ಒಂದು ಕಾಲದಲ್ಲಿ ಭಾರತೀಯ ಸಿನಿಮಾ ಎಂದರೆ ಕೇವಲ ಬಾಲಿವುಡ್ (Bollywood) ಚಿತ್ರಗಳತ್ತ ಕೈ ತೋರಿಸಲಾಗುತ್ತಿತ್ತು. ಆ ರೀತಿಯ ತಪ್ಪು ಕಲ್ಪನೆ ಈಗಿಲ್ಲ. ಇಂಡಿಯನ್ ಫಿಲ್ಮ್ ಇಂಡಸ್ಟ್ರಿ (Indian Film Industry) ಎಂದರೆ ಅದರಲ್ಲಿ ಎಲ್ಲ ಭಾಷೆಯ ಸಿನಿಮಾಗಳೂ ಇರುತ್ತವೆ ಎಂಬುದು ಜಗತ್ತಿಗೇ ತಿಳಿಯುವಂತಾಗಿದೆ. ಅದರಲ್ಲೂ ಸೌತ್ ಇಂಡಿಯನ್ ಸಿನಿಮಾಗಳು (South Indian Movies) ಮಾಡುತ್ತಿರುವ ಸದ್ದು ಸಣ್ಣದೇನಲ್ಲ. ದಕ್ಷಿಣ ಭಾರತದ ಘಟಾನುಘಟಿ ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋಗಳಿಂದಾಗಿ ಎಲ್ಲರ ಮನಸ್ಥಿತಿ ಬದಲಾಗುವಂತಾಗಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ಸಿನಿಮಾಗಳು ಗುರುತಿಸಿಕೊಳ್ಳುತ್ತಿವೆ. ‘ಕೆಜಿಎಫ್: ಚಾಪ್ಟರ್ 2’ (KGF Chapter 2), ‘ಆರ್ಆರ್ಆರ್’ (RRR), ಮುಂತಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿವೆ. 2022ರಲ್ಲಿ ಈವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಭಾರತೀಯ ಸಿನಿಮಾಗಳ (Top 10 Indian movies) ಪಟ್ಟಿಯನ್ನು ಐಎಂಬಿಡಿ (IMDB) ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಈ 10 ಸಿನಿಮಾಗಳಲ್ಲಿ ಬರೋಬ್ಬರಿ 7 ಸ್ಥಾನಗಳನ್ನು ದಕ್ಷಿಣ ಭಾರತದ ಚಿತ್ರಗಳು ಆಕ್ರಮಿಸಿಕೊಂಡಿವೆ ಎಂಬುದು ವಿಶೇಷ. ಹಾಗಾದರೆ ನಂಬರ್ ಒನ್ ಪಟ್ಟ ಯಾರಿಗೆ? ಕನ್ನಡದ ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕೆ!
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ, ಯಶ್ (Yash) ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿಶ್ವಾದ್ಯಂತ ಅಬ್ಬರಿಸಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ 1228.3 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ ‘ಹೊಂಬಾಳೆ ಫಿಲ್ಮ್ಸ್’ (Hombale Fimls) ಸಂಸ್ಥೆಗೆ ಭರ್ಜರಿ ಲಾಭ ಆಗಿದೆ. 2ನೇ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಇದೆ. ತೆಲುಗಿನ ಈ ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು 1131.1 ಕೋಟಿ ರೂಪಾಯಿ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವಿಶ್ವಾದ್ಯಂತ 337.6 ಕೋಟಿ ರೂಪಾಯಿ ಗಳಿಕೆ ಮಾಡಿ ಮೂರನೇ ಸ್ಥಾನ ಪಡೆದುಕೊಂಡಿದೆ. ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾದ ಸಾಧನೆ ಕೂಡ ದೊಡ್ಡದು. ಸದ್ಯ ನಾಲ್ಕನೇ ಸ್ಥಾನದಲ್ಲಿ ಇರುವ ಈ ಚಿತ್ರ 290.2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.
ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭುಲಯ್ಯ 2’ (230.8 ಕೋಟಿ), ‘ಬೀಸ್ಟ್’ (227.3 ಕೋಟಿ), ‘ಗಂಗೂಬಾಯಿ ಕಾಠಿಯಾವಾಡಿ’ (194.8 ಕೋಟಿ), ‘ಸರ್ಕಾರು ವಾರಿ ಪಾಟ’ (191.8 ಕೋಟಿ), ‘ವಲಿಮೈ’ (163.2 ಕೋಟಿ), ‘ಭೀಮ್ಲಾ ನಾಯಕ್’ (161.3 ಕೋಟಿ) ಚಿತ್ರಗಳು ಅನುಕ್ರಮವಾಗಿ 5ರಿಂದ 10ನೇ ಸ್ಥಾನಗಳನ್ನು ಪಡೆದುಕೊಂಡಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Mon, 13 June 22