ಕನ್ನಡ ಸಿನಿಮಾ ‘ಯೂ-ಟರ್ನ್’ ಸ್ಕ್ರೀಮಿಂಗ್ ನಿಲ್ಲಿಸಿದ ನೆಟ್ಫ್ಲಿಕ್ಸ್: ಕಾರಣವೇನು?
U Turn Kannada movie: ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದ ಮೊದಲ ಕನ್ನಡ ಸಿನಿಮಾ ‘ಯೂ ಟರ್ನ್’. ಆದರೆ ಈಗ ‘ಯೂ ಟರ್ನ್’ ಕನ್ನಡ ಸಿನಿಮಾವನ್ನು ನೆಟ್ಫ್ಲಿಕ್ಸ್ನಿಂದ ತೆಗೆದು ಹಾಕಲಾಗಿದೆ. ಈ ಬಗ್ಗೆ ‘ಯೂ ಟರ್ನ್’ ಸಿನಿಮಾದ ನಿರ್ದೇಶಕ ಪವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ‘ಯೂ ಟರ್ನ್’ ಸಿನಿಮಾವನ್ನು ತೆಗೆದು ಹಾಕಲು ಕಾರಣವೇನು?

ಈಗ ಒಟಿಟಿಗಳ (OTT) ಕಾಲ, ಒಟಿಟಿಗಳಿಗಾಗಿಯೇ ಎಷ್ಟೋ ಸಿನಿಮಾಗಳನ್ನು ಮಾಡಲಾಗುತ್ತಿದೆ. ಈಗಂತೂ ಬಿಡುಗಡೆ ಆದ ಪ್ರತಿ ಸಿನಿಮಾಗಳನ್ನು ಬಿಡುಗಡೆಗೆ ಮುಂಚೆಯೇ ಒಟಿಟಿಗೆ ಮಾರಾಟ ಮಾಡುತ್ತಿದೆ. ಆದರೆ ಒಟಿಟಿಗಳು ಕನ್ನಡ ಸಿನಿಮಾಗಳ ಬಗ್ಗೆ ಆಸಕ್ತಿ ತೋರುವುದಿಲ್ಲ ಎಂಬ ದೂರು ಸಹ ಇದೆ. ಇದೆಲ್ಲದರ ನಡುವೆ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಒಂದಾದ ‘ಯೂ ಟರ್ನ್’ ಅನ್ನು ನೆಟ್ಫ್ಲಿಕ್ಸ್ ತನ್ನ ವೇದಿಕೆಯಿಂದ ತೆಗೆದು ಹಾಕುತ್ತಿದೆ. ಅದಕ್ಕೆ ಕಾರಣವೂ ಇದೆ.
‘ಯೂ-ಟರ್ನ್’ ಸಿನಿಮಾದ ಸ್ಕ್ರೀಮಿಂಗ್ ಅನ್ನು ನೆಟ್ಫ್ಲಿಕ್ಸ್ ನಿಲ್ಲಿಸುತ್ತಿದ್ದು ಈ ವಿಷಯವನ್ನು ಸಿನಿಮಾದ ನಿರ್ದೇಶಕ ಪವನ್ ಅವರು ಹಂಚಿಕೊಂಡಿದ್ದಾರೆ. ಒಂಬತ್ತು ವರ್ಷಗಳಿಂದಲೂ ‘ಯೂ ಟರ್ನ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಂ ಆಗುತ್ತಿತ್ತು. ಆದರೆ ಈಗ ಸ್ಟ್ರೀಮಿಂಗ್ ನಿಲ್ಲಿಸಲಾಗುತ್ತಿದೆ. ಇದಕ್ಕೆ ಕಾರಣವೆಂದರೆ ಸಿನಿಮಾದ ಒಪ್ಪಂದ ಮುಗಿದಿದೆ. ಇದೇ ಕಾರಣಕ್ಕೆ ಸಿನಿಮಾದ ಸ್ಟ್ರೀಮಿಂಗ್ ಅನ್ನು ನಿಲ್ಲಿಸಲಾಗುತ್ತಿದೆ. 2016ರಲ್ಲಿ ನೆಟ್ಫ್ಲಿಕ್ಸ್ಗೆ ‘ಯೂ ಟರ್ನ್’ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ ಮಾಡಲಾಗಿತ್ತಂತೆ, ಆಗ ಒಂಬತ್ತು ವರ್ಷ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದ ಈಗ ಮುಗಿದಿರುವ ಕಾರಣ ಸಿನಿಮಾ ಅನ್ನು ತೆಗೆದು ಹಾಕಲಾಗಿದೆ.
ಇದನ್ನೂ ಓದಿ:‘ಗೇಮ್ ಚೇಂಜರ್’ಗೆ ಹೈಕೋರ್ಟ್ನಿಂದ ಹೊಡೆತ, ಯೂ ಟರ್ನ್ ಹೊಡೆದ ತೆಲಂಗಾಣ ಸರ್ಕಾರ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪವನ್, ‘ಯೂ ಟರ್ನ್’ ನೆಟ್ಫ್ಲಿಕ್ಸ್ಗೆ ಮಾರಾಟವಾದ ಮೊಟ್ಟ ಮೊದಲ ಕನ್ನಡ ಸಿನಿಮಾ. ಆಗೆಲ್ಲ ಸಿನಿಮಾದ ಎಲ್ಲ ಹಕ್ಕುಗಳನ್ನು ಯಾವುದೋ ಒಂದು ಸಂಸ್ಥೆಗೆ ಒಟ್ಟಿಗೆ ಮಾರಾಟ ಮಾಡುವ ರೂಢಿ ಇತ್ತು. ಇದರಿಂದ ನಿರ್ಮಾಪಕರಿಗೆ ಕಡಿಮೆ ಲಾಭ ಸಿಗುತ್ತಿತ್ತು. ಇದರ ಬಗ್ಗೆ ಅರಿವಿದ್ದ ನಾನು, ನಮ್ಮ ನಿರ್ಮಾಪಕರನ್ನು ಒಪ್ಪಿಸಿ ಸಿನಿಮಾದ ಹಕ್ಕುಗಳನ್ನು ಬೇರೆ ಬೇರೆ ಕಂಪೆನಿಗಳಿಗೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಗೆ ಮಾರಾಟ ಮಾಡಿದೆ. ಇದರಿಂದ ಬಹಳ ದೊಡ್ಡ ಲಾಭವೇ ಆಯ್ತು’ ಎಂದಿದ್ದಾರೆ ಪವನ್.
‘ಯೂ ಟರ್ನ್’ ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಿದ್ದರಿಂದ ವಿಶ್ವದ ಹಲವು ಮೂಲೆಗಳಲ್ಲಿ ಜನ ಸಿನಿಮಾ ನೋಡುವಂತಾಯ್ತು. ಇದಕ್ಕೆ ನೆಟ್ಫ್ಲಿಕ್ಸ್ಗೆ ಧನ್ಯವಾದ ಎಂದಿದ್ದಾರೆ ಪವನ್. ಅಂದಹಾಗೆ ‘ಯೂ ಟರ್ನ್’ ಅತಿ ಹೆಚ್ಚು ಭಾಷೆಗೆ ರೀಮೇಕ್ ಆದ ಭಾರತೀಯ ಸಿನಿಮಾಗಳಲ್ಲಿ ಒಂದು. ‘ಯೂ ಟರ್ನ್’ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ, ಫಿಲಿಫೀನೊ, ಬೆಂಗಾಲಿ ಭಾಷೆಗಳಿಗೆ ರೀಮೇಕ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




