
ಕನ್ನಡ ಸಿನಿಮಾ (Sandalwood) ಪ್ರೇಮಿಗಳ ಪಾಲಿಗೆ ಉಪೇಂದ್ರ ರಿಯಲ್ ಸ್ಟಾರ್, ಸೂಪರ್ ಸ್ಟಾರ್. ಆದರೆ ಈಗ ಉಪೇಂದ್ರ, ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ‘ಆಂಧ್ರ ಕಿಂಗ್’ ಆಗುತ್ತಿದ್ದಾರೆ. ಉಪೇಂದ್ರ ಅವರ ಭಾರಿ ದೊಡ್ಡ ಕಟೌಟ್ ಅನ್ನು ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದೆ. ಉಪೇಂದ್ರ ಅವರ ಚಿತ್ರವಿರುವ ಶರ್ಟುಗಳನ್ನು ಧರಿಸಿ ಯುವಕರು ಜಯಘೋಷ ಹಾಕುತ್ತಿದ್ದಾರೆ. ಉಪೇಂದ್ರ ಸಿನಿಮಾದ ಮೊದಲ ದಿನದ ಮೊದಲ ಶೋ ನೋಡಲು ಭಾರಿ ಜನ ಸೇರಿದ್ದಾರೆ. ಯುವಕರಂತೂ ಸ್ಪರ್ಧೆಗೆ ಬಿದ್ದಂತೆ ಒಬ್ಬರ ಮೇಲೊಬ್ಬರು ಏರಿ ಉಪೇಂದ್ರ ಅವರ ಕಟೌಟ್ಗೆ ಹಾರ ಹಾಕುತ್ತಿದ್ದಾರೆ. ‘ಆಂಧ್ರ ಕಿಂಗ್’ಗೆ ಜೈ ಎಂದು ಜಯಕಾರ ಹಾಕುತ್ತಿದ್ದಾರೆ. ಆದರೆ ಇದೆಲ್ಲವೂ ನಿಜವಾಗಿ ಅಲ್ಲ ಬದಲಿಗೆ ಸಿನಿಮಾನಲ್ಲಿ.
ಹೌದು, ತೆಲುಗಿನ ಹೊಸ ಸಿನಿಮಾನಲ್ಲಿ ಉಪೇಂದ್ರ ನಟಿಸುತ್ತಿದ್ದು, ಸಿನಿಮಾನಲ್ಲಿ ಸೂಪರ್ ಸ್ಟಾರ್ ಸೂರ್ಯ ಕುಮಾರ್ ಪಾತ್ರದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ‘ಆಂಧ್ರ ಕಿಂಗ್’. ಸಿನಿಮಾದ ನಾಯಕ ಖ್ಯಾತ ನಟ ರಾಮ್ ಪೋತಿನೇನಿ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್ ಪ್ರಕಾರ, ‘ಆಂಧ್ರ ಕಿಂಗ್’ ಸಿನಿಮಾನಲ್ಲಿ ಉಪೇಂದ್ರ ಆಂಧ್ರ ಕಿಂಗ್ ಅಂದರೆ ಸೂಪರ್ ಸ್ಟಾರ್ ಸೂರ್ಯ ಕುಮಾರ್, ರಾಮ್ ಪೋತಿನೇನಿ ಆಂಧ್ರ ಕಿಂಗ್ನ ಅಪ್ಪಟ ಅಭಿಮಾನಿ. ಸ್ಟಾರ್ ನಟ ಮತ್ತು ಅಭಿಮಾನಿಯ ನಡುವೆ ನಡೆವ ಕತೆಯೇ ಈ ‘ಆಂಧ್ರ ಕಿಂಗ್’.
ಹೈದರಾಬಾದ್ನಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು, ನಟ ಉಪೇಂದ್ರ ಇಂದು ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸಿನಿಮಾ ಅನ್ನು ಮಹೇಶ್ ಬಾಬು ಪಿ ನಿರ್ದೇಶನ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ನಿರ್ಮಾಪಕರಾದ ನವೀನ್ ಯೆರಿನೇನಿ, ರವಿ ಶಂಕರ್ ಅವರುಗಳು ಮೈತ್ರಿ ಮೂವಿ ಮೇಕರ್ಸ್ ವತಿಯಿಂದ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಸಿನಿಮಾಕ್ಕೆ ವಿವೇಕ್ ಮೆರ್ವಿನ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ:Mukul Dev Death: ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿದ್ದ ಜನಪ್ರಿಯ ನಟ ಮುಕುಲ್ ದೇವ್ ನಿಧನ
ಉಪೇಂದ್ರ ಅವರನ್ನು ‘ಆಂಧ್ರ ಕಿಂಗ್’ ಎಂದು ಕರೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಸಣ್ಣ ಅಸಮಾಧಾನಗಳು ವ್ಯಕ್ತವಾಗಿವೆಯಾದರೂ ಅವು ದೊಡ್ಡ ಮಟ್ಟದಲ್ಲೇನೂ ಇಲ್ಲ. ಅಷ್ಟಕ್ಕೂ ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗ ಹೊಸದೇನೂ ಅಲ್ಲ. 1997 ರಲ್ಲಿಯೇ ಅವರು ತೆಲುಗು ಸಿನಿಮಾ ನಿರ್ದೇಶಿಸಿದ್ದರು. 1998 ರಲ್ಲಿ ‘ಕನ್ಯಾದಾನಂ’ ತೆಲುಗು ಸಿನಿಮಾನಲ್ಲಿ ನಾಯಕನಾಗಿ ನಟಿಸಿದ್ದರು. ಆ ನಂತರ ಸಹ ಹಲವು ತೆಲುಗು ಸಿನಿಮಾಗಳಲ್ಲಿ ನಾಯಕ ನಟನಾಗಿ ಉಪೇಂದ್ರ ನಟಿಸಿದರು. ಇತ್ತೀಚೆಗೆ ಕೆಲ ವರ್ಷಗಳಿಂದ ಪೋಷಕ ಪಾತ್ರ, ವಿಲನ್ ಪಾತ್ರಗಳಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಈಗ ‘ಆಂಧ್ರ ಕಿಂಗ್’ ಸಿನಿಮಾನಲ್ಲಿಯೂ ಅವರು ವಿಲನ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Sat, 24 May 25