ಜೂ ಎನ್​ಟಿಆರ್ ಕೈಹಿಡಿದ ತ್ರಿವಿಕ್ರಮ್, ಕತೆ ಸಾಮಾನ್ಯದ್ದಲ್ಲ

Trivikram Srinivas: ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್, ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇದೀಗ ತ್ರಿವಿಕ್ರಮ್ ಶ್ರೀನಿವಾಸ್, ಜೂ ಎನ್​ಟಿಆರ್ ಜೊತೆ ಕೈಜೋಡಿಸಿದ್ದು, ಅದ್ಧೂರಿ ಸಿನಿಮಾ ಒಂದನ್ನು ತೆರೆಗೆ ತರಲು ಸಜ್ಜಾಗಿದ್ದಾರೆ. ಸಿನಿಮಾದ ಅಡಿಬರಹ ‘ಗಾಡ್ ಆಫ್ ವಾರ್’.

ಜೂ ಎನ್​ಟಿಆರ್ ಕೈಹಿಡಿದ ತ್ರಿವಿಕ್ರಮ್, ಕತೆ ಸಾಮಾನ್ಯದ್ದಲ್ಲ
Srinivas Jr Ntr

Updated on: Jun 12, 2025 | 11:27 AM

ತೆಲುಗು ಚಿತ್ರರಂಗದಲ್ಲಿ (Tollywood) ರಾಜಮೌಳಿಯಷ್ಟೆ ಪ್ರತಿಭಾವಂತ ನಿರ್ದೇಶಕ ಯಾರಾದರೂ ಇದ್ದರೆ ಅದು ತ್ರಿವಿಕ್ರಮ್ ಶ್ರೀನಿವಾಸ್. ರಾಜಮೌಳಿ ರೀತಿಯೇ ಅದ್ಭುತ ಕಮರ್ಶಿಯಲ್ ಸಿನಿಮಾಗಳನ್ನು ತ್ರಿವಿಕ್ರಮ್ ನೀಡಬಲ್ಲರು. ಕೆಲವು ಅದ್ಭುತ ಸಿನಿಮಾಗಳನ್ನು ತ್ರಿವಿಕ್ರಮ್ ನೀಡಿದ್ದಾರೆ. ಆದರೆ ತ್ರಿವಿಕ್ರಮ್ ನಿರ್ದೇಶನದ ಈ ಹಿಂದಿನ ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ನಿರ್ದೇಶನ ಮಾಡಿದ್ದರು ತ್ರಿವಿಕ್ರಮ್. ಅಲ್ಲು ಅರ್ಜುನ್ ಜೊತೆಗೆ ಮುಂದಿನ ಸಿನಿಮಾ ನಿರ್ದೇಶಿಸುವುದಾಗಿ ಘೋಷಣೆ ಮಾಡಿದ್ದರು, ಆದರೆ ಅಲ್ಲು ಅರ್ಜುನ್, ತ್ರಿವಿಕ್ರಮ್ ಕೈಬಿಟ್ಟು ಅಟ್ಲಿ ಕೈಹಿಡಿದಿದ್ದಾರೆ. ಈಗ ತ್ರಿವಿಕ್ರಮ್, ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಜೂ ಎನ್​ಟಿಆರ್ ಕೈ ಹಿಡಿದಿದ್ದಾರೆ.

ಅಲ್ಲು ಅರ್ಜುನ್ ಕೈ ಕೊಟ್ಟ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್, ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತು. ವೆಂಕಟೇಶ್ ಹಾಗೂ ರಾಮ್ ಚರಣ್ ಒಟ್ಟಿಗೆ ನಟಿಸಲಿರುವ ಸಿನಿಮಾ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಆದರೆ ಇದೀಗ ತ್ರಿವಿಕ್ರಮ್ ತಮ್ಮ ಹಳೆಯ ಗೆಳೆಯ ಜೂ ಎನ್​ಟಿಆರ್ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಪವರ್​ಫುಲ್ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್​ಗೆ ಪೌರಾಣಿಕ ಕತೆಗಳೆಂದರೆ ಬಹಳ ಪ್ರೀತಿ. ಅವರ ಈ ವರೆಗಿನ ಎಲ್ಲ ಸಿನಿಮಾಗಳಲ್ಲಿಯೂ ಪೌರಾಣಿಕ ಪಾತ್ರಗಳ, ಕತೆಗಳ ಉಲ್ಲೇಖ ಇದ್ದೇ ಇದೆ. ಪೌರಾಣಿಕ ಕತೆಗಳಿಗೆ ತಮ್ಮದೇ ರೀತಿ ಬೇರೆ ಅರ್ಥ ನೀಡಿ ಅವುಗಳನ್ನು ಬಳಸಿಕೊಂಡಿದ್ದಾರೆ ತ್ರಿವಿಕ್ರಮ್ ಶ್ರೀನಿವಾಸ್. ಇದೀಗ ನೇರವಾಗಿ ಪೌರಾಣಿಕ ಪಾತ್ರವನ್ನೇ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ತ್ರಿವಿಕ್ರಮ್ ಮುಂದಾಗಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್-ತ್ರಿವಿಕ್ರಮ್ ಸಿನಿಮಾದ ಕತೆ ಏನು? ನಿರ್ಮಾಪಕ ಕೊಟ್ಟರು ಸುಳಿವು

ಕುಮಾರಸ್ವಾಮಿ (ಕಾರ್ತಿಕೇಯ, ಶಣ್ಮುಖ) ದೇವರನ್ನು ಪ್ರಧಾನವಾಗಿರಿಸಿಕೊಂಡು ಕತೆಯೊಂದನ್ನು ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕತೆ ರಚಿಸಿಕೊಂಡಿದ್ದಾರೆ. ಸಿನಿಮಾದ ಅಡಿ ಬರಹ ‘ಲಾರ್ಡ್ ಆಫ್ ವಾರ್’. ಇತರೆ ಕೆಲವು ಹಿಂದೂ ದೇವರುಗಳಿಗೆ ಹೋಲಿಸಿದರೆ ಶಣ್ಮುಖ ದೇವರ ಬಗ್ಗೆ ಹೆಚ್ಚಿನ ಕತೆಗಳು ಜನರಿಗೆ ತಿಳಿದಿಲ್ಲ. ಇದೀಗ ಶಣ್ಮುಖ ಸ್ವಾಮಿಯನ್ನು ಪ್ರಧಾನವಾಗಿರಿಸಿಕೊಂಡಿರುವ ಸಿನಿಮಾ ನಿರ್ದೇಶಿಸಲು ತ್ರಿವಿಕ್ರಮ್ ಮುಂದಾಗಿದ್ದಾರೆ.

ಮೂಲಗಳ ಪ್ರಕಾರ, ಎನ್​ಟಿಆರ್, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಹಾಗೂ ‘ದೇವರ 2’ ಸಿನಿಮಾ ಮುಗಿಸಿದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಇನ್ನು ತ್ರಿವಿಕ್ರಮ್ ಶ್ರೀನಿವಾಸ್ ಆ ವೇಳೆಗೆ ರಾಮ್ ಚರಣ್ ಹಾಗೂ ವೆಂಕಟೇಶ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಸಿನಿಮಾ ಅನ್ನು ಮುಗಿಸಲಿದ್ದಾರೆ. ಈ ಸಿನಿಮಾನಲ್ಲಿ ರಾಮ್ ಚರಣ್​ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ