ಹೀರೋ ಜತೆ ಜಗಳ; ಆನ್​ಲೈನ್​ನಲ್ಲಿ ತನ್ನದೇ ಸಿನಿಮಾ ಲೀಕ್​ ಮಾಡಿದ ನಿರ್ದೇಶಕ

ಸ್ಟಾರ್​ ಹೀರೋ ಟೊವಿನೋ ಥಾಮಸ್​ ಅವರ ‘ವಳಕ್ಕು’ ಸಿನಿಮಾ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಲ್ಲ. ಬದಲಿಗೆ, ಸಿನಿಮಾದ ನಿರ್ದೇಶಕರೇ ಸಿನಿಮಾವನ್ನು ಆನ್​ಲೈನ್​ನಲ್ಲಿ ಲೀಕ್​ ಮಾಡಿದ್ದಾರೆ. ಇದರಿಂದ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಟೊವಿನೋ ಥಾಮಸ್​ ಅಭಿಮಾನಿಗಳು ಸಖತ್​ ಬೇಸರ ಮಾಡಿಕೊಂಡಿದ್ದಾರೆ.

ಹೀರೋ ಜತೆ ಜಗಳ; ಆನ್​ಲೈನ್​ನಲ್ಲಿ ತನ್ನದೇ ಸಿನಿಮಾ ಲೀಕ್​ ಮಾಡಿದ ನಿರ್ದೇಶಕ
ಟೊವಿನೋ ಥಾಮಸ್​

Updated on: May 14, 2024 | 7:27 PM

ಮಾಲಿವುಡ್​ನ ಖ್ಯಾತ ನಟ ಟೊವಿನೋ ಥಾಮಸ್​ (Tovino Thomas) ಮತ್ತು ನಿರ್ದೇಶಕ ಸನಲ್​ ಕುಮಾರ್​ ಶಶಿಧರನ್​ ನಡುವಿನ ಜಟಾಪಟಿ ಈಗ ಇನ್ನೊಂದು ಹಂತಕ್ಕೆ ಹೋಗಿದೆ. ಸನಲ್​ ಕುಮಾರ್​ ಶಶಿಧರನ್​ ನಿರ್ದೇಶನದಲ್ಲಿ ‘ವಳಕ್ಕು’ ಸಿನಿಮಾ (Vazhakku Movie) ಮೂಡಿಬಂದಿದೆ. ಈ ಸಿನಿಮಾದಲ್ಲಿ ಟೊವಿನೋ ಥಾಮಸ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಲ್ಲದೇ ಬಂಡವಾಳ ಕೂಡ ಹೂಡಿದ್ದಾರೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗುವುದಕ್ಕೂ ಮುನ್ನವೇ ಆನ್​ಲೈನ್​ನಲ್ಲಿ ಈ ಸಿನಿಮಾವನ್ನು ಸನಲ್​ ಕುಮಾರ್​ ಶಶಿಧರನ್ (Sanal Kumar Sasidharan)​ ಲೀಕ್​ ಮಾಡಿದ್ದಾರೆ. ಇದರಿಂದ ಎಲ್ಲರಿಗೂ ಅಚ್ಚರಿ ಆಗಿದೆ.

‘ವಳಕ್ಕು’ ಸಿನಿಮಾದ ಬಿಡುಗಡೆ ವಿಚಾರವಾಗಿ ಟೊವಿನೋ ಥಾಮಸ್​ ಮತ್ತು ಸನಲ್​ ಕುಮಾರ್​ ಶಶಿಧರನ್​ ನಡುವೆ ಮೊದಲಿನಿಂದಲೂ ಮನಸ್ತಾಪ ಇತ್ತು. ಅದು ಈಗ ಅತಿರೇಕಕ್ಕೆ ಹೋಗಿದೆ. ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಟೊವಿನೋ ಥಾಮಸ್​ ಮೂಗು ತೂರಿಸುತ್ತಿದ್ದಾರೆ ಎಂದು ಈ ಮೊದಲು ಸನಲ್​ ಕುಮಾರ್​ ಶಶಿಧರನ್​ ಆರೋಪಿಸಿದ್ದರು.

ಈ ಸಿನಿಮಾ ಸಿದ್ಧವಾಗಿ ಬಹಳ ಸಮಯ ಕಳೆದಿದೆ. ಆದರೆ ಹೀರೋ ಮತ್ತು ನಿರ್ದೇಶಕನ ನಡುವೆ ಕೆಲವು ವಿಚಾರಗಳು ಇತ್ಯರ್ಥ ಆಗದ ಕಾರಣ ಇದರ ಬಿಡುಗಡೆ ತಡವಾಗಿದೆ. ಇದರಿಂದ ನಿರ್ದೇಶಕ ಸನಲ್​ ಕುಮಾರ್​ ಶಶಿಧರನ್​ ರೋಸಿ ಹೋಗಿದ್ದಾರೆ. ಈಗ ಅವರು ‘ವಿಮಿಯೋ’ ವಿಡಿಯೋ ಪ್ಲಾಟ್​ಫಾರ್ಮ್​ನಲ್ಲಿ ‘ವಳಕ್ಕು’ ಸಿನಿಮಾವನ್ನು ಅಪ್​ಲೋಡ್​ ಮಾಡಿದ್ದಾರೆ. ಅದನ್ನು ಕೆಲವರು ಡೌನ್​ಲೋಡ್​ ಮಾಡಿ ಯೂಟ್ಯೂಬ್​ನಲ್ಲೂ ಹರಿಬಿಟ್ಟಿದ್ದಾರೆ.

ಒಟ್ಟಿನಲ್ಲಿ ನಟ, ನಿರ್ದೇಶಕನ ನಡುವಿನ ಜಗಳದಿಂದ ಸಿನಿಮಾ ಮೇಲೆ ಹೊಡೆತ ಬಿದ್ದಂತೆ ಆಗಿದೆ. ಚಿತ್ರಮಂದಿರದಲ್ಲಿ ಅಥವಾ ಒಟಿಟಿಯಲ್ಲಿ ಸರಿಯಾಗಿ ಬಿಡುಗಡೆ ಆಗಬೇಕಿದ್ದ ‘ವಳಕ್ಕು’ ಸಿನಿಮಾ ಈಗ ಆನ್​ಲೈನ್​ನಲ್ಲಿ ಸೋರಿಕೆ ಆಗಿದೆ. ಇದಕ್ಕೂ ಮುನ್ನ ಸೋಶಿಯಲ್​ ಮೀಡಿಯಾದಲ್ಲಿ ಟೊವಿನೋ ಥಾಮಸ್​ ಮತ್ತು ಸನಲ್​ ಕುಮಾರ್​ ಶಶಿಧರನ್​ ಅವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಮಲಯಾಳಂನ ಈ ಹತ್ತು ಹಾರರ್​ ಚಿತ್ರಗಳನ್ನು ನೀವು ಮಿಸ್ ಮಾಡಿಕೊಳ್ಳಲೇಬಾರದು..

2020ರಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿತ್ತು. 2021ರಲ್ಲಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಹ ಮುಗಿದಿತ್ತು. ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಆಗಿತ್ತು. ಮಲಯಾಳಂ ಚಿತ್ರರಂಗದಲ್ಲಿ ಸನಲ್​ ಕುಮಾರ್​ ಶಶಿಧರನ್​ ಅವರು ಕೆಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ತಮ್ಮದೇ ಸಿನಿಮಾವನ್ನು ಆನ್​ಲೈನ್​ನಲ್ಲಿ ಸೋರಿಕೆ ಮಾಡುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us