳು ಭಾಷೆಯಿಂದ ಉಗಮವಾಗಿದೆ’ ಎಂದಿದ್ದರು. ಕಮಲ್​ರ ಈ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆದರೆ ಚಿತ್ರಮಂದಿರಗಳಿಗೆ ಬೆಂಕಿ ಇಡುವುದಾಗಿ ಎಚ್ಚರಿಕೆ ನೀಡಿದ್ದವು. ‘ಥಗ್ ಲೈಫ್’ ಸಿನಿಮಾ ಕಳೆದ ವಾರವೇ ಕರ್ನಾಟಕದ ಹೊರತಾಗಿ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಆದರೆ ಸಿನಿಮಾ ಫ್ಲಾಪ್ ಎನಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Fri, 13 June 25