ಪ್ರತಿಭಟನೆ ಮುಂದೂಡಿದ ಪ್ರದರ್ಶಕರು, ತೆಲುಗು ಚಿತ್ರರಂಗ ನಿರಾಳ
Telugu Movies: ಜೂನ್ 1 ರಿಂದ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಎರಡೂ ರಾಜ್ಯದ ಪ್ರದರ್ಶಕರು ಘೋಷಿಸಿದ್ದರು. ಆದರೆ ಇದೀಗ ತೆಲುಗು ಫಿಲಂ ಚೇಂಬರ್ ಮಧ್ಯ ಪ್ರವೇಶದಿಂದಾಗಿ ಪ್ರದರ್ಶಕರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಆಂಧ್ರ ಪ್ರದೇಶ (Andhra Pradesh) ಮತ್ತು ತೆಲಂಗಾಣ ಸಿನಿಮಾ ಪ್ರದರ್ಶಕರು ಜೂನ್ 1 ರಿಂದ ಚಿತ್ರಮಂದಿರಗಳ ಬಂದ್ಗೆ ಕರೆ ನೀಡಿದ್ದರು. ಜೂನ್ ತಿಂಗಳಲ್ಲಿ ಪವನ್ ಕಲ್ಯಾಣ್ರ ‘ಹರಿ ಹರ ವೀರ ಮಲ್ಲು’, ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’, ಧನುಶ್ರ ‘ಕುಬೇರ’ ಸೇರಿದಂತೆ ಕೆಲ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಲಿದ್ದವು. ಚಿತ್ರಮಂದಿರಗಳ ಬಂದ್ ಕರೆಯಿಂದ ತೆಲುಗು ಸಿನಿಮಾ ನಿರ್ಮಾಪಕರು ಕಂಗಾಲಾಗಿದ್ದರು. ಇದೀಗ ಅವರಿಗೆ ತಾತ್ಕಾಲಿಕ ನಿರಾಳತೆ ದೊರೆತಿದೆ. ತೆಲುಗು ಫಿಲಂ ಚೇಂಬರ್ ಮಧ್ಯ ಪ್ರವೇಶಿಸಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದೆ.
ಸಿನಿಮಾ ಪ್ರದರ್ಶಕರೊಟ್ಟಿಗೆ ಸಭೆ ನಡೆಸಿದ ತೆಲುಗು ಫಿಲಂ ಚೇಂಬರ್ ಸದಸ್ಯರು ಪ್ರದರ್ಶಕರ ಮನವೊಲಿಸಲು ಸಫಲರಾಗಿದ್ದಾರೆ. ಆ ಮೂಲಕ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡಿದ್ದಾರೆ. ನಿನ್ನೆ ತೆಲುಗು ಸಿನಿಮಾ ನಿರ್ಮಾಪಕರು ಮತ್ತು ಸಿನಿಮಾ ಪ್ರದರ್ಶಕರ ಸಂಘದ ಪದಾಧಿಕಾರಿಗಳು, ಕೆಲವು ಸದಸ್ಯರೊಟ್ಟಿಗೆ ಎರಡು ಸಭೆಗಳನ್ನು ಫಿಲಂ ಚೇಂಬರ್ ನಡೆಸಿದ್ದು, ಅಂತಿಮವಾಗಿ ಪ್ರದರ್ಶಕರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯುವಂತೆ ಮಾಡಿದೆ. ಮೇ 23 ರಂದು ಪ್ರದರ್ಶಕರು ಸುದ್ದಿಗೋಷ್ಠಿ ನಡೆಸಿ ತಮ್ಮ ಅಧಿಕೃತ ನಿರ್ಧಾರ ಪ್ರಕಟಿಸಲಿದ್ದಾರೆ.
ಇದನ್ನೂ ಓದಿ:ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ ಪುಷ್ಪ
ಸಿನಿಮಾ ಪ್ರದರ್ಶಕರು, ಚಿತ್ರಮಂದಿರಗಳನ್ನು ಬಂದ್ ಮಾಡದೆ ತಮ್ಮ ಸಮಸ್ಯೆಗಳನ್ನು ನಿರ್ಮಾಪಕರು ಹಾಗೂ ಸರ್ಕಾರದ ಮುಂದೆ ಇಡಲು ನಿರ್ಧರಿಸಿರುವುದಾಗಿ ಫಿಲಂ ಚೇಂಬರ್ ಹೇಳಿದೆ. ಸಿನಿಮಾ ಪ್ರದರ್ಶಕರು ಮೊದಲಿನಿಂದಲೂ ಕ್ಯೂಬ್ ಶುಲ್ಕದ ಬಗ್ಗೆ, ಮನೊರಂಜನಾ ತೆರಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಇದರ ಜೊತೆಗೆ ಇದೀಗ, ಮಲ್ಟಿಪ್ಲೆಕ್ಸ್ ಮಾದರಿಯಂತೆ ತಮಗೂ ಲಾಭ ಹಂಚಿಕೆ ಆಧಾರದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ನಿರ್ಮಾಪಕರನ್ನು ಒತ್ತಾಯಿಸಿದ್ದರು. ಆದರೆ ನಿರ್ಮಾಪಕರು ಇದಕ್ಕೆ ಒಪ್ಪಿಲ್ಲ.
ಪ್ರಸ್ತುತ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಬಾಡಿಗೆ ಆಧಾರದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರ ಲಾಭ ಹಂಚಿಕೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸಲಾಗುತ್ತದೆ. ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶಿಸುತ್ತಿರುವುದರಿಂದ ತಮಗೆ ನಷ್ಟವಾಗುತ್ತಿದೆ. ತಾವು ಚಿತ್ರಮಂದಿರದ ಮೇಂಟೆನೆನ್ಸ್, ದುಬಾರಿ ಕರೆಂಟ್ ಬಿಲ್, ಕ್ಯೂಬ್ ಚಾರ್ಜಸ್, ಸಿಬ್ಬಂದಿ ಬಾಡಿಗೆ, ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರಕ್ಕೆ ಆಗುವ ಹಾನಿ ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಾಡಿಗೆ ಆಧಾರದಲ್ಲಿ ಸಿನಿಮಾ ಪ್ರದರ್ಶನದಿಂದ ನಷ್ಟ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published On - 11:31 am, Thu, 22 May 25




